ವಿವಿಧ ಸಂಘಟನೆಗಳಿಂದ ಜಿಲ್ಲಾಧಿಕಾರಿಗಳಿಗೆ ಮನವಿ । ಹೊಸ ಕಟ್ಟಡಕ್ಕೆ ಹೋಗಿ ಬರಲು ಸಾರ್ವಜನಿಕರಿಗೆ ತೊದರೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲಾ ನ್ಯಾಯಾಲಯದ ಹೊಸ ಕಟ್ಟಡದ ಸಂಕೀರ್ಣ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಹಾಲಿ ಕಟ್ಟಡವನ್ನೇ ಆಧುನೀಕರಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಬಿಎಸ್ಪಿ ಹಾಗೂ ಕನ್ನಡಸೇನೆ ಮುಖಂಡರು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಬಳಿಕ ಮಾತನಾಡಿದ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ನಗರದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಹೊಸ ನ್ಯಾಯಾಲಯದ ಕಟ್ಟಡ ಪ್ರಾರಂಭಗೊಂಡರೆ ಪ್ರತಿನಿತ್ಯ ಆಗಮಿಸುವ ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುವ ಜೊತೆಗೆ ದುಬಾರಿ ಬೆಲೆಕೊಟ್ಟು ಸಂಚರಿಸಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಹೇಳಿದರು.ಪ್ರಸ್ತುತ ನ್ಯಾಯಾಲಯದ ಕಟ್ಟಡ ನಗರದ ಹೃದಯ ಭಾಗದಲ್ಲಿದೆ. ಜನಸಾಮಾನ್ಯರಿಗೆ ಮತ್ತು ಕಕ್ಷಿದಾರರಿಗೆ ಓಡಾಟಕ್ಕೆ ಬಹಳಷ್ಟು ಸಮೀಪವಿರುವ ಜೊತೆಗೆ ಗ್ರಾಮೀಣ ಪ್ರದೇಶಗಳಿಂದ ಆಗಮಿಸುವ ಜನಸಾಮಾನ್ಯರಿಗೆ ಬಸ್ ಸೌಲಭ್ಯ ಸಮರ್ಪಕವಾಗಿದೆ. ನ್ಯಾಯಾಲಯದಲ್ಲಿ ಸ್ಥಳಾವಕಾಶದ ಕೊರತೆಯಿಲ್ಲದಿರುವ ಹಿನ್ನೆಲೆಯಲ್ಲಿ ಹಳೇ ಕಟ್ಟಡವನ್ನೆ ನವೀಕರಣಗೊಳಿಸಬೇಕು ಎಂದರು.ನಗರದಿಂದ 7 ಕಿ.ಮೀ. ಅಂತರದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ನಿರ್ಮಿಸುತ್ತಿರುವ ಕ್ರಮ ಸರಿಯಲ್ಲ. ಹಾಲಿ ಕಟ್ಟಡದಲ್ಲಿ ಸ್ಥಳಾವಕಾಶ ಕೊರತೆಯಿದ್ದರೆ ಪಕ್ಕದಲ್ಲಿರುವ ಲೋಕೋಪಯೋಗಿ ಇಲಾಖೆ ಕ್ವಾರ್ಟಸ್ ನೆಲಸಮಗೊಳಿಸಿ ಹೊಸದಾಗಿ ಕಟ್ಟಡ ನಿರ್ಮಿಸಬಹುದು ಎಂದು ಸಲಹೆ ನೀಡಿದರು.ಪ್ರಸ್ತುತ ಹಾಲಿ ಕಟ್ಟಡಕ್ಕೆ ತೆರಳಲು ನಾಲ್ಕೈದು ಮಾರ್ಗಗಳ ಸೌಲಭ್ಯವಿದೆ. ಆದರೆ, ಎಐಟಿ ಕಾಲೇಜು ಹಿಂಭಾಗದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡಕ್ಕೆ ಕೇವಲ ಒಂದೇ ರಸ್ತೆಯಿರುವ ಕಾರಣ ಬೇರೆ ಕಡೆಯಿಂದ ತೆರಳಲು ಮಾರ್ಗ ವಿಲ್ಲ. ಹೊಸ ಕಟ್ಟಡದಲ್ಲಿ ಕಲಾಪ ನಡೆದರೆ ಬಡವರು, ರೈತರು ಹಾಗೂ ಜನಸಾಮಾನ್ಯರ ಪಾಲಿಗೆ ಸಂಕಷ್ಟ ಎದುರಾಗಲಿದೆ ಎಂದು ತಿಳಿಸಿದರು.ಹೀಗಾಗಿ ಹೊಸದಾಗಿ ನಿರ್ಮಾಣವಾಗುತ್ತಿರುವ ಕಟ್ಟಡವನ್ನು ವಸತಿ ಶಾಲೆ ಅಥವಾ ಕಾಲೇಜುಗಳಿಗೆ ಬಿಟ್ಟುಕೊಡಬೇಕು. ಹಾಲಿ ನ್ಯಾಯಾಲಯದ ಸಂಕೀರ್ಣವನ್ನು ಆಧುನೀಕರಣಗೊಳಿಸಿ ಕಲಾಪಗಳನ್ನು ನಡೆಯುವಂತೆ ಕ್ರಮ ಕೈಗೊಳ್ಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಕೂಡಲೇ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಎಸ್ಪಿ ಸಂಯೋಜಕ ಗಂಗಾಧರ್, ಅಸೆಂಬ್ಲಿ ಉಪಾಧ್ಯಕ್ಷ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಆರ್. ವಸಂತ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ, ಆಟೋ ಘಟಕದ ಅಧ್ಯಕ್ಷ ಜಯಪ್ರಕಾಶ್, ಮುಖಂಡರಾದ ಕಳವಾಸೆ ರವಿ, ಹರೀಶ್ ಇದ್ದರು.ಪೋಟೋ ಫೈಲ್ ನೇಮ್ 31 ಕೆಸಿಕೆಎಂ 1ಜಿಲ್ಲಾ ನ್ಯಾಯಾಲಯದ ಹೊಸ ಕಟ್ಟಡ ಕಾಮಗಾರಿಯನ್ನು ಸ್ಥಗಿತಗೊಳಿಸಿ, ಹಾಲಿ ಕಟ್ಟಡವನ್ನೇ ಆಧುನೀಕರಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿ ಬಿಎಸ್ಪಿ ಹಾಗೂ ಕನ್ನಡಸೇನೆ ಮುಖಂಡರು ಜಿಲ್ಲಾಧಿಕಾರಿ ಸಿ.ಎನ್. ಮೀನಾ ನಾಗರಾಜ್ ಗೆ ಶುಕ್ರವಾರ ಮನವಿ ಸಲ್ಲಿಸಿದರು.