ಕನ್ನಡಪ್ರಭ ವಾರ್ತೆ ಅಥಣಿ
ದೂರವಾಣಿ ಮೂಲಕ ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಶಾಸಕ ಶಹಾಜಹಾನ ಡೋಂಗರಗಾಂವ ಅವರು, ದ್ರಾಕ್ಷಿ ಬೆಳೆಗಾರರು ಪ್ರತಿ ವರ್ಷ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಾ ಬಂದಿದ್ದಾರೆ. ಹಲವು ವರ್ಷಗಳಿಂದ ದ್ರಾಕ್ಷಿ ಬೆಳೆಗಾರರು ತಮ್ಮ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವಂತೆ ಹೋರಾಟ ಮಾಡುತ್ತಿದ್ದು ಹಾಗೂ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಲಾಭವಾಗಿಲ್ಲ. ಸರ್ಕಾರ ದ್ರಾಕ್ಷಿ ಬೆಳೆಗಾರರನ್ನು ಕಡೆಗಣಿಸುತ್ತಲಿದ್ದು, ದ್ರಾಕ್ಷಿ ಬೆಳೆಯ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕಾಗಿತ್ತು. ಆದರೆ ಇಲ್ಲಿಯವರೆಗೆ ಚರ್ಚೆ ನಡೆಯದೇ ಇದ್ದ ಕಾರಣ ಅನಿವಾರ್ಯವಾಗಿ ನಾವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿ ಬೇಕಾಗಿದೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ನೇತೃತ್ವದಲ್ಲಿ ಕೇಂದ್ರ ಸಚಿವರಿಗೆ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಕುರಿತು ಮನವಿ ಸಲ್ಲಿಸಲಾಗಿದೆ. ಎಲ್ಲ ಸಚಿವರು ವಿಶೇಷವಾಗಿ ಮುತುವರ್ಜಿ ವಹಿಸಿ ಸಂಬಂಧಪಟ್ಟ ಇಲಾಖೆಯಿಂದ ಮಾಹಿತಿ ಪಡೆದು ದ್ರಾಕ್ಷಿ ಬೆಳೆಗಾರರ ಸಮಸ್ಯೆಯ ಕುರಿತು ಚರ್ಚಿಸಿ ಆದಷ್ಟು ಬೇಗ ಸಮಸ್ಯೆ ಬಗೆಹರಿಸುವದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾಜಿ ಜಿಪಂ ಸದಸ್ಯ ಸಿದ್ದಪ್ಪ ಮುದಕಣ್ಣವರ, ಪ್ರಕಾಶ ಪಾಟೀಲ, ಸುಭಾಸ ಮೊರೆ, ಅಪ್ಪಾಸಾಬ ತೇರದಾಳ, ಶ್ರೀಕಾಂತ ಮಾಕಾಣಿ ಸೇರಿದಂತೆ ಹಲವರು ಮುಖಂಡರು ಉಪಸ್ಥಿತರಿದ್ದರು.