ರೈತರ ಜಮೀನಿಗೆ ನೀರು ನೀಡಲು ₹150 ಕೋಟಿಗೆ ಮನವಿ: ಸಂಸದೆ ಡಾ.ಪ್ರಭಾ

KannadaprabhaNewsNetwork | Published : Mar 2, 2025 1:19 AM

ಸಾರಾಂಶ

ಶೌಚಾಲಯ, ಕಾಲುವೆಗಳ ದುರಸ್ತಿ, ವಿದ್ಯುತ್, ಸ್ವಚ್ಛತೆ, ಕಸ ವಿಲೇವಾರಿಗಾಗಿ ಹರಿಹರ ತಾಲೂಕಿಗೆ ೬೫ ಲಕ್ಷ ರು. ಸಂಸದರ ಅನುದಾನವನ್ನು ನೀಡಲಾಗಿದೆ. ಕೊನೇ ಭಾಗದ ಜಮೀನುಗಳಿಗೆ ನೀರು ಹರಿಸಲು 150 ಕೋಟಿ ರು. ಅನುದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್‌ ಮನವಿ ಮಾಡಿದ್ದಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಕೊನೇ ಭಾಗದ ಜಮೀನುಗಳ ನೀರಿಗೆ ಅನುದಾನಕ್ಕೆ ಸಿಎಂಗೆ ಬೇಡಿಕೆ । ಮೂಲಸೌಕರ್ಯಕ್ಕಾಗಿ ಹರಿಹರಕ್ಕೆ ₹65 ಲಕ್ಷ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಶೌಚಾಲಯ, ಕಾಲುವೆಗಳ ದುರಸ್ತಿ, ವಿದ್ಯುತ್, ಸ್ವಚ್ಛತೆ, ಕಸ ವಿಲೇವಾರಿಗಾಗಿ ಹರಿಹರ ತಾಲೂಕಿಗೆ ೬೫ ಲಕ್ಷ ರು. ಸಂಸದರ ಅನುದಾನವನ್ನು ನೀಡಲಾಗಿದೆ. ಕೊನೇ ಭಾಗದ ಜಮೀನುಗಳಿಗೆ ನೀರು ಹರಿಸಲು 150 ಕೋಟಿ ರು. ಅನುದಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್. ಮಲ್ಲಿಕಾರ್ಜುನ್‌ ಮನವಿ ಮಾಡಿದ್ದಾರೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.

ಸಮೀಪದ ಕುಂಬಳೂರಿನ ಗ್ರಾಮ ಪಂಚಾಯಿತಿ ಕಟ್ಟಡದ ಸಭಾಂಗಣ ಉದ್ಘಾಟನೆ ಶನಿವಾರ ನೆರವೇರಿಸಿ, ಕುಂಬಳೂರಿನ ಸಮುದಾಯ ಭವನ, ಹೈಮಾಸ್ಕ್ ದೀಪ ಇತರೆ ಅಭಿವೃಧ್ದಿಗೆ ೧೫ ಲಕ್ಷ ರು. ನೀಡಲಾಗಿದೆ. ಗ್ರಾಮ ಪಂಚಾಯತಿಯಲ್ಲಿ ಒಂದು ಕೊಠಡಿಯನ್ನು ಗ್ರಂಥಾಲಯವಾಗಿ ರೂಪಿಸಿಕೊಂಡು ಜ್ಞಾನ ಹೆಚ್ಚು ಮಾಡಿಕೊಳ್ಳಿ ಎಂದು ಕರೆ ನೀಡಿದ ಡಾ ಪ್ರಭಾ, ಅಧಿಕಾರಿಗಳು ಮತ್ತು ಪಂಚಾಯಿತಿ ಸದಸ್ಯರು ಜೋಡೆತ್ತುಗಳಂತೆ ಕೆಲಸ ಮಾಡಿ ವಿವಿಧ ಯೋಜನೆಗಳ ಫಲಾನುಭವಿಗಳ ಮನೆಗೆ ಭೇಟಿ ನೀಡಿ ಅವರ ಜತೆ ಬೆರೆತು ಸಹಕಾರ ಪಡೆಯಿರಿ ಎಂದು ಕರೆ ನೀಡಿದರು.

ಭಾರಿ ವಾಹನಗಳ ಸಂಖ್ಯೆ ಹೆಚ್ಚಾದ ಕಾರಣ ರಾಜ್ಯ ಹೆದ್ದಾರಿ ೨೫ ಅನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತನೆ ಮಾಡಲು ಕೇಂದ್ರ ಲೋಕೋಪಯೋಗಿ ಸಚಿವ ನಿತಿನ್ ಗಡ್ಕರಿಗೆ ಮನವಿ ಮಾಡಿದ್ದು ಸಕಾರಾತ್ಮಕವಾಗಿ ಸ್ಪಂದನೆ ನೀಡಿದ್ದಾರೆ ಎಂದರು. ಮಹಿಳೆಯರ ಆರೋಗ್ಯ ಸುಧಾರಣೆಗೆ ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಮಹಿಳೆಯರ ಸಭೆ ನಡೆಸಿ ಎಂದು ಪಂಚಾಯಿತಿ ಅಭಿವೃಧ್ದಿ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಬಿ.ಪಿ ಹರೀಶ್ ಮಾತನಾಡಿ, ಸರ್ಕಾರ ಕಳದ ವರ್ಷ ತಲಾ ಗ್ರಾಪಂಗಳಿಗೆ ೨೦ ಲಕ್ಷ ರು. ನೀಡಿದ್ದು ಪ್ರಸ್ತುತ ಹೊಸ ಕಟ್ಟಡಗಳಾಗಿ ಸಂತಸ ತಂದಿವೆ, ಆದರೂ ರಾಜ್ಯದಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ವಸತಿ ಫಲಾನುಭವಿಗಳಿಗೆ ಮನೆಗಳ ಹಂಚಿಕೆ ಮಾಡದೇ ಜನಪ್ರತಿನಿಧಿಗಳು ಕೊರಗುತ್ತಿದ್ದಾರೆ ,ಸಂಸದರಾದ ಡಾ. ಪ್ರಭಾರವರು ಹರಿಹರ ತಾಲೂಕಿಗೆ ಮನೆಗಳ ಹಂಚಿಕೆ ಬಗ್ಗೆ ಸಚಿವರ ಮೂಲಕ ಒತ್ತಡ ಸರ್ಕಾರಕ್ಕೆ ಒತ್ತಡ ಹಾಕಿಸಲು ಸಲಹೆ ನೀಡಿದರು.

ಉಪಾಧ್ಯಕ್ಷ ಜಿಎಂ ಹರೀಶ್ ಮಾತನಾಡಿ, ಕಳೆದ ಐದು ವರ್ಷಗಳಿಂದ ಪಂಚಾಯತಿಗೆ ವಿವಿಧ ಯೋಜನೆಗಳ ಮನೆಗಳನ್ನು ಸರ್ಕಾರ ಹಂಚಿಕೆ ಮಾಡಿಲ್ಲ ಎಂದು ಶಾಸಕರು, ಸಂಸದರ ಗಮನಕ್ಕೆ ತಂದರು.

ಗ್ರಾಪಂ ಅಧ್ಯಕ್ಷೆ ಉಮಾದೇವಿ ಶಿವರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಎಚ್. ಎಂ.ಸದಾನಂದ, ಗೌರವ ಡಾಕ್ಟರೇಟ್ ಪ್ರಶಸ್ತಿ ಪಡೆದ ಕೆ ಭೀಮಪ್ಪರನ್ನು ಸಂಸದೆ ಡಾ.ಪ್ರಭಾ ಗೌರವಿಸಿದರು. ವಿವಿಧ ಗ್ರಾಮಗಳ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಸಕರು, ಸಂಸದರಿಗೆ ಬೇಡಿಕೆಗಳ ಮನವಿ ಸಲ್ಲಿಸಿದರು.

ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಕುಮಾರ್, ಮುಖಂಡ ಎನ್ ಶ್ರೀನಿವಾಸ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಮತಾ, ಅಭಿವೃಧ್ದಿ ಅಧಿಕಾರಿ ನರಸಿಂಹಮೂರ್ತಿ, ಸದಸ್ಯ ಕೆ.ನಾಗೇಂದ್ರಪ್ಪ, ವೈ ವಿರೂಪಾಕ್ಷಪ್ಪ, ಎಂ.ವಾಸು, ಗ್ರಾಮದ ಅಭಿವೃಧ್ದಿ ಕುರಿತು ಸಂಸದರಲ್ಲಿ ಚರ್ಚಿಸಿದರು. ಕುಂಬಳೂರು, ನಿಟ್ಟೂರು, ವಿನಾಯಕನಗರದ ಸರ್ವ ಗ್ರಾಪಂ ಸದಸ್ಯರು ಇದ್ದರು.

Share this article