ಕುಕನೂರು: ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಕರ ನೇಮಕಾತಿ ಸಂಖ್ಯೆ ಹೆಚ್ಚಿಸಬೇಕು ಎಂದು ಭಾರತ ವಿದ್ಯಾರ್ಥಿ ಫೇಡರೆಷನ್, ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್, ಶಿಕ್ಷಕ ಆಕಾಂಕ್ಷಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಕಕ ಭಾಗದಲ್ಲಿ 5200 ಶಿಕ್ಷಕರ ಹುದ್ದೆ ನೇಮಕಾತಿ ಮಾಡುತ್ತಿದ್ದು, ಇದನ್ನು ಹತ್ತು ಸಾವಿರಕ್ಕೆ ಏರಿಸಬೇಕು. 5200ರಲ್ಲಿ 4424 ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ 5), ಇದರಲ್ಲಿ 78 ಶಿಕ್ಷಕ ಹುದ್ದೆ ಪದವೀಧರ ಶಿಕ್ಷಕರ ಹುದ್ದೆ, 121 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಆದೇಶ ಹೊರಡಿಸಿದೆ. ಪದವೀಧರ ಪ್ರಾಥಮಿಕ ಶಿಕ್ಷಕರ ಹುದ್ದೆಯನ್ನು 3000ಕ್ಕೆ ಏರಿಸಬೇಕು. ಇದರಿಂದ ಕಕ ಭಾಗದಲ್ಲಿ ಶಿಕ್ಷಕರ ಕೊರತೆ ನೀಗಲಿದೆ ಎಂದು ಹೇಳಿದ್ದಾರೆ.
ಶಿಕ್ಷಕರ ನೇಮಕಾತಿಯಲ್ಲಿ ಪದವಿ ಹಾಗೂ ಬಿಇಡಿ, ಡಿಇಡಿ ಅಂಕಗಳನ್ನು ಪರಿಗಣಿಸಬಾರದು. ಕೇವಲ ಸಿಇಟಿ, ಟಿಇಟಿ ಅಂಕಗಳನ್ನು ಮೆರಿಟ್ ಪಟ್ಟಿಗೆ ಪರಿಗಣಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ.
ಶಿಕ್ಷಕ ಆಕಾಂಕ್ಷಿಗಳಾದ ಜಗದೀಶ ಗೌಡ್ರು, ಬಸವರಾಜ ಎಚ್., ಬಸವರಾಜ ಪವಾರ, ನಿಂಗಮ್ಮ, ದೇವಪ್ಪ ರಾಯಚೂರು, ಶರಣು ಸಜ್ಜನ್, ಎಸ್‌ಎಫ್‌ಐ ಸಂಘಟನೆ ರಾಜ್ಯ ಉಪಾಧ್ಯಕ್ಷ ಬಸವರಾಜ, ರಾಜ್ಯ ಕಾರ್ಯದರ್ಶಿ ವಿಜಯಕುಮಾರ್, ಭೀಮನಗೌಡ, ಅಖಿಲ ಕರ್ನಾಟಕ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಕಾಂತಕುಮಾರ್ ಇತರರಿದ್ದರು.