ಬಾಂಗ್ಲಾದೇಶದಲ್ಲಿನ ಹಿಂದೂಗಳನ್ನು ಸಂರಕ್ಷಿಸಿ

KannadaprabhaNewsNetwork | Published : Aug 20, 2024 12:56 AM

ಸಾರಾಂಶ

ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ರಕ್ಷಣೆ ಮತ್ತು ದೇವಾಲಯಗಳ ಸಂರಕ್ಷಣೆ ಮಾಡಲು ಭಾರತ ಸರ್ಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ವೇದಿಕೆಯಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಹಿಂದೂ ಜನಜಾಗೃತಿ ವೇದಿಕೆಯ ಗೋವಿಂದರಾಜು ಮಾಧ್ಯಮದೊಂದಿಗೆ ಮಾತನಾಡಿ, ಕೆಲವು ದಿನಗಳಿಂದ ಬಾಂಗ್ಲಾ ದೇಶದಲ್ಲಿ ಮೀಸಲಾತಿ ವಿರುದ್ಧದ ಚಳವಳಿಯು ಅತ್ಯಂತ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಬಾಂಗ್ಲಾ ದೇಶದಲ್ಲಿರುವ ಹಿಂದೂಗಳ ರಕ್ಷಣೆ ಮತ್ತು ದೇವಾಲಯಗಳ ಸಂರಕ್ಷಣೆ ಮಾಡಲು ಭಾರತ ಸರ್ಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿ ವೇದಿಕೆಯಿಂದ ಸೋಮವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ಹಿಂದೂ ಜನಜಾಗೃತಿ ವೇದಿಕೆಯ ಗೋವಿಂದರಾಜು ಮಾಧ್ಯಮದೊಂದಿಗೆ ಮಾತನಾಡಿ, ಕೆಲವು ದಿನಗಳಿಂದ ಬಾಂಗ್ಲಾ ದೇಶದಲ್ಲಿ ಮೀಸಲಾತಿ ವಿರುದ್ಧದ ಚಳವಳಿಯು ಅತ್ಯಂತ ಹಿಂಸಾತ್ಮಕ ಸ್ವರೂಪವನ್ನು ಪಡೆದುಕೊಂಡಿದೆ. ಪ್ರಧಾನಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ, ದೇಶದಿಂದ ಪಲಾಯನ ಮಾಡಿದ್ದಾರೆ. ಬಾಂಗ್ಲಾದೇಶದಲ್ಲಿ ಮೀಸಲಾತಿ ವಿಚಾರದಲ್ಲಿ ಆರಂಭವಾದ ಹಿಂಸಾಚಾರ ಇದೀಗ ತಾರಕಕ್ಕೇರಿದೆ. ಈ ಹಿಂಸಾಚಾರ ಈಗ ಅರಾಜಕತೆಗೆ ತಿರುಗಿದೆ. ಸರ್ಕಾರ ವಿರೋಧಿ ಚಳವಳಿಯು ಈಗ ಹಿಂದೂಗಳ ವಿರುದ್ಧ ಶುರುವಾಗಿದೆ. ಬಾಂಗ್ಲಾದೇಶದ ೨೭ ಸ್ಥಳಗಳಲ್ಲಿ ಹಿಂದೂಗಳನ್ನು ಗುರಿಯಾಗಿಸಲಾಗಿದೆ. ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಗುರಿಯಾಗಿಸಿ ಕೊಲ್ಲುವುದು, ಹಿಂದೂ ಮನೆಗಳ ಮೇಲೆ ದಾಳಿ ಮಾಡುವುದು, ಹಿಂದೂ ಅಂಗಡಿಗಳನ್ನು ನಾಶ ಮಾಡುವುದು, ಹಿಂದೂ ದೇವಾಲಯಗಳನ್ನು ಕೆಡಗುವುದು ಮತ್ತು ಸುಡುವುದು, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ಹಿಂದೂಗಳು ಪಲಾಯನ ಮಾಡುವುದು ಇತ್ಯಾದಿ ದೌರ್ಜನ್ಯಗಳು ನಡೆಯುತ್ತಿವೆ ಎಂದರು. ಹಿಂದೂ ಕಾರ್ಪೊರೇಟರ್‌ಗಳ ಕೊಲೆಯಾಗಿದೆ. ಒಬ್ಬ ಹಿಂದೂ ಪತ್ರಕರ್ತನನ್ನು ಕೊಲೆ ಮಾಡಲಾಗಿದೆ. ಈ ಘಟನೆಗಳಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಲ್ಲಿ ತೀವ್ರ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸೇನೆಯು ಹಿಂದೂಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದರೂ ಭಾರತ ಸರ್ಕಾರ ಅದರ ಮೇಲೆ ಅವಲಂಬಿಸದೆ ಹಿಂದೂ ಸಮಾಜ ಮತ್ತು ದೇವಾಲಯಗಳ ಸುರಕ್ಷತೆಗೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಬೇಡಿಕೆಗೆ ಸ್ಪಂದಿಸಿ: ಬಾಂಗ್ಲಾ ದೇಶದಲ್ಲಿ "ವೆಸ್ಟೆಡ್ ಪ್ರಾಪರ್ಟಿ ಆಕ್ಟ್ " (ಶತ್ರು ಆಸ್ತಿ ಕಾಯಿದೆ) ಅಡಿಯಲ್ಲಿ, ೧೯೬೫ ಮತ್ತು ೨೦೦೬ರ ನಡುವೆ ಹಿಂದೂಗಳ ಸುಮಾರು ೨೬ ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಇದರಿಂದ ೧೨ ಲಕ್ಷ ಹಿಂದೂ ಕುಟುಂಬಗಳು ತೊಂದರೆಗೆ ಸಿಲುಕಿದೆ. ೨೦೧೧ರ ಜನಗಣತಿಯಲ್ಲಿ ಈ ಸಂಖ್ಯೆ ಕೇವಲ ೮.೫ ಪ್ರತಿಶತಕ್ಕೆ ಇಳಿದಿದೆ. ೨೦೨೨ರಲ್ಲಿ ಇದು ಶೇಕಡಾ ೮ಕ್ಕಿಂತ ಕಡಿಮೆ ಬರಲಿದೆ. ಅದೇ ಸಮಯದಲ್ಲಿ, ಮುಸ್ಲಿಮರ ಜನಸಂಖ್ಯೆಯು ೧೯೫೧ರಲ್ಲಿ ೭೬ ಪ್ರತಿಶತದಿಂದ ೨೦೨೨ ರಲ್ಲಿ ೯೧ ಪ್ರತಿಶತಕ್ಕಿಂತ ಹೆಚ್ಚಾಯಿತು ಎಂದರು. ಹಿಂದೂ ಅಮೇರಿಕನ್ ಫೌಂಡೇಶನ್ ವರದಿಯ ಪ್ರಕಾರ, ೧೯೬೪ ಮತ್ತು ೨೦೧೩ ರ ನಡುವೆ ೧೧ ದಶಲಕ್ಷಕ್ಕೂ ಹೆಚ್ಚು ಹಿಂದೂಗಳು ಧಾರ್ಮಿಕ ಕಿರುಕುಳದಿಂದಾಗಿ ಬಾಂಗ್ಲಾದೇಶದಿಂದ ಪಲಾಯನ ಮಾಡಿದ್ದಾರೆ. ೨೦೧೧ ರ ಜನಗಣತಿಯಲ್ಲಿ, ೨೦೦೦ ಮತ್ತು ೨೦೧೦ರ ನಡುವೆ ದೇಶದ ಜನಸಂಖ್ಯೆಯಿಂದ ೧೦ ಲಕ್ಷ ಹಿಂದೂಗಳು ಕಣ್ಮರೆಯಾಗಿದ್ದಾರೆ. ಜನವರಿ ಮತ್ತು ಜೂನ್ ೨೦೧೬ ರ ನಡುವೆ ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಹಿಂಸಾಚಾರದಲ್ಲಿ ೬೬ ಮನೆಗಳನ್ನು ಸುಟ್ಟುಹಾಕಲಾಯಿತು, ೨೪ ಜನರು ಗಾಯಗೊಂಡರು ಮತ್ತು ಕನಿಷ್ಠ ೪೯ ದೇವಾಲಯಗಳು ನಾಶವಾದವು. ಈ ಅಪಾಯಕಾರಿ ಪರಿಸ್ಥಿತಿಯಿಂದ ಹಿಂದೂಗಳು ರಕ್ಷಣೆ ಪಡೆಯಲು ಬೇಡಿಕೆಗೆ ಸ್ಪಂದಿಸಬೇಕಾಗಿದೆ.

ಮೊದಲನೆಯದಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ, ಮನೆಗಳ ಲೂಟಿ, ದೇವಾಲಯಗಳ ಮೇಲಿನ ದಾಳಿ, ಪ್ರತಿಮೆಗಳ ಧ್ವಂಸ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯವನ್ನು ನಿಲ್ಲಿಸಲು ಅಲ್ಲಿನ ಸೇನೆಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಬೇಕು. ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ಹೆಚ್ಚುತ್ತಿರುವ ದಾಳಿಯನ್ನು ಗಮನದಲ್ಲಿಟ್ಟುಕೊಂಡು ಅಲ್ಲಿನ ಹಿಂದೂಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಮತ್ತು ಅವರಿಗೆ ತಕ್ಷಣದ ಭದ್ರತೆಯನ್ನು ಒದಗಿಸಬೇಕು ಎಂದು ಆಗ್ರಹಿಸಿದರು.

ತಕ್ಷಣವೇ ಪರಿಹಾರ ನೀಡಿ: ಅಲ್ಲಿನ ಹಿಂದೂಗಳ ಪ್ರಾಣ ಅಥವಾ ಆಸ್ತಿಪಾಸ್ತಿಗೆ ಯಾವುದೇ ನಷ್ಟ ಉಂಟಾಗಿದ್ದರೂ ತಕ್ಷಣವೇ ಪರಿಹಾರ ನೀಡಬೇಕು. ಭಾರತ ಸರ್ಕಾರವು ತಕ್ಷಣವೇ ಈ ವಿಷಯವನ್ನು ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಬೇಕು ಮತ್ತು ಬಾಂಗ್ಲಾದೇಶಕ್ಕೆ ವಿಶ್ವಸಂಸ್ಥೆಯ ನಿಯೋಗದ ಭೇಟಿಗೆ ಒತ್ತಾಯಿಸಬೇಕು. ಬಾಂಗ್ಲಾ ದೇಶದಲ್ಲಿ ಹಿಂಸಾಚಾರದಿಂದ ಸ್ಥಳಾಂತರಗೊಂಡಿರುವ ಮತ್ತು ಭಾರತದಲ್ಲಿ ಆಶ್ರಯ ಪಡೆಯುವ ಹಿಂದೂಗಳಿಗೆ ’ಪೌರತ್ವ ತಿದ್ದುಪಡಿ ಕಾಯ್ದೆ’ ಅಡಿಯಲ್ಲಿ ಭಾರತ ಸರ್ಕಾರವು ಆಶ್ರಯ ನೀಡಬೇಕು. ಇದಲ್ಲದೇ ಸುಮಾರು ೫ ಕೋಟಿ ಬಾಂಗ್ಲಾ ನುಸುಳುಕೋರರು ಈಗಾಗಲೇ ಭಾರತವನ್ನು ಪ್ರವೇಶಿಸಿದ್ದಾರೆ. ಈ ಘಟನೆಯ ನಂತರ ಈ ನುಸುಳುವಿಕೆ ಮತ್ತೆ ಹೆಚ್ಚಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ, ಭಾರತದ ಗಡಿಯಲ್ಲಿ ಬಿಗಿ ಬಂದೋಬಸ್ತ್ ಮಾಡಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯದ ಭಯಾನಕ ವೀಡಿಯೋಗಳು ಮುನ್ನೆಲೆಗೆ ಬರುತ್ತಿದ್ದು, ಭಾರತ ಸರ್ಕಾರ ಸಕಾಲದಲ್ಲಿ ಇತ್ತ ಗಮನ ಹರಿಸದಿದ್ದರೆ ಬಾಂಗ್ಲಾದೇಶ ಮತ್ತೊಂದು ಪಾಕಿಸ್ತಾನವಾಗುವ ಸಾಧ್ಯತೆ ಇದೆ ಎಂದು ಸ್ಪಷ್ಟಪಡಿಸಿದೆ. ಇಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಹತ್ಯಾಕಾಂಡ ನಡೆಯಬಹುದು. ಈ ಘಟನೆಯ ನಂತರ ಜಿಹಾದಿ ಭಯೋತ್ಪಾದಕರ ಮನೋಬಲ ಹೆಚ್ಚಬಹುದು ಮತ್ತು ಅವರು ತಮ್ಮ ಗುಪ್ತ ಬೆಂಬಲಿಗರ ಸಹಾಯದಿಂದ ಭಾರತದಲ್ಲಿ ಹಿಂಸಾಚಾರವನ್ನು ಹರಡಬಹುದು. ಆದ್ದರಿಂದ, ಭಾರತೀಯ ಪೊಲೀಸ್ ವ್ಯವಸ್ಥೆ ಮತ್ತು ಆಡಳಿತವು ಎಚ್ಚರವಾಗಿರಬೇಕು ಮತ್ತು ಬಾಂಗ್ಲಾ ದೇಶದ ಹಿಂದೂಗಳು ಮತ್ತು ದೇವಾಲಯಗಳ ಸುರಕ್ಷತೆಗಾಗಿ ಭಾರತ ಸರ್ಕಾರ ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಕೋರಿದರು. ಪ್ರತಿಭಟನೆಯಲ್ಲಿ ಹಿಂದು ಜನಜಾಗೃತಿಯ ವೆಂಕಟೇಶ್, ಪುಟ್ಟಸ್ವಾಮಿ, ಬಸವರಾಜು, ಬ್ಯಾಟಚಾರ್, ಅನಂತರಾಜು, ಶಶಿಧರ್, ಸುರೇಸ್, ಮೋಹನ್ ಕುಮಾರ್, ಪವನ್, ಸೋಮಶೇಖರ್, ಶಿವಣ್ಣ ಇತರರು ಉಪಸ್ಥಿತರಿದ್ದರು.

Share this article