ದ್ವಿತೀಯ ಪಿಯುಸಿ ಪರೀಕ್ಷೆ 2 ಪಾರದರ್ಶಕವಾಗಿ ನಡೆಸಿ: ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಸೂಚನೆ

KannadaprabhaNewsNetwork |  
Published : Apr 21, 2025, 12:45 AM IST
20ಎಚ್‌ವಿಆರ್1- | Kannada Prabha

ಸಾರಾಂಶ

ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾದ ವಿವಿಧ ಇಲಾಖೆ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಕೊಠಡಿ ಮೇಲ್ವಿಚಾರಕರು ತಮ್ಮ ಕರ್ತವ್ಯಗಳಲ್ಲಿ ಯಾವುದೇ ಲೋಪವಾಗದಂತೆ ಜವಾಬ್ದಾರಿಯಿಂದ ಹಾಗೂ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು.

ಹಾವೇರಿ: ದ್ವಿತೀಯ ಪಿಯುಸಿ ಪರೀಕ್ಷೆ- 2 ಏ. 24ರಿಂದ ಮೇ 8ರ ವರೆಗೆ ಜಿಲ್ಲೆಯ 9 ಪರೀಕ್ಷಾ ಕೇಂದ್ರಗಳಲ್ಲಿ ಜರುಗಲಿದೆ. ಯಾವುದೇ ಲೋಪವಾಗದಂತೆ ವ್ಯವಸ್ಥಿತವಾಗಿ ಹಾಗೂ ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ- 2ರ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರೂ ಪರೀಕ್ಷಾ ಗೌಪ್ಯತೆ ಕಾಪಾಡಿಕೊಳ್ಳಬೇಕು ಹಾಗೂ ಪರೀಕ್ಷಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದರು.ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲಾದ ವಿವಿಧ ಇಲಾಖೆ ಅಧಿಕಾರಿಗಳು, ಮಾರ್ಗಾಧಿಕಾರಿಗಳು, ವೀಕ್ಷಕರು, ಕೊಠಡಿ ಮೇಲ್ವಿಚಾರಕರು ತಮ್ಮ ಕರ್ತವ್ಯಗಳಲ್ಲಿ ಯಾವುದೇ ಲೋಪವಾಗದಂತೆ ಜವಾಬ್ದಾರಿಯಿಂದ ಹಾಗೂ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದರು.ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತಗೊಂಡ ಅಧಿಕಾರಿಗಳು, ಉಪನ್ಯಾಸಕರು ಪರೀಕ್ಷಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪರೀಕ್ಷಾ ಕೇಂದ್ರದ ಹೊರವಲಯ ಹಾಗೂ ಕೊಠಡಿಯ ಒಳಗೆ ಶಿಸ್ತುಬದ್ಧವಾಗಿ ಪರೀಕ್ಷಾ ನಿಯಮಗಳ ಉಲ್ಲಂಘನೆಯಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಸಬೇಕು ಎಂದು ನಿರ್ದೇಶನ ನೀಡಿದರು.ತ್ರಿ ಸದಸ್ಯ ಕಮಿಟಿ: ಪ್ರಶ್ನೆ ಪತ್ರಿಕೆ ಬಂಡಲ್ ತೆಗೆದುಕೊಂಡುಹೋಗಲು ಪ್ರತಿ ತಾಲೂಕಿಗೂ ತಹಸೀಲ್ದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಪ್ರಿನ್ಸಿಪಾಲ್ ಒಳಗೊಂಡ ತ್ರಿ ಸದಸ್ಯ ಸಮಿತಿ ರಚಿಸಲಾಗಿದೆ. ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ವಾಹನಕ್ಕೆ ಜಿಪಿಎಸ್ ಕಡ್ಡಾಯಗೊಳಿಸಲಾಗಿದೆ. ಪೊಲೀಸ್ ಬಂದೋಬಸ್ತ್‌ನಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕಿಗೆ ನಿಗದಿಪಡಿಸಿದ ಸಮಯಕ್ಕೆ ಅನುಗುಣವಾಗಿ ತೆಗೆದುಕೊಂಡು ಹೋಗಬೇಕು ಎಂದರು.200 ಮೀಟರ್ ಪ್ರದೇಶ ನಿಷೇಧ: ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್‌ವರೆಗೆ ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ನಿಷೇಧಿತ ವಲಯದಲ್ಲಿ ಝೆರಾಕ್ಸ್ ಹಾಗೂ ಸೈಬರ್ ಕೆಫೆಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆ ಪ್ರಭಾರ ಉಪನಿರ್ದೇಶಕ ಬಸರಾಜ ಇಟ್ಟಿಗುಡಿ ಮಾತನಾಡಿ, ಜಿಲ್ಲೆಯಲ್ಲಿ 4,924 ಪುನರಾವರ್ತಿತ, 9 ಖಾಸಗಿ ಹಾಗೂ ಫಲಿತಾಂಶ ಸುಧಾರಣೆ ಬಯಿಸಿ 771 ವಿದ್ಯಾರ್ಥಿಗಳು ಸೇರಿ 5,704 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದಾರೆ ಎಂದರು.ಸಭೆಯಲ್ಲಿ ವಿವಿಧ ತಾಲೂಕುಗಳ ತಹಸೀಲ್ದಾರರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಇದ್ದರು.

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾ ಕಡ್ಡಾಯ...ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಸುವ್ಯವಸ್ಥೆಯಲ್ಲಿ ಇರುವಂತೆ ನೋಡಿಕೊಳ್ಳಬೇಕು. ಪ್ರಶ್ನೆ ಪತ್ರಿಕೆ ಬಂಡಲ್ ತೆರೆಯುವಾಗ ಮತ್ತು ಉತ್ತರ ಪತ್ರಿಕೆ ಬಂಡಲ್‌ಗಳನ್ನು ಕಡ್ಡಾಯವಾಗಿ ಸಿಸಿ ಕ್ಯಾಮೆರಾದ ಕಣ್ಗಾವಲಿನಲ್ಲಿ ಸೀಲ್ ಮಾಡಬೇಕು. ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆ ಬಂಡಲ್‌ಗಳನ್ನು ಸೂಕ್ತ ಪೊಲೀಸ್ ಬಂದೋಬಸ್ತ್‌ನಲ್ಲಿ ಸಲ್ಲಿಸಬೇಕು ಎಂದರು.ಪರೀಕ್ಷಾ ಕೇಂದ್ರಗಳಿಗೆ ಬಂದೋಬಸ್ತ್: ಪರೀಕ್ಷೆ ನಡೆಯುವ ಎಲ್ಲ ಪರೀಕ್ಷಾ ಕೇಂದ್ರಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಲು ಹಾಗೂ ಆರೋಗ್ಯ ಶುಶ್ರೂಷಕಿಯರನ್ನು ನಿಯೋಜನೆ ಮಾಡಬೇಕು ಎಂದು ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಸೂಚನೆ ನೀಡಿದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ