ಕುಮಟಾದಲ್ಲಿ ಪುರುಷರ ಮೇಲಿನ ದೌರ್ಜನ್ಯ ತಡೆಯುವಂತೆ ಪೊಲೀಸರಿಗೆ ಆಗ್ರಹ

KannadaprabhaNewsNetwork | Published : Nov 20, 2024 12:34 AM
Follow Us

ಸಾರಾಂಶ

ದೇಶದ ಕಾನೂನಿನ ದುರುಪಯೋಗದಿಂದ ಮಹಿಳೆಯರಿಂದ ಪುರುಷರ ಮೇಲೆ ಸುಳ್ಳು ದೌರ್ಜನ್ಯ ಪ್ರಕರಣಗಳು ಹೆಚ್ಚಿದೆ. ಇದು ಸರ್ಕಾರಿ ಹಾಗೂ ಖಾಸಗಿ ಸೇವೆಯಲ್ಲಿರುವವರನ್ನೂ ಬಿಟ್ಟಿಲ್ಲ ಎಂದು ಹೋರಾಟಗಾರರು ತಿಳಿಸಿದರು.

ಕುಮಟಾ: ಇತ್ತೀಚಿನ ವರ್ಷಗಳಲ್ಲಿ ಪುರುಷರ ಮೇಲೆ ಮಹಿಳೆಯರಿಂದ ಸುಳ್ಳು ಪ್ರಕರಣಗಳು ದಾಖಲಾಗಿ ದೌರ್ಜನ್ಯ ಅನುಭವಿಸುವ ಘಟನೆಗಳು ಹೆಚ್ಚಾಗಿದ್ದು, ಇಂತಹ ಸುಳ್ಳು ದೂರುಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಜನಸಾಮಾನ್ಯರ ಕಲ್ಯಾಣ ಕೇಂದ್ರದ ವತಿಯಿಂದ ಅಂತಾರಾಷ್ಟ್ರೀಯ ಪುರುಷರ ದಿನಾಚರಣೆಯ ಅಂಗವಾಗಿ ಪೊಲೀಸ್ ಇಲಾಖೆಗೆ ಮಂಗಳವಾರ ಮನವಿ ಸಲ್ಲಿಸಲಾಗಿದೆ. ದೇಶದ ಕಾನೂನಿನ ದುರುಪಯೋಗದಿಂದ ಮಹಿಳೆಯರಿಂದ ಪುರುಷರ ಮೇಲೆ ಸುಳ್ಳು ದೌರ್ಜನ್ಯ ಪ್ರಕರಣಗಳು ಹೆಚ್ಚಿದೆ. ಇದು ಸರ್ಕಾರಿ ಹಾಗೂ ಖಾಸಗಿ ಸೇವೆಯಲ್ಲಿರುವವರನ್ನೂ ಬಿಟ್ಟಿಲ್ಲ. ಇದರಿಂದಾಗಿ ಪುರುಷರು ಅನಾವಶ್ಯಕ ನ್ಯಾಯದ ಕಟಕಟೆಯಲ್ಲಿ ನಿಲ್ಲುವಂತಾಗಿದೆ. ಎಷ್ಟೋ ಬಾರಿ ಕೋರ್ಟ್‌ನಿಂದ ನ್ಯಾಯ ನಿರ್ಣಯ ಬರುವವರೆಗೆ ವರ್ಷಗಟ್ಟಲೆ ಜೈಲು ಕೂಡಾ ಅನುಭವಿಸಬೇಕಾಗುತ್ತದೆ. ವಿಚಿತ್ರವೆಂದರೆ ಮಹಿಳೆಯರು ಪೊಲೀಸ್ ದೂರು ನೀಡಿದರೆ ಹಿಂದುಮುಂದೆ ಪರಿಶೀಲಿಸದೇ ಎಫ್‌ಐಆರ್ ದಾಖಲಾಗುತ್ತದೆ. ಹೀಗಾಗಿ ಮಹಿಳೆಯರಿಂದ ಪುರುಷರ ವಿರುದ್ಧ ದೂರು ಸ್ವೀಕರಿಸುವಾಗ ಕೂಲಂಕಷ ಪರಿಶೀಲಿಸಿಯೇ ಪ್ರಕರಣ ದಾಖಲಿಸಬೇಕು. ದೂರಿನಲ್ಲಿ ಸುಳ್ಳು ಕಂಡುಬಂದಲ್ಲಿ ದೂರು ನೀಡಿದವರ ವಿರುದ್ಧವೇ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಸಂಬೋಧಿಸಿದ ಮನವಿಯನ್ನು ಸಿಪಿಐ ಯೋಗೀಶ ಅವರಿಗೆ ಜನಸಾಮಾನ್ಯರ ಕಲ್ಯಾಣ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡ್ರಿಗಸ್ ಮತ್ತು ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಇತರರು ಮನವಿ ಸಲ್ಲಿಸಿದ್ದಾರೆ. 26ರಂದು ಸಂವಿಧಾನದ ಅರಿವಿನ ಅಭಿಯಾನ

ಅಂಕೋಲಾ: ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ವತಿಯಿಂದ ನ. 26ರಂದು ಬೆಳಗ್ಗೆ 9.15 ಗಂಟೆಗೆ ಸಂವಿಧಾನದ ಅರಿವಿನ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್‌ ಕ್ಲಬ್‌ನ ಅಧ್ಯಕ್ಷ ದೇವಾನಂದ ಗಾಂವಕರ ತಿಳಿಸಿದರು.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕಿನ ಮಾಧ್ಯಮಿಕ ಶಾಲೆಗಳಿಗೆ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರ ಸಂವಿಧಾನ ಓದು ಕೈಪಿಡಿ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಶೇಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮವನ್ನು ನ್ಯಾಯಾಧೀಶ ಡಿ.ಎಸ್. ವಿಜಯಕುಮಾರ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಾರಾಯಣ ಎಂ., ಹಿರಿಯ ಸಿವಿಲ್ ನ್ಯಾಯಾಧೀಶ ಮನೋಹರ ಎಂ., ಜೆಎಂಎಫ್‌ಸಿ ಹಾಗೂ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಧೀಶೆ ಅರ್ಪಿತಾ ಬೆಲ್ಲದ್ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿಯ ಅಧ್ಯಕ್ಷ ದೇವಾನಂದ ಬಿ. ಗಾಂವಕರ ವಹಿಸಲಿದ್ದಾರೆ.ಮಹಾಂತೇಶ ರೇವಡಿ ಸ್ವಾಗತಿಸಿದರು. ಎಸ್.ಆರ್. ಉಡುಪ ವಂದಿಸಿದರು. ಲಯನ್ಸ್ ಪ್ರಮುಖರಾದ ಸಂಜಯ ಆರುಂದೇಕರ, ಡಾ. ದುರ್ಗಾನಂದ ದೇಸಾಯಿ, ಚಂದನ ಸಿಂಗ್, ಗಣಪತಿ ನಾಯಕ ಶೀಳ್ಯ, ಗಣೇಶ ಶೆಟ್ಟಿ, ಕೇಶವಾನಂದ ನಾಯಕ, ಶಂಕರ ಹುಲಸ್ವಾರ ಉಪಸ್ಥಿತರಿದ್ದರು.