ಕನ್ನಡಪ್ರಭ ವಾರ್ತೆ ಗುಡಿಬಂಡೆ
ತಾಲೂಕಿನಲ್ಲಿ ಕುಶಾವತಿ ನದಿ ಹರಿಯುತ್ತಿದ್ದು, ಈ ನದಿನೀರು ಹರಿಯುವ ಅನೇಕ ಕಾಲುವೆಗಳು ಒತ್ತುವರಿಯಾಗಿವೆ. ಇದರಿಂದಾಗಿ ನೀರು ವ್ಯರ್ಥವಾಗಿ ಹರಿಯುತ್ತಿದೆ. ಅದರ ಬದಲು ರಾಜಕಾಲುವೆಯ ಒತ್ತುವರಿ ತೆರವುಗೊಳಿಸಿದರೆ ಆ ನೀರು ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಈ ಕುರಿತು ಕ್ರಮವಹಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ನುಲಿಗುಂಬ ಸೇರಿ ಹಲವು ಗ್ರಾಮಸ್ಥರು ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ನುಲಿಗುಂಬ ಗ್ರಾಮಸ್ಥ ಈಶ್ವರರೆಡ್ಡಿ ಮಾತನಾಡಿ, ನುಲಿಗುಂಬ, ಯರಹಳ್ಳಿ, ಗುಂಡ್ಲಹಳ್ಳಿ, ನಲ್ಲಗೊಂಡಯ್ಯಗಾರಹಳ್ಳಿ, ಪುಲಸಾನಿವೊಡ್ಡು, ಹಂಪಸಂದ್ರ, ಬೆಣ್ಣೆಪರ್ತಿ ಸೇರಿದಂತೆ ಹಲವು ಗ್ರಾಮಗಳ ರೈತರಿಗೆ ಕುಶಾವತಿ ನದಿ ನೀರಿನಿಂದ ತುಂಬಾ ಅನುಕೂಲವಾಗಲಿದೆ. ಜೊತೆಗೆ ಕುಶಾವತಿ ನದಿಯಿಂದ ಸುಮಾರು 4 ಕೆರೆಗಳಿಗೆ ನೀರು ತುಂಬಿಸಲು ರಾಜಕಾಲುವೆ ಸಹ ಇದೆ. ಆದರೆ ರಾಜಕಾಲುವೆ ಒತ್ತುವರಿಯಾಗಿದೆ. ರಾಜಕಾಲುವೆಯ ಅಕ್ಕಪಕ್ಕದ ಜಮೀನಿನವರು ಕಾಲುವೆಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜೊತೆಗೆ ವಿಜಯರೆಡ್ಡಿ ಫಾರ್ಮಾ ಹತ್ತಿರ ಸಹ ರಾಜಕಾಲುವೆ ಮುಚ್ಚಿಹಾಕಿದ್ದಾರೆ. ಇದರಿಂದಾಗಿ ಕೆರೆಗಳಿಗೆ ಹರಿಯದ ಬರುವ ನೀರು ಆಂಧ್ರಪ್ರದೇಶದ ಕಡೆ ಹರಿಯುತ್ತಿದೆ.
ಸುಮಾರು 4ರಿಂದ 5 ಗ್ರಾಮಗಳ ಕೆರೆಗಳಿಗೆ ಈ ನದಿ ನೀರು ಸಹಕಾರಿಯಾಗಿತ್ತು. ನೀರು ಹರಿಯದೇ ಇರುವ ಕಾರಣದಿಂದ ಕೊಳವೆ ಬಾವಿಗಳು ಬತ್ತಿಹೋಗಿವೆ. ಈ ಕೆರೆಗಳಿಗೆ ನೀರು ತುಂಬಿದರೆ ರೈತರಿಗೆ, ದನ, ಕರುಗಳಿಗೆ, ಪ್ರಾಣಿ, ಪಕ್ಷಿಗಳಿಗೆ ಅನುಕೂಲ ಆಗಲಿದ್ದು, ಆದರೆ ಅಕ್ಕಪಕ್ಕದ ಕೆಲ ರೈತರು ಹಾಗೂ ರೆಸಾರ್ಟ್ನವರು ಸದರಿ ಕಾಲುವೆಯನ್ನು ನಾಶಪಡಿಸಿರುವುದರಿಂದ ನೀರು ಕಾಲುವೆಯಲ್ಲಿ ಹರೆಯದೆ ಪೋಲಾಗುತ್ತಿದೆ. ಈ ಕಾಲುವೆಯಲ್ಲಿ ಹೂಳು ತೆಗೆಸಿ, ಒತ್ತುವರಿ ತೆರವುಗೊಳಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ವಿವಿಧ ಗ್ರಾಮಗಳ ಮುಖಂಡರಾದ ಸುದರ್ಶನ್ ರೆಡ್ಡಿ, ಬಾಬುರೆಡ್ಡಿ, ಮುರಳಿ, ನಾರಾಯಣಸ್ವಾಮಿ, ನಾಗರಾಜಪ್ಪ, ನರಸಿಂಹಮೂರ್ತಿ, ಕೃಷ್ಣಪ್ಪ ಸೇರಿ ಹಲವರು ಇದ್ದರು.