ಕಂಪ್ಲಿ: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ ಡಿ. 15ರವರೆಗೆ ನೀರು ಹರಿಸಿ ಬೆಳೆದು ನಿಂತಿರುವ ಭತ್ತ, ಮೆಣಸಿನಕಾಯಿ, ಜೋಳ ಸೇರಿದಂತೆ ವಿವಿಧ ಬೆಳೆ ಉಳಿಸುವಂತೆ ಒತ್ತಾಯಿಸಿ ರೈತ ಸಂಘದ ಪದಾಧಿಕಾರಿಗಳು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿಗೆ ಮನವಿ ಸಲ್ಲಿಸಿದರು.
ಸದ್ಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಗಳು ಉತ್ತಮವಾಗಿ ಬೆಳೆದಿದ್ದು, ಭತ್ತ, ಮೆಣಸಿನಕಾಯಿ ಹಾಗೂ ಜೋಳ ತೆನೆ ಬಿಡುವ ಹಂತದಲ್ಲಿವೆ. ಈ ಸಂದರ್ಭದಲ್ಲಿ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸುವುದು ಅತ್ಯಗತ್ಯವಾಗಿದೆ. ಕನಿಷ್ಠ ಡಿ. 15ರವರೆಗೆ ಕಾಲುವೆಗಳಿಗೆ ನೀರು ಹರಿಸಿದರೆ ಮಾತ್ರ ರೈತರು ಬೆಳೆದಿರುವ ಬೆಳೆ ಸಂಪೂರ್ಣವಾಗಿ ಕಟಾವಿಗೆ ತರಲು ಸಾಧ್ಯವಾಗಲಿದೆ. ಆದರೆ, ಯಾವುದೇ ಮುನ್ಸೂಚನೆ ಇಲ್ಲದೆ ನ. 28ಕ್ಕೆ ನೀರು ಸ್ಥಗಿತಗೊಳಿಸಿದರೆ ಸಾವಿರಾರು ಕೋಟಿ ಮೌಲ್ಯದ ಬೆಳೆಗಳು ಒಣಗಿ ಹೋಗಲಿದ್ದು, ರೈತರು ಭಾರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ಕಳೆದ ವರ್ಷ ತುಂಗಭದ್ರಾ ಜಲಾಶಯಕ್ಕೆ ಕ್ರೆಸ್ಟ್‌ಗೇಟ್ ಅಳವಡಿಸುವ ಕಾಮಗಾರಿಯ ಹಿನ್ನೆಲೆ ರೈತರು ಬೆಳೆ ನಷ್ಟ ಅನುಭವಿಸಿದ್ದರು. ಇದೀಗ ಮತ್ತೊಮ್ಮೆ ನೀರಿನ ಅಭಾವದಿಂದ ಬೆಳೆ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾದರೆ ರೈತರು ಕೃಷಿಯಿಂದಲೇ ವಿಮುಖರಾಗುವ ದುಸ್ಥಿತಿ ಎದುರಾಗಲಿದೆ. ಈಗಾಗಲೇ ಕೃಷಿಗಾಗಿ ಸಾಲ, ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೂಲಿ ಕಾರ್ಮಿಕರ ವೆಚ್ಚ ಭರಿಸಿರುವ ರೈತರಿಗೆ ಬೆಳೆ ನಷ್ಟವಾದರೆ ಚೇತರಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಮನವರಿಕೆ ಮಾಡಿದರು.ಆದ್ದರಿಂದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಂಧ್ರಪ್ರದೇಶ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಆ ರಾಜ್ಯದ ನದಿ ನೀರಿನ ಕೋಟಾದಡಿ ಲಭ್ಯವಿರುವ 4 ಟಿಎಂಸಿ ನೀರನ್ನು ಕರ್ನಾಟಕದ ರೈತರ ಬೆಳೆಗಳ ರಕ್ಷಣೆಗೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ನೀರನ್ನು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಎಲ್‌ಎಲ್ ಕಾಲುವೆ, ಎಲ್‌ಬಿಎಲ್‌ಎಲ್ ಹಾಗೂ ಎಚ್‌ಎಲ್ ಕಾಲುವೆಗಳಿಗೆ ಹರಿಸಿದರೆ ಸಾವಿರಾರು ರೈತರ ಬೆಳೆಗಳಿಗೆ ಅನುಕೂಲವಾಗಲಿದೆ. ಹೀಗಾಗಿ ರೈತರ ಹಿತದೃಷ್ಟಿಯಿಂದ ಆಂಧ್ರ ಸರ್ಕಾರದೊಂದಿಗೆ ಚರ್ಚಿಸಿ 4 ಟಿಎಂಸಿ ನೀರು ಬಿಡುಗಡೆಗೆ ಸಹಕರಿಸಬೇಕು ಎಂದು ಒತ್ತಾಯಿಸಿದರು.