)
- ರಸ್ತೆ, ರೈಲು, ಮೂಲ ಸೌಕರ್ಯವಿರುವ ಜಿಲ್ಲೆ । ನೆರೆ ಜಿಲ್ಲೆಗಳಿಗೂ ಪೀಠ ಸ್ಥಾಪನೆಯಿಂದ ಅನುಕೂಲ: ವಕೀಲರು - - -
ರಾಜ್ಯದ ಕೇಂದ್ರ ಬಿಂದು ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ಹೈಕೋರ್ಟ್ ಪೀಠ ಹೋರಾಟ ಸಮಿತಿ ಅಧ್ಯಕ್ಷ ಬಿ.ಎಂ. ಹನುಮಂತಪ್ಪ, ವಕೀಲರ ಸಂಘದ ಟಿ.ಆರ್. ಗುರುಬಸವರಾಜ ಇತರರನ್ನು ಒಳಗೊಂಡ ನೂರಾರು ವಕೀಲರ ನಿಯೋಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರಿಗೆ ಮನವಿ ಅರ್ಪಿಸಿತು.
ಬೆಂಗಳೂರಿನ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಎಸ್.ಎಸ್. ಮಲ್ಲಿಕಾರ್ಜುನ ಸಮಕ್ಷಮದಲ್ಲಿ ಹೋರಾಟ ಸಮಿತಿ ಹಾಗೂ ವಕೀಲರ ಸಂಘದಿಂದ ಮನವಿ ಅರ್ಪಿಸಿ, ಮಧ್ಯ ಕರ್ನಾಟಕದ ದಾವಣಗೆರೆಯಲ್ಲಿಯೇ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ನೂರಾರು ವಕೀಲರು ಒಕ್ಕೊರಲಿನಿಂದ ಮನವಿ ಮಾಡಿದರು.ಇದೇ ವೇಳೆ ಮಾತನಾಡಿದ ಬಿ.ಎಂ. ಹನುಮಂತಪ್ಪ, ಟಿ.ಆರ್. ಗುರುಬಸವರಾಜ, ದಶಕಗಳ ಹಿಂದೆಯೇ ದಾವಣಗೆರೆಯನ್ನು ರಾಜ್ಯ ರಾಜಧಾನಿ ಮಾಡಬೇಕೆಂಬ ಕೂಗು ಎದ್ದು, ಚರ್ಚೆಯೂ ಆಗಿತ್ತು. ಆದರೆ, ಅದು ಕಾರಣಾಂತರಗಳಿಂದಾಗಿ ಸಾಧ್ಯವಾಗಲಿಲ್ಲ. ಈಗ ಹೈಕೋರ್ಟ್ ಪೀಠ ಸ್ಥಾಪಿಸುವ ಅವಕಾಶವಿದೆ. ಪೀಠ ಸ್ಥಾಪನೆಗೆ ಅಗತ್ಯ ಕಟ್ಟಡ, ನಾಡಿನ ನಾಲ್ಕೂ ದಿಕ್ಕಿಗೂ ರಸ್ತೆ ಸಂಪರ್ಕ, ಮೂರು ದಿಕ್ಕಿಗೆ ರೈಲು ಸಂಪರ್ಕ ಸೇರಿದಂತೆ ಎಲ್ಲ ಅಗತ್ಯ ಮೂಲ ಸೌಲಭ್ಯ ದಾವಣಗೆರೆಯಲ್ಲಿದ್ದು, ಅಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕು ಎಂದರು.
ಮೂವರು ನ್ಯಾಯಮೂರ್ತಿಗಳ ಸಮಿತಿಗೂ ನಾವೆಲ್ಲರೂ ಮನವಿ ಮಾಡುತ್ತೇವೆ. ಹೈಕೋರ್ಟ್ ಪೀಠ ಸ್ಥಾಪನೆ ಬಗ್ಗೆ ಎಲ್ಲ ಜನಪ್ರತಿನಿಧಿಗಳು ಸಾಕಷ್ಟು ಉತ್ಸಾಹ, ಒಲವು ತೋರುತ್ತಿದ್ದಾರೆ. ಅದೇ ಕಾರಣಕ್ಕೆ ಮುಖ್ಯಮಂತ್ರಿಗಳು, ಕಾನೂನು ಸಚಿವರು ಪ್ರಥಮಾದ್ಯತೆ ಮೇಲೆ ಸ್ಪಂದಿಸಬೇಕು. ಭೌಗೋಳಿಕವಾಗಿ ರಾಜ್ಯದ ಮಧ್ಯ ಭಾಗದ ದಾವಣಗೆರೆಯಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸುವುದರಿಂದ ನೆರೆಯ ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ವಿಜಯನಗರ, ಚಿಕ್ಕಮಗಳೂರು ಜಿಲ್ಲೆಯ ವಕೀಲರು, ಕಕ್ಷಿದಾರರಿಗೂ ಅನುಕೂಲವಾಗುತ್ತದೆ ಎಂದು ಅವರು ಸಿಎಂ ಗಮನಕ್ಕೆ ತಂದರು.
ಹಿರಿಯ ವಕೀಲರಾದ ಎ.ಎಂ.ಹೆಗಡೆ, ಎಲ್.ಎಚ್. ಅರುಣಕುಮಾರ, ಎಚ್.ವಿ. ರಾಮದಾಸ್, ಉಚ್ಚಂಗಿದುರ್ಗ ಬಸವರಾಜ, ಎ.ವೈ.ಪ್ರಕಾಶ, ಲೋಕಿಕೆರೆ ಸಿದ್ದಪ್ಪ, ಅನೀಸ್ ಪಾಶ, ಎಸ್.ಬಸವರಾಜ, ವಿ.ಗೋಪಾಲ, ಕಂದಗಲ್ಲು ಗೌಡ್ರು, ಮುಷ್ತಾಕ್ ಅಹಮ್ಮದ್, ಸಿ.ಪಿ.ಅನಿತಾ, ರೇಖಾ, ಜ್ಯೋತಿ, ಶಾಂತ, ವಿಜಯಮಾಲ, ಭಾಗ್ಯಮ್ಮ, ಸಿದ್ದೇಶ, ಎ.ಜಿ.ಪ್ರಸನ್ನಕುಮಾರ, ಗಣೇಶ, ಜಗಳೂರು ವಕೀಲರ ಸಂಘದ ಅಧ್ಯಕ್ಷ ನಾಗಪ್ಪ, ಹರಿಹರದ ಅಧ್ಯಕ್ಷ ಗಣೇಶ, ಸಾಕಮ್ಮ, ರುದ್ರಮ್ಮ, ಅಲಮೇಲಮ್ಮ, ವೀಣಾ, ಮಧು, ಕೃಷ್ಣ ನಾಯ್ಕ, ತಿಪ್ಪೇಶ, ಕರಿಯಪ್ಪ, ಮಹೇಶ, ಚಿತ್ರಲಿಂಗಪ್ಪ ಇತರರು ಇದ್ದರು. ಪುತ್ರನ ವಿವಾಹಕ್ಕೆ ಸಿಎಂಗೆ ಆಹ್ವಾನಿಸಲು ತೆರಳಿದ್ದ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸಹ ವಕೀಲರ ಕೂಗಿಗೆ ಧ್ವನಿಗೂಡಿಸಿದರು.
-(ಫೋಟೋ ಇದೆ)