ಕನ್ನಡಪ್ರಭ ವಾರ್ತೆ ವಿಜಯಪುರ
ಜಿಲ್ಲಾ ಪ್ರವಾಸದ ಅಂಗವಾಗಿ ಆ.6 ರಂದು ನಗರಕ್ಕೆ ಆಗಮಿಸಿದ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರನ್ನು ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ವಿಜಯಪುರ ಜಿಲ್ಲಾ ಘಟಕದ ಪದಾಧಿಕಾರಿಗಳ ನಿಯೋಗ ಭೇಟಿ ಮಾಡಿದರು. ಈ ವೇಳೆ ಗಡಿ ಭಾಗದ ಜಿಲ್ಲೆಗಳ ಕನ್ನಡ ದಿನ ಪತ್ರಿಕೆಗಳಿಗೆ ಪ್ರತಿ ತಿಂಗಳು ವಿಶೇಷ ಜಾಹೀರಾತು ನೀಡುವಂತೆ ಕೋರಿ ಮನವಿಪತ್ರ ಸಲ್ಲಿಸಲಾಯಿತು.ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಭಾಷೆ ಉಳಿಸಲು ಎಲ್ಲ ಸರ್ಕಾರಗಳು ಒಂದಿಲ್ಲೊಂದು ವಿಶೇಷ ಸೌಲಭ್ಯಗಳನ್ನು ನೀಡಿ ಪ್ರಯತ್ನಿಸುತ್ತಲೇ ಬಂದಿವೆ. ಆದರೆ, ಕನ್ನಡ ದಿನಪತ್ರಿಕೆಗಳು ಗಡಿ ಭಾಗದ ಜಿಲ್ಲೆಗಳಲ್ಲಿ ಕನ್ನಡವನ್ನ ಉಳಿಸಿ ಬೆಳೆಸುತ್ತಿದ್ದರೂ ಸಹ ಗಡಿ ಭಾಗದ ಕನ್ನಡ ದಿನಪತ್ರಿಕೆಗಳಿಗೆ ಪ್ರತಿ ತಿಂಗಳು ಒಂದು ಪುಟದ ಜಾಹೀರಾತನ್ನು ನೀಡಿ ಗಡಿ ಅಭಿವೃದ್ಧಿ ಪ್ರಾಧಿಕಾರ ಪತ್ರಿಕೆಗಳ ಅಭಿವೃದ್ಧಿಗೆ ಮುಂದಾಗುತ್ತಿಲ್ಲ. ಕನ್ನಡ ಭಾಷೆ ಉಳಿವಿಗೆ ಶ್ರಮಿಸುತ್ತಿರುವ ಗಡಿ ಜಿಲ್ಲೆಗಳ ಪತ್ರಿಕೆಗಳಿಗೆ ಜಾಹೀರಾತು ನೀಡಿ ಪ್ರೋತ್ಸಾಹ ನೀಡಬೇಕೆಂದು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಜಿಲ್ಲಾ ಘಟಕದ ನಿಯೋಗ ಮನವರಿಕೆ ಮಾಡಿಕೊಟ್ಟಿತು.ಗಡಿ ಭಾಗದಲ್ಲಿ ಕನ್ನಡ ದಿನಪತ್ರಿಕೆಗಳು ಕನ್ನಡ ಭಾಷಾ ಉಳಿವಿಗೆ ಕಟಿಬದ್ದವಾಗಿವೆ. ಎಂತಹ ಕ್ಲಿಷ್ಟಕರ ಸಂದರ್ಭದಲ್ಲಿಯೂ ಕೂಡ ಪತ್ರಿಕೆ ಮುದ್ರಣ ಮಾಡಿ ಪತ್ರಿಕೆ ವಿತರಿಸುವ ಕಾರ್ಯ ಮಾಡುತ್ತಿವೆ. ಅಲ್ಲದೆ ಗಡಿ ಭಾಗದಲ್ಲಿ ಕನ್ನಡ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿ ಸುದ್ದಿಯನ್ನು ಸವಿಸ್ತಾರವಾಗಿ ಕನ್ನಡ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿವೆ ಎಂದು ನಿಯೋಗ ಅಧ್ಯಕ್ಷರ ಗಮನ ಸೆಳೆಯಿತು.ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸರ್ಕಾರದಿಂದ ಹೆಚ್ಚಿನ ಅನುದಾನ ಹಂತ-ಹಂತವಾಗಿ ಬರುತ್ತಲೇ ಇದೆ. ಇದರ ಸದ್ಬಳಕೆ ಸರಿಯಾಗಿ ಆಗಬೇಕೆಂಬುದೆ ಪತ್ರಿಕೆಗಳ ಆಶಯವಾಗಿದೆ. ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಕ್ರಮದ ಜಾಹೀರಾತುಗಳನ್ನು ಕನ್ನಡ ಪತ್ರಿಕೆಗಳಿಗೆ ಒದಗಿಸಿಕೊಡುವುದು, ಗಡಿ ಶಾಲೆಗಳಲ್ಲಿ ಹಾಗೂ ಗಡಿ ಭಾಗದ ಗ್ರಾಮ ಪಂಚಾಯತಿಯ ಗ್ರಂಥಾಲಯಕ್ಕೆ ಕನ್ನಡ ಪತ್ರಿಕೆ ಖರೀದಿಸುವಂತೆ ನಿರ್ದೇಶನ ನೀಡುವಂತೆ ಸಹ ನಿಯೋಗ ಅಧ್ಯಕ್ಷರಿಗೆ ಮನವಿ ಮಾಡಲಾಯಿತು.ಪ್ರತಿ ತಿಂಗಳು ಹೆಚ್ಚುವರಿ ಒಂದು ಪುಟದ ಜಾಹೀರಾತು ಒದಗಿಸಿಕೊಟ್ಟು ಕನ್ನಡ ಉಳಿಸುವುದರ ಜೊತೆಗೆ ಗಡಿ ಭಾಗದ ಪತ್ರಿಕೆಗಳಿಗೆ ಪ್ರೋತ್ಸಾಹಿಸಬೇಕಾಗಿ ಮನವಿ ಮಾಡಲಾಯಿತು.ಇದೇ ವೇಳೆ ಪ್ರಾಧಿಕಾರದ ಕಾರ್ಯದರ್ಶಿ, ಸಂಘದ ರಾಜ್ಯ ಕಾರ್ಯದರ್ಶಿ ರಶ್ಮಿ ಪಾಟೀಲ್, ಕಾರ್ಯಕಾರಣಿ ಸದಸ್ಯ ಕೆ.ಕೆ.ಕುಲಕರ್ಣಿ, ಪ್ರಧಾನ ಕಾರ್ಯದರ್ಶಿ ಅವಿನಾಶ ಬಿದರಿ, ಸದಸ್ಯರಾದ ವಿನೋದ ಸಾರವಾಡ, ಚಿದಂಬರ ಕುಲಕರ್ಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.