ಹಾವೇರಿ: ಡೊನೇಷನ್ ಹಾವಳಿ ತಡೆಗಟ್ಟುವಂತೆ ಹಾಗೂ ಸರ್ಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿದ ಖಾಸಗಿ ಶಾಲೆಗಳ ಮಾನ್ಯತೆ ರದ್ದು ಮಾಡಲು ಆಗ್ರಹಿಸಿ ಎಸ್‌ಎಫ್‌ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಧಿಕಾರಿ ರಘುನಂದನ್ ಮೂರ್ತಿಗೆ ಪತ್ರ ಸಲ್ಲಿಸಿದರು.
೨೦೨೪-೨೫ನೇ ಸಾಲಿನಲ್ಲಿ ರಾಜ್ಯಾದ್ಯಂತ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಈಗಾಗಲೇ ಪ್ರವೇಶಾತಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಶಿಕ್ಷಣ ಪ್ರಾಧಿಕಾರ ಸಭೆ ಸೇರಿ, ಖಾಸಗಿ ಶಾಲೆಗಳ ಡೊನೇಷನ್ ಹಾವಳಿ ಕುರಿತು ಪಾಲಕರಿಗೆ ಮಾಹಿತಿ ನೀಡಬೇಕಾಗಿತ್ತು. ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಮಿತಿಯು ಸಭೆ ಸೇರಿ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡದಿರುವ ಹಗಲು ದರೋಡೆ ಮಾಡುತ್ತಿದ್ದಾರೆ.ಒಂದೆಡೆ ರಾಜ್ಯಾದ್ಯಂತ ಅಣಬೆಗಳಂತೆ ಖಾಸಗಿ ಶಾಲೆಗಳು ತಲೆ ಎತ್ತುತ್ತಿವೆ ಮತ್ತೊಂದೆಡೆ ರಾಜ್ಯದಲ್ಲಿ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುತ್ತಿವೆ. ಈಗಾಗಲೆ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಹೆಸರಲ್ಲಿ ಡೊನೇಷನ್ ಹಣವನ್ನು ಮನಬಂದತೆ ವಸೂಲಿ ಮಾಡಲು ಮುಂದಾಗಿದ್ದಾರೆ. ಬಡ ಹಿಂದುಳಿದ, ದಲಿತ ಅಲ್ಪಸಂಖ್ಯಾತರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಡೊನೇಷನ್ ಪಿಡುಗಿನಿಂದ ಶಾಲೆಗಳಲ್ಲಿ ಓದುವುದು ಅಸಾಧ್ಯವಾಗುತ್ತಿದೆ.
ಬಹುತೇಕ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿಗಳವರೆಗೂ ಹಣ ವಸೂಲಿ ಮಾಡುವುದರ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಸರ್ಕಾರ ನಿಯಮಗಳ ಪ್ರಕಾರ ಸರ್ಕಾರ ನಿಗದಿಪಡಿಸಿದಂತೆ ಅನುದಾನಿತ ಶಿಕ್ಷಣ ಸಂಸ್ಥೆಗಳು ಹಾಗೂ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ಅಭಿವೃದ್ಧಿ ಶುಲ್ಕ (ಡೆವಲಪ್‌ಮೆಂಟ್ ಫೀಸ್) ನ್ನು ಸಂಗ್ರಹಿಸಲು ಅವಕಾಶವಿದೆ. ಈ ಹಣವನ್ನು ಒತ್ತಾಯದ ಮೂಲಕ ಸಂಗ್ರಹಿಸುವಂತಿಲ್ಲ. ಇದಕ್ಕೂ ಹೆಚ್ಚು ಸಂಗ್ರಹಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ವಿದ್ಯಾರ್ಥಿಗಳ ಸಂಖ್ಯೆ, ಕಲಿಕಾ ಮಾಧ್ಯಮ, ಶುಲ್ಕದ ವಿವರ, ಕ್ರೀಡಾಂಗಣ, ಶೌಚಾಲಯ, ಶಿಕ್ಷಕರ ಸಂಖ್ಯೆ, ಮುಂತಾದ ಮಾಹಿತಿಯನ್ನು ಶಾಲಾ ಆವರಣದಲ್ಲಿ ಫ್ಲೆಕ್ಸ್ ನಲ್ಲಿ ಪ್ರಕಟಿಸಬೇಕೆಂದು ಶಿಕ್ಷಣ ಇಲಾಖೆ ಆದೇಶಿಸಿದೆ. ಆದರೆ, ಇದನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ಜಾರಿ ಮಾಡಿಲ್ಲ ಎಂದು ದೂರಿದರು.ಪ್ರವೇಶ ಪರೀಕ್ಷೆ ನಡೆಸುವುದರ ಜೊತೆಗೆ ನೋಟ್‌ಬುಕ್, ಶಾಲಾ ಬ್ಯಾಗ್, ಬಟ್ಟೆ ಕಡ್ಡಾಯವಾಗಿ ಆಯಾ ಶಾಲೆಗಳಲ್ಲಿ ತೆಗೆದುಕೊಳ್ಳಬೇಕೆಂದು ಪಾಲಕರಿಗೆ ಹೇಳಿ ಹೆಚ್ಚಿನ ದರದಲ್ಲಿ ಕೊಟ್ಟು ಶಾಲೆಗಳನ್ನು ಅಂಗಡಿಯಾಗಿ ಮಾರ್ಪಡಿಸಿರುವ ಶಾಲೆಗಳ ಮಾನ್ಯತೆ ರದ್ದು ಮಾಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್., ಜಿಲ್ಲಾ ಮುಖಂಡರಾದ ಪ್ರದೀಪ ಕುರಿಯವರ, ಚಂದ್ರು ಲಮಾಣಿ, ನವೀನ್ ಎಚ್.ಟಿ., ಕಿರಣ್ ಬಂದಿ, ರೇವಣಸಿದ್ದೇಶ ವಿ., ಕೃಷ್ಣ ಸಿ., ಬಸವರಾಜ ನಾಯಕ್, ಶಿವಕುಮಾರ್ ಸಿ., ಶಿವಾಜಿ ಆರ್.ಎಲ್, ವೀರೇಶ್ ಎಸ್, ರಾಘವೇಂದ್ರ ವೈ.ಜಿ ಇದ್ದರು. ಡೊನೇಷನ್ ನಿಯಂತ್ರಣಕ್ಕೆ ಜಿಲ್ಲಾ ಶಿಕ್ಷಣ ರೆಗ್ಯುಲೆಟಿಂಗ್ ಪ್ರಾಧಿಕಾರವನ್ನು ತಕ್ಷಣ ರಚಿಸಬೇಕು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಜಿಲ್ಲಾಧಿಕಾರಿ ಮತ್ತು ತಹಸೀಲ್ದಾರ್ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಮತ್ತು ಶಿಕ್ಷಣ ಇಲಾಖೆಯ ಮುಖ್ಯಸ್ಥರು, ಪಾಲಕರು, ವಿದ್ಯಾರ್ಥಿ ಸಂಘಟನೆಯ ಪ್ರತಿನಿಧಿಗಳ ಜಂಟಿ ಸಭೆಯನ್ನು ಕರೆಯಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಎಸ್. ಹೇಳಿದರು.