ಅಪೂರ್ಣ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಮನವಿ

KannadaprabhaNewsNetwork |  
Published : Jan 24, 2024, 02:04 AM IST
ಹರಪನಹಳ್ಳಿ ತಾಲೂಕಿನ ಅರಸಿಕೇರಿಯ ನಾಡಕಚೇರಿ ಬಳಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಿಪಿಐ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  | Kannada Prabha

ಸಾರಾಂಶ

ರಸೀಕೇರಿಯ ಸಮುದಾಯ ಆರೋಗ್ಯ ಕೇಂದ್ರದಿಂದ ನಾಡಕಚೇರಿಯವರೆಗೆ ಜಾಥಾ ಮಾಡಿ ಪ್ರತಿಭಟನೆ ಮಾಡಿ ಬಹಿರಂಗ ಸಭೆ ನಡೆಸಿದರು.

ಹರಪನಹಳ್ಳಿ: ವಿವಿಧ ಕಾಮಗಾರಿಗಳು ಅಪೂರ್ಣವಾಗಿ ಸ್ಥಗಿತಗೊಂಡಿರುವುದನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಸಿಪಿಐ) ನೇತೃತ್ವದಲ್ಲಿ ತಾಲೂಕಿನ ಅರಸೀಕೇರಿಯಲ್ಲಿ ಕಾರ್ಯಕರ್ತರು ನಾಡಕಚೇರಿ ಬಳಿ ಪ್ರತಿಭಟನೆ ನಡೆಸಿ ಉಪತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.

ಅರಸೀಕೇರಿಯ ಸಮುದಾಯ ಆರೋಗ್ಯ ಕೇಂದ್ರದಿಂದ ನಾಡಕಚೇರಿಯವರೆಗೆ ಜಾಥಾ ಮಾಡಿ ಪ್ರತಿಭಟನೆ ಮಾಡಿ ಬಹಿರಂಗ ಸಭೆ ನಡೆಸಿದರು.

ಭಾರತ ಕಮ್ಯುನಿಸ್ಟ್ ಪಕ್ಷದ ತಾಲೂಕು ಕಾರ್ಯದರ್ಶಿ ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ, ಅರಸೀಕೇರಿ ಹೋಬಳಿಯಲ್ಲಿ ನೂತನವಾಗಿ ಹೊಸ ಬಸ್ ನಿಲ್ದಾಣ, ವಿದ್ಯುತ್ ಪ್ರಸರಣ ಘಟಕ, ರಸ್ತೆ ಆಗಲೀಕರಣ ಕಾಮಗಾರಿಗಳು ಮೂರು ವರ್ಷವಾದರೂ ಸಂಪೂರ್ಣವಾಗಿಲ್ಲ. ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕೂಡಲೇ ಕಾಮಗಾರಿಯನ್ನು ಪುನರಾರಂಭಿಸಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಆಸ್ಪತ್ರೆ, ನಾಡಕಚೇರಿಯಲ್ಲಿ ಇರುವ ಸಿಬ್ಬಂದಿ ಕೊರತೆ ನೀಗಿಸಬೇಕು. ಅರಸೀಕೇರಿ ಹೋಬಳಿಯಲ್ಲಿ ಅತಿ ಹೆಚ್ಚು ಬಡವರಿರುವುದರಿಂದ ಜನರಿಗೆ ಆಶ್ರಯ ಮನೆಗಳು ಬಂದಿಲ್ಲ. ರಾಜಕಾರಣಿಗಳು ಈ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಹರಪನಹಳ್ಳಿ ಶಾಸಕಿ ಲತಾ ಅವರು ಆಶ್ರಯ ಮನೆಗಳನ್ನು ಮಂಜೂರು ಮಾಡಿಸಿದ್ದಾರೆ. ಆದರೆ ಜಗಳೂರು ಶಾಸಕ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು 7 ಪಂಚಾಯಿತಿಗೆ ಆಶ್ರಯ ಮನೆಗಳನ್ನು ಮಂಜೂರು ಮಾಡಿಸಿಲ್ಲ. ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ ಎಂದು ಆರೋಪಿಸಿದರು.

ಕೂಡಲೇ ಕಾಮಗಾರಿಗಳನ್ನು ಸಂಪೂರ್ಣಗೊಳಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದೆಂದು ತಿಳಿಸಿದರು.

ಅಖಿಲ ಭಾರತ ಯುವಜನ ಫೆಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಮಾತನಾಡಿ, ಬರಗಾಲಕ್ಕೆ ತುತ್ತಾದ ರೈತರ ಬೆಳೆಹಾನಿ ಪರಿಹಾರ, ಅಂಗನವಾಡಿ ಕಾರ್ಯಕರ್ತರಿಗೆ ಸಂಬಳ ಹೆಚ್ಚಿಗೆ ಹಾಗೂ ಪಿಂಚಣಿ ಘೋಷಣೆ ಮಾಡಬೇಕು. ವಿದ್ಯಾರ್ಥಿಗಳಿಗೆ ಎಸ್ಸಿ, ಎಸ್ಟಿ, ಬಿಸಿಎಂ, ಮೆಟ್ರಿಕ್ ಪೂರ್ವ ಮತ್ತು ನಂತರದ ಬಾಲಕಿಯರ ಹಾಸ್ಟೆಲ್‌ಗಳನ್ನು ಪ್ರಾರಂಭಿಸಬೇಕು. ಕಾರ್ಮಿಕರಿಗೆ, ಮಹಿಳೆಯರಿಗೆ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಬೂದಿಹಾಳು ಸಿದ್ದೇಶ್ ಮಾತನಾಡಿದರು. ಉಪತಹಸೀಲ್ದಾರ್ ಶಿವಾನಂದ್ ಪಾಟೀಲ್ ಮಾತನಾಡಿ, ತಹಸೀಲ್ದಾರ್ ಆದೇಶದಂತೆ ಜ. 30ರಂದು ವಿವಿಧ ಇಲಾಖೆಯ ಅಧಿಕಾರಿಗಳು, ಸಂಘಟನೆಗಳು, ರೈತ ಮುಖಂಡರನ್ನು ಸಭೆ ಕರೆದು ಕೂಡಲೇ ಸಮಸ್ಯೆಗಳನ್ನು ಬಗೆಹರಿಸಲಾಗುವುದೆಂದರು.

ಬೆಸ್ಕಾಂ ಎಇಇ ವಿರೂಪಾಕ್ಷಪ್ಪ, ಕೆಎಸ್ಆರ್‌ಟಿಸಿ ವ್ಯವಸ್ಥಾಪಕಿ ಮಂಜುಳಾ, ಆರ್.ಐ. ನನ್ಯಾಸಾಹೇಬ್, ಹೊಸಹಳ್ಳಿ ಮಲ್ಲೇಶ್, ಬಳಿಗಾನೂರು ಕೊಟ್ರೇಶ್, ಹರಿಯಮ್ಮನಹಳ್ಳಿ ಬಸವರಾಜ್, ಕಮ್ಮತ್ತಹಳ್ಳಿ ಕರಿಬಸಪ್ಪ, ಸತ್ತೂರು ಮಹದೇವಪ್ಪ, ರಮೇಶ್, ಬಸಮ್ಮ, ನಿವೇದಿತಾ, ನಿರ್ಮಲ, ರಂಗಪ್ಪ, ಶರತ್‌ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ