ಕನ್ನಡಪ್ರಭ ವಾರ್ತೆ ರಾಮನಗರ
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿರುವ ಕಟ್ಟಡ ಕಾರ್ಮಿಕರಿಗೆ ಪಿಂಚಣಿ, ಮದುವೆ ಧನ ಸಹಾಯ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಸಕಾಲದಲ್ಲಿ ದೊರಕುವಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಅದ್ವಿತ್ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಮದನ್ ಗೌಡ ಮನವಿ ಮಾಡಿದರು.ನಗರದಲ್ಲಿ ಕಾರ್ಮಿಕ ಇಲಾಖೆ ಹಾಗೂ ಅದ್ವಿತ್ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ ಆಯೋಜಿಸಿದ್ದ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳು ಸರಿಯಾಗಿ ತಲುಪುತ್ತಿಲ್ಲ. ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಸಹಾಯ ಧನ, ಹಿರಿಯರಿಗೆ ಪಿಂಚಣಿ ಸೌಲಭ್ಯ, ಫಲಾನುಭವಿ ಹಾಗೂ ಅವಲಂಬಿತರಿಗೆ ವೈದ್ಯಕೀಯ ಸಹಾಯಧನ, ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ನೀಡುವ ಸಹಾಯಧನ ಸೇರಿದಂತೆ ಯಾವ ಸೌಲಭ್ಯಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಫಲಾನುಭವಿ ಕಟ್ಟಡ ಕಾರ್ಮಿಕ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ನೀಡುವ ಧನ ಸಹಾಯವನ್ನು 60 ಸಾವಿರದಿಂದ 1.20 ಲಕ್ಷ , ಸ್ವಾಭಾವಿಕವಾಗಿ ಮರಣ ಹೊಂದಿದರೆ 1.50 ಲಕ್ಷ, ಅಪಘಾತದಲ್ಲಿ ಮರಣ ಹೊಂದಿದರೆ 8 ಲಕ್ಷ ರುಪಾಯಿ ನೀಡಲಾಗುತ್ತಿದೆ. ಈ ರೀತಿಯ ಆರು ಸಾವಿರ ಅರ್ಜಿ ಬಾಕಿ ಉಳಿದಿದ್ದು, ಇನ್ನೂ ಪರಿಶೀಲನೆ ಹಂತದಲ್ಲಿಯೇ ಇದೆ ಎಂದರು.
ಜಿಲ್ಲೆಯಲ್ಲಿ 50 ಸಾವಿರ ಕಾರ್ಮಿಕರು ನೋಂದಣಿಯಾಗಿದ್ದು, ಇದರಲ್ಲಿ 20 ಸಾವಿರ ಕಾರ್ಮಿಕರ ಕಾರ್ಡ್ ಗಳನ್ನು ರದ್ದು ಮಾಡಲಾಗಿದೆ. ರಾಮನಗರ ತಾಲೂಕು 14 ಸಾವಿರ, ಚನ್ನಪಟ್ಟಣ ತಾಲೂಕು 7 ಸಾವಿರ, ಕನಕಪುರ ತಾಲೂಕು 13 ಸಾವಿರ ಹಾಗೂ ಮಾಗಡಿ ತಾಲೂಕು 5 ಸಾವಿರ ಸೇರಿ 39 ಫಲಾನುಭವಿ ಕಾರ್ಮಿಕರಿದ್ದು, ಸುಮಾರು 15 ಸಾವಿರ ಅನರ್ಹ ಕಾರ್ಮಿಕರ ಗುರುತಿನ ಚೀಟಿಗಳನ್ನು ರದ್ದು ಪಡಿಸಲಾಗಿದೆ ಎಂದು ತಿಳಿಸಿದರು.ಶಿಬಿರದಲ್ಲಿ ಡಾ.ರೋಚನಾ ನೇತೃತ್ವದ ತಂಡ ಕಟ್ಟಡ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಔಷಧಗಳನ್ನು ವಿತರಣೆ ಮಾಡಿತು. ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಿ.ದರ್ಶನ್, ಜಿಲ್ಲಾಧ್ಯಕ್ಷ ಯೋಹಿತ್ ಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಕಪ್ಪ, ಜಿಲ್ಲಾ ಉಪಾಧ್ಯಕ್ಷ ಕುಮಾರ, ತಾಲೂಕು ಅಧ್ಯಕ್ಷ ಆನಂದ್, ತಾಲೂಕು ಅಧ್ಯಕ್ಷ ಲೋಕೇಶ್ , ಮಾಗಡಿ ತಾಲೂಕು ಅಧ್ಯಕ್ಷ ಲೋಕೇಶ್ ಗೌಡ ಮತ್ತಿತರರು ಉಪಸ್ಥಿತರಿದ್ದರು.
---------ನೋಂದಣಿ ಪೂರ್ವದ 12 ತಿಂಗಳಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಿರಬೇಕು. ಕಟ್ಟಡ ಕಾರ್ಮಿಕರಲ್ಲದವರು ನಕಲಿ ದಾಖಲಾತಿ ಸೃಷ್ಟಿಸಿ ಮಂಡಳಿ ನೀಡುವ ಕಾರ್ಮಿಕರ ಗುರುತಿನ ಚೀಟಿ ಪಡೆದು ಸೌಲಭ್ಯ ಪಡೆಯುವುದು ಶಿಕ್ಷಾರ್ಹ ಅಪರಾಧ, ಅಂತಹವರ ವಿರುದ್ಧ ಕಾರ್ಮಿಕ ಇಲಾಖೆ ಕಾನೂನು ಕ್ರಮ ಜರುಗಿಸುತ್ತದೆ.
- ಮದನ್ ಗೌಡ, ರಾಜ್ಯಾಧ್ಯಕ್ಷರು,ಅದ್ವಿತ್ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಒಕ್ಕೂಟ