ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ರಾಜ್ಯ ಎಲ್ಲ ವಸತಿ ಶಾಲೆಗಳಲ್ಲಿನ ಹೆಣ್ಣುಮಕ್ಕಳಿಗೆ ಸ್ವಯಂ ರಕ್ಷಣಾ ಕೌಶಲ್ಯ ಕರಾಟೆ ತರಬೇತಿ ಪುನಾರಂಭಿಸುವ ಮೂಲಕ ಕರಾಟೆ ಶಿಕ್ಷಕ ಜೀವನಕ್ಕೆ ಅನುಕೂಲ ಮಾಡಿಕೊಡಲು ಸರ್ಕಾರಕ್ಕೆ ಒತ್ತಾಯಿಸುವಂತೆ ಕೋರಿ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದ ರಾಜ್ಯ ವಕ್ತಾರ ಶಿವಕುಮಾರ ಶಾರದಳ್ಳಿ ಹಾಗೂ ಮೌನೇಶ ಕೊಪ್ಪಳ ಅವರು ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರಿಗೆ ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ವಿವರಿಸಿದ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದವರು, ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ, ಮಾನಭಂಗ ಮುಂತಾದ ಅಮಾನವೀಯ ದೌರ್ಜನ್ಯಗಳನ್ನು ತಡೆಗಟ್ಟಲು ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಹೆಣ್ಣು ಮಕ್ಕಳಿಗೆ ಸೂಕ್ತ ತರಬೇತಿ ನೀಡಬೇಕೆಂದು ತೀರ್ಮಾನಿಸಿ ರಾಜ್ಯದಲ್ಲಿನ ಎಲ್ಲ ಆರ್.ಎಂ.ಎಸ್.ಎ ಶಾಲೆಗಳಲ್ಲಿನ ಹೆಣ್ಣು ಮಕ್ಕಳಿಗೆ ಮಾತ್ರ ಕರಾಟೆ ತರಬೇತಿ ಆರಂಭಿಸಿ ಹೆಣ್ಣು ಮಕ್ಕಳಿಗೆ ಧೈರ್ಯ ತುಂಬಿದ್ದರು. ಮುಂದೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಾಜ್ಯದ ಕಿತ್ತೂರು ರಾಣಿಚನ್ನಮ್ಮ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಮತ್ತು ಮೆಟ್ರಿಕ್ ನಂತರದ ಮತ್ತು ಮೆಟ್ರಿಕ್ ಪೂರ್ವದ ವಸತಿ ಶಾಲೆಗಳಿಗೂ ಅದನ್ನು ವಿಸ್ತರಿಸಿ, ಹೆಣ್ಣು ಮಕ್ಕಳಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಿದ್ದರು. ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಹೆಣ್ಣು ಮಕ್ಕಳ ಕರಾಟೆ ಪ್ರದರ್ಶನವನ್ನು ಏರ್ಪಡಿಸಿದ್ದು ಎಲ್ಲರೂ ಮೆಚ್ಚಿಕೊಂಡಿದ್ದರು. ಸದ್ಯ ಸದರಿ ತರಬೇತಿ ಕಾರಣಾಂತರಗಳಿಂದ ನಿಂತು ಹೋಗಿದೆ. ತಮ್ಮಿಂದ ಆರಂಭವಾದ ಈ ಯೋಜನೆಯು ಈಗ ಪುನಃ ತಮ್ಮಿಂದಲೇ ಪುನಾರಂಭಿಸಿ ಹೆಣ್ಣು ಮಕ್ಕಳಿಗೆ ಧೈರ್ಯ ನೀಡುವುದಲ್ಲದೇ ನಮ್ಮಂತಹ ಬಡ ನಿರುದ್ಯೋಗಿ ಕರಾಟೆ ತರಬೇತಿದಾರರ ಜೀವನ ಮತ್ತು ಕುಟುಂಬಗಳ ನೆಮ್ಮದಿಯ ಜೀವನಕ್ಕೆ ಅನುಕೂಲ ಮಾಡಿಕೊಡಬೇಕು. ರಾಜ್ಯದ ಎಲ್ಲ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ ಪ್ರೌಢಶಾಲೆಗಳಲ್ಲಿ ಕರಾಟೆ ತರಬೇತಿಯನ್ನು ಕಡ್ಡಾಯಗೊಳಿಸಲು ಹೆಚ್ಚಿನ ಮಹತ್ವ ನೀಡಿ ಪುನಾರಂಭಿಸಬೇಕು ಎಂದು ಸದನದಲ್ಲಿ ಸರ್ಕಾರದ ಗಮನ ಸೆಳೆಯಬೇಕು ಎಂದು ಕೋರಿದರು.ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಕರಾಟೆ ಸಂಘದ ಶಿಕ್ಷಕರ ಮನವಿಗೆ ಸ್ಪಂದಿಸಿ ಪ್ರೌಢ ಮತ್ತು ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಕರೆ ಮಾಡಿ ಮಾತನಾಡಿ, ರಾಜ್ಯದ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಹಾಗೂ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿನಿಯರ ಸ್ವಯಂ ಆತ್ಮರಕ್ಷಣೆಗೆ ಕರಾಟೆ ತರಬೇತಿ ಅತ್ಯವಶ್ಯಕವಾಗಿದ್ದು, ಕಾರಣ ಈ ಯೋಜನೆ ಮುಂದುವರೆಸಲು ಯೋಗ್ಯ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.ಈ ವೇಳೆ ಕರ್ನಾಟಕ ಮಾಧ್ಯಮ ಒಕ್ಕೂಟದ ರಾಜ್ಯಾಧ್ಯಕ್ಷ ನಾರಾಯಣ ಮಾಯಾಚಾರಿ, ಒಕ್ಕೂಟದ. ಪ್ರಧಾನ ಕಾರ್ಯದರ್ಶಿ ಶ್ರೀಪಾದ ಜಂಬಗಿ, ಕರಾಟೆ ಸಂಘದ ವಕ್ತಾರರಾದ ಶಿವಕುಮಾರ ಶಾರದಳ್ಳಿ, ಮೌನೇಶ ಕೊಪ್ಪಳ, ಪತ್ರಕರ್ತರಾದ ಸಚಿನ ಚಲವಾದಿ, ಯಲ್ಲಾಲಿಂಗ ಪೂಜಾರಿ ಇದ್ದರು.
ರಾಜ್ಯದ ಸರ್ಕಾರಿ ಪ್ರೌಢ ಮತ್ತು ಪ್ರಾಥಮಿಕ ಹಾಗೂ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿನಿಯರ ಸ್ವಯಂ ಆತ್ಮರಕ್ಷಣೆಗೆ ಕರಾಟೆ ತರಬೇತಿ ಅತ್ಯವಶ್ಯಕವಾಗಿದೆ ಹಾಗೂ ಈ ಯೋಜನೆ ಮುಂದುವರೆಸಲು ಯೋಗ್ಯವಾಗಿದೆ. ಅಗತ್ಯ ಕ್ರಮಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಅವರಿಗೆ ಗಮನಕ್ಕೆ ತಂದು ಯೋಜನೆ ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.-ಸಿ.ಎಸ್.ನಾಡಗೌಡ(ಅಪ್ಪಾಜಿ),
ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷರು.