ಆಸ್ತಿ ಮೇಲಿನ ವಕ್ಫ್ ಹೆಸರು ತೆಗೆಯುವಂತೆ ರೈತರ ಮನವಿ

KannadaprabhaNewsNetwork |  
Published : Oct 31, 2024, 01:02 AM IST
ಪೊಟೋ-ಲಕ್ಷ್ಮೇಶ್ವರ ತಾಲೂಕಿನ ರೈತರ ಪಹಣಿಯಲ್ಲಿ ವಕ್ಫ್ ಎಂದೂ ದಾಖಲಾಗಿರುವುದನ್ನು ಖಂಡಿಸಿ ರೈತರು ತಹಸೀಲ್ದಾರ್ ವಾಸುದೇವ ಸ್ವಾನಿ ಅವರಿಗೆ ಮನವಿ ಸಲ್ಲಿಸಿದರು.  | Kannada Prabha

ಸಾರಾಂಶ

ಲಕ್ಷ್ಮೇಶ್ವರ ತಾಲೂಕಿನ ಯಾವುದೇ ರೈತರಿಗೆ ವಕ್ಫ್ ಆಸ್ತಿಯ ಕುರಿತು ನೋಟಿಸ್‌ ನೀಡಿಲ್ಲ

ಲಕ್ಷ್ಮೇಶ್ವರ: ತಲೆ ತಲಾಂತರದಿಂದ ಉಳುಮೆ ಮಾಡುತ್ತಿರುವ ನಮ್ಮ ಜಮೀನುಗಳ ಪಹಣಿಯಲ್ಲಿ ವಕ್ಫ್ ಹೆಸರು ದಾಖಲಾಗಿದೆ. ಕಾಂಗ್ರೆಸ್ ಸರ್ಕಾರ ಒಂದು ಧರ್ಮವನ್ನು ಓಲೈಸುವ ರಾಜಕಾರಣ ಮಾಡುತ್ತಿರುವುದು ಖಂಡನೀಯ. ಕೂಡಲೆ ಪಹಣಿಯಲ್ಲಿನ ವಕ್ಫ್ ಹೆಸರು ಕಡಿಮೆ ಮಾಡಿ ನಮ್ಮ ಹೆಸರನ್ನು ದಾಖಲು ಮಾಡಿಕೊಡುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಲಕ್ಷ್ಮೇಶ್ವರ ತಾಲೂಕಿನ ರೈತರು ಮನವಿ ಮಾಡಿದರು.

ಬುಧವಾರ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಆಗಮಿಸಿದ ತಾಲೂಕಿನ ರೈತರು ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಮನವಿ ನೀಡಿದರು.

ರೈತ ಹೋರಾಟಗಾರ ಶಿವಣ್ಣ ಕಟಗಿ ಮಾತನಾಡಿ, ಕಳೆದ ಮೂರು ತಲೆಮಾರುಗಳಿಂದ ನಮ್ಮ ಹಿರಿಯರು ಪಟ್ಟಣದ ದೇಸಾಯಿ ಬಣದ ಸರ್ವೇ ನಂ.256ರಲ್ಲಿ ಉಳುಮೆ ಮಾಡುತ್ತಿದ್ದಾರೆ. ಆದರೆ ಕಳೆದ 5-6 ವರ್ಷಗಳಿಂದ ಮೋತಿ ಮಸ್ಜೀದ್ ಸುನ್ನಿ ವಕ್ಫ್ ಆಸ್ತಿ ಎಂದು ದಾಖಲು ಆಗಿರುವುದು ಕಂಡು ಬರುತ್ತಿದೆ. ವಕ್ಫ್ ಆಸ್ತಿಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲದಿದ್ದರೂ ನಮ್ಮ ಆಸ್ತಿಯ ಪಹಣಿಯಲ್ಲಿ ವಕ್ಫ್ ಎಂದು ನಮೂದು ಆಗಿದೆ. ಪಟ್ಟಣದ ಗಾಂವಠಾಣ ಜಾಗದಲ್ಲಿ ವಕ್ಫ್ ಆಸ್ತಿ ಎಂದು ನಮೂದು ಆಗಿದೆ. ಸರ್ಕಾರದ ಆಸ್ತಿಯನ್ನೂ ವಕ್ಫ್ ಸಮಿತಿ ಬಿಟ್ಟಿಲ್ಲ. ಲಕ್ಷ್ಮೇಶ್ವರ ತಾಲೂಕಿನಲ್ಲಿ ನೂರಾರು ಎಕರೆ ಜಮೀನುಗಳ ಖಾತೆಯಲ್ಲಿ ವಕ್ಫ್ ಎಂದ ದಾಖಲಾಗಿರುವುದು ರೈತರ ನಿದ್ದೆಗೆಡೆಸಿದೆ. ಆದ್ದರಿಂದ ಸರ್ಕಾರ ನಮ್ಮ ಆಸ್ತಿಯಲ್ಲಿನ ದಾಖಲು ಆಗಿರುವ ವಕ್ಫ್ ಹೆಸರನ್ನು ಕಡಿಮೆ ಮಾಡುವ ಮೂಲಕ ರೈತರ ನೆಮ್ಮದಿ ನೀಡುವ ಕಾರ್ಯ ಮಾಡಬೇಕು. ಇಲ್ಲವಾದಲ್ಲಿ ತಾಲೂಕಿನ ರೈತರೊಂದಿಗೆ ಸೇರಿಕೊಂಡು ಧರಣಿ ಮಾಡಲಾಗುವುದು ಎಂದು ಹೇಳಿದರು.

ಈ ವೇಳೆ ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿ, ಲಕ್ಷ್ಮೇಶ್ವರ ತಾಲೂಕಿನ ಯಾವುದೇ ರೈತರಿಗೆ ವಕ್ಫ್ ಆಸ್ತಿಯ ಕುರಿತು ನೋಟಿಸ್‌ ನೀಡಿಲ್ಲ. ಸರ್ಕಾರದ ನಿರ್ದೇಶನದಂತೆ ಮುಂದಿನ ಆದೇಶದ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳಲಾಗುವುದು ಹಾಗೂ ಜಿಲ್ಲಾಧಿಕಾರಿ ಗಮನಕ್ಕೆ ಈ ವಿಷಯ ತರುವ ಕಾರ್ಯ ಮಾಡುತ್ತೇವೆ ಎಂದು ಹೇಳಿದರು.

ಪ್ರಕಾಶ ಹುಬ್ಬಳ್ಳಿ, ಭರಮಣ್ಣ ರೊಟ್ಟಿಗವಾಡ, ಬಸವರಾಜ ಗೋಡಿ, ದ್ಯಾಮಣ್ಣ ಕಮತದ, ರವಿ ಅಂದಲಗಿ, ನಾಗಪ್ಪ ಓಂಕಾರಿ, ನಾಗಪ್ಪ ಪಾಣಿಗಟ್ಟಿ, ಎಸ್.ಜಿ. ಮಜ್ಜಿಗುಡ್ಡ, ವಿ.ಎಸ್. ಬೆಲ್ಲದ ಇದ್ದರು.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!