ಕುಡಿಯುವ ನೀರಿನ ತೊಂದರೆಗೆ ಸೂಕ್ತ ಕ್ರಮ ಕೈಗೊಳ್ಳಿ

KannadaprabhaNewsNetwork |  
Published : Apr 21, 2025, 12:45 AM IST
ಚಿತ್ರ 3 | Kannada Prabha

ಸಾರಾಂಶ

ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆಯನ್ನು ಉದ್ದೇಶಿಸಿ ಸಚಿವ ಡಿ.ಸುಧಾಕರ್ ಮಾತನಾಡಿದರು.

ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವ ಡಿ.ಸುಧಾಕರ್‌ ಸೂಚನೆಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ಜೆಜಿ ಹಳ್ಳಿ ಹೋಬಳಿಯ ಹಳ್ಳಿಗಳು ಸೇರಿದಂತೆ ಹಲವು ಹಳ್ಳಿಗಳಲ್ಲಿ ಕುಡಿವ ನೀರಿನ ಸಮಸ್ಯೆ ಉಲ್ಬಣಗೊಂಡಿರುವ ದೂರುಗಳು ಕೇಳಿ ಬಂದಿದ್ದು ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ನೀರಿನ ಕೊರತೆ ನೀಗಿಸಲು ಕಾರ್ಯಪ್ರವೃತ್ತರಾಗಬೇಕು. ಕುಡಿಯುವ ನೀರಿನ ವಿಚಾರದಲ್ಲಿ ಬೇಜವಾಬ್ದಾರಿ ತೋರುವವರನ್ನು ಯಾವುದೇ ಮುಲಾಜಿಲ್ಲದೆ ಅಮಾನತ್ತು ಮಾಡಲು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬೇಸಿಗೆ ಹಿನ್ನೆಲೆಯಲ್ಲಿ ನೀರಿನ ಸಮಸ್ಯೆ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬಂದಿವೆ. ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುತ್ತದೋ ಆ ಸ್ಥಳಕ್ಕೆ ಕೂಡಲೇ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಕುಡಿವ ನೀರು ಪೂರೈಸುವುದು ಪುಣ್ಯದ ಕೆಲಸ. ನೀರಿಲ್ಲ ಎಂದರೆ ಮೊದಲು ಬೈಯುವುದು ಶಾಸಕರು ಹಾಗೂ ಸಚಿವರನ್ನು. ಆದ್ದರಿಂದ ನೀರಿನ ಪೂರೈಕೆಗೆ ಟ್ಯಾಂಕರ್‌ಗಳ ಸಂಖ್ಯೆ ಹೆಚ್ಚಿಸಿ. ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಿ ನೀರು ಪೂರೈಸಿ. ನಾನು ವೈಯಕ್ತಿಕವಾಗಿ 10 ಟ್ಯಾಂಕರ್ ವ್ಯವಸ್ಥೆ ಮಾಡುತ್ತೇನೆ. ಕುಡಿವ ನೀರಿನ ಸಮಸ್ಯೆ ಬರದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.

ತಾಲೂಕಿನ ಬಹುಗ್ರಾಮ ಕುಡಿವ ನೀರಿನ ಯೋಜನೆ ಪೂರ್ಣಗೊಳಿಸಿದರೆ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಆದರೆ ಒಂದೂವರೆ ವರ್ಷ ಕಳೆದರೂ ಹರ್ತಿಕೋಟೆ ಬಹುಗ್ರಾಮ ಯೋಜನೆ ಪೂರ್ಣಗೊಂಡಿಲ್ಲ. ಜೆಜಿಹಳ್ಳಿ ಯೋಜನೆಯು ಪೂರ್ಣ ಗೊಂಡಿಲ್ಲ. ಆದ್ದರಿಂದ ಮುಂದಿನ ಮೂರು ತಿಂಗಳೊಳಗೆ ಈ ಯೋಜನೆ ಕಾಮಗಾರಿ ಪೂರ್ಣಗೊಳ್ಳಬೇಕು. ಶೀಘ್ರವೇ ಗ್ರಾಪಂ ಪಿಡಿಒ ನೇತೃತ್ವದಲ್ಲಿ ಸಭೆ ಆಯೋಜಿಸಿ, ಕುಡಿವ ನೀರಿನ ಸಮಸ್ಯೆಗೆ ಸಹಾಯವಾಣಿ ಆರಂಭಿಸಬೇಕು ಎಂದು ಸೂಚಿಸಿದರು.

ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ವಸತಿ, ನಿವೇಶನ ರಹಿತರಿಗೆ ಹಕ್ಕುಪತ್ರ ಕೊಡುವ ವ್ಯವಸ್ಥೆಗೆ ಶೀಘ್ರವೇ ಪಟ್ಟಿ ಸಿದ್ದಪಡಿಸಬೇಕು. ಮೇ ಅಂತ್ಯದೊಳಗೆ ಸಿಎಂ ಅವರ ದಿನಾಂಕ ನಿಗದಿಪಡಿಸಿ ಅವರ ಸಮ್ಮುಖದಲ್ಲಿ ಕೊಡುವ ವ್ಯವಸ್ಥೆ ಮಾಡಲಾಗುವುದು ರಸ್ತೆಗಳ ಪಕ್ಕದಲ್ಲಿ ಜಾಲಿಗಿಡಗಳು ಬೆಳೆದಿದ್ದು ಅವುಗಳ ತೆರವಿಗೂ ಕ್ರಮ ಕೈಗೊಳ್ಳಬೇಕು. ಹಿರಿಯೂರು ನಗರಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಅನುಮೋದನೆ ಆಗಿದ್ದು ಶೀಘ್ರವೇ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ. ಜೊತೆಗೆ ರಾಷ್ಟೀಯ ಹೆದ್ದಾರಿ 150 ಎ ನಿರ್ಮಾಣದ ಚಳ್ಳಕೆರೆ-ಹಿರಿಯೂರು ವ್ಯಾಪ್ತಿಯ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು ಈ ಕಾಮಗಾರಿ ಪೂರ್ಣಗೊಳಿಸಲು ಇರುವ ತೊಂದರೆಗಳ ಬಗ್ಗೆ ಸಭೆ ನಡೆಸಿ ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ನಗರ ವ್ಯಾಪ್ತಿಯ ರಸ್ತೆ ಅಗಲೀಕರಣ ಕಾಮಗಾರಿ ಪ್ರಗತಿ ಮಂದಗತಿಯಲ್ಲಿ ಸಾಗುತ್ತಿದ್ದು ಕೆಲಸ ವೇಗವಾಗಿ ನಡೆಯಬೇಕು. ಅಲ್ಲದೇ ತಾಲೂಕು ಕಚೇರಿ ಸೇತುವೆಯಿಂದ ಗಾಂಧಿ ವೃತ್ತದವರೆಗಿನ ರಸ್ತೆ ವಿಸ್ತರಣೆ ಕಾಮಗಾರಿಯನ್ನೂ ಸಹ ಶೀಘ್ರವೇ ಕೈಗೆತ್ತಿಕೊಳ್ಳಬೇಕು ಎಂದರು.

ಗ್ರಾ.ಕು.ನೀ.ನೈ ಎಇಇ ಹಸೇನ್ ಭಾಷಾ, ಪೌರಾಯುಕ್ತ ಎ. ವಾಸಿಂ ಮಾತನಾಡಿದರು. ಈ ವೇಳೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ತಹಸೀಲ್ದಾರ್ ರಾಜೇಶ್ ಕುಮಾರ್, ಸಿಇಒ ಎಸ್.ಜೆ. ಸೋಮಶೇಖರ್ ಮುಂತಾದವರು ಹಾಜರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ