ಹನೂರು: ತಾಲೂಕು ಕೇಂದ್ರದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿರುವ ನ್ಯಾಯಾಲಯವನ್ನು ಕಾಯಂ ನ್ಯಾಯಾಲಯವನ್ನಾಗಿ ಮಾರ್ಪಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ವಕೀಲರ ಸಂಘದ ವತಿಯಿಂದ ಮಾಜಿ ಶಾಸಕ ಆರ್.ನರೇಂದ್ರ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ಪ್ರಸ್ತುತ ತಾತ್ಕಾಲಿಕ ಸಂಚಾರಿ ನ್ಯಾಯಾಲಯವು ವಾರದ ನಾಲ್ಕು ದಿನಗಳು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹನೂರು ತಾಲೂಕು ವಿಸ್ತಾರವಾದ ತಾಲೂಕಾಗಿರುವುದರಿಂದ ಸಾಕಷ್ಟು ಪ್ರಕರಣಗಳು ಬಾಕಿ ಉಳಿದಿದೆ. ಶೀಘ್ರ ನ್ಯಾಯ ವಿತರಣೆಗಾಗಿ ಹನೂರು ಪಟ್ಟಣದ ಸಂಚಾರಿ ನ್ಯಾಯಾಲಯವನ್ನು ಕಾಯಂ ನ್ಯಾಯಾಲಯವನ್ನಾಗಿ ಪರಿವರ್ತಿಸಿಕೊಳ್ಳಲು ಸರ್ಕಾರ ಅಧಿ ಸೂಚನೆ ಹೊರಡಿಸಬೇಕು ಎಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಆದಷ್ಟು ಬೇಗ ಸಂಚಾರಿ ನ್ಯಾಯಾಲಯವನ್ನು ಕಾಯಂ ನ್ಯಾಯಾಲಯವನ್ನಾಗಿ ಮಾಡಲು ಕ್ರಮವಹಿಸಲಾಗುವುದೆಂದು ಭರವಸೆ ನೀಡಿದರು. ಈ ವೇಳೆ ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿ ಸಿ, ಕಾರ್ಯದರ್ಶಿ ಮಹೇಶ್ ಕುಮಾರ್, ಪದಾಧಿಕಾರಿಗಳಾದ ಸಂಪತ್ ಕುಮಾರ್, ಪ್ರಕಾಶ್, ಪ್ರದೀಪ್ ನಾಯ್ಡು, ಅಬ್ದುಲ್ಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.