ಕನಕಪುರ: ಎಂದೆಂದೂ ಕಂಡರಿಯದ ಭೀಕರ ಬರಗಾಲ ರಾಜ್ಯದಲ್ಲಿ ತಾಂಡವವಾಡುತ್ತಿದೆ. ಅದರಲ್ಲೂ ರಾಮನಗರ ಜಿಲ್ಲೆಯ ಜನ ಜಾನುವಾರುಗಳಿಗೆ ಕುಡಿಯುವ ನೀರು ಸಿಗದಂತಹ ಪರಿಸ್ಥಿತಿ ಉಂಟಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸುವಂತೆ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜನತೆಗೆ ಕುಡಿಯುವ ನೀರಿನ ಜೊತೆಗೆ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ಕಳೆದ ಆರು ತಿಂಗಳಿಂದ ಮಳೆಯಿಲ್ಲದೆ ರೈತರು ಬೆಳೆ ಬೆಳೆಯಲು ಸಾಧ್ಯವಾಗದೆ, ಬೆಳೆದಿರುವ ಅಲ್ಪ-ಸ್ವಲ್ಪ ಬೆಳೆಗಳನ್ನು ಕಾಡು ಪ್ರಾಣಿಗಳು ನಾಶ ಮಾಡುತ್ತಿರುವುದರಿಂದ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಜನಹಿತ ಬಯಸಬೇಕಾಗಿದ್ದ ಸ್ಥಳೀಯ ಜನಪ್ರತಿನಿಧಿಗಳು ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಮುಳುಗಿ ಹೋಗಿದ್ದು ಸಾಮಾನ್ಯ ಜನರ, ರೈತರ ಕಷ್ಟವನ್ನು ಕೇಳುವವರು ಇಲ್ಲದಂತಾಗಿದೆ ಎಂದು ಆರೋಪಿಸಿದರು.ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಜನಪ್ರತಿನಿಧಿಗಳ ಅನುಮತಿಗಾಗಿ ಕಾಯದೆ ಶೀಘ್ರವಾಗಿ ಅಧಿಕಾರಿಗಳ ಸಭೆ ಕರೆದು ಬರ ನಿರ್ವಹಣೆಗೆ ಸೂಚಿಸುವುದರ ಜೊತೆಗೆ ಮೊದಲು ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಜಿಲ್ಲೆಯಲ್ಲಿ ಪಂಚಾಯಿತಿಗೊಂದರಂತೆ ಗೋಶಾಲೆ ತೆರೆಯುವ ಮೂಲಕ ಜಾನುವಾರುಗಳ ನೆರವಿಗೆ ಬರುವುದರ ಜೊತೆಗೆ ಕಾಡು ಪ್ರಾಣಿಗಳ ಹಾವಳಿಯನ್ನು ತಪ್ಪಿಸುವಂತೆ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಕುಮಾರ್, ಜಿಲ್ಲಾ ಕಾರ್ಯದರ್ಶಿ ಪಡುವಣಗೆರೆ ಕುಮಾರ್, ಮುಖಂಡ ಶಿವರಾಜು, ಸಾತನೂರು ಹೋಬಳಿ ಅಧ್ಯಕ್ಷ ತಿಮ್ಮೇಗೌಡ, ಮುಖಂಡರಾದ ಕೆಂಪಣ್ಣ, ರಾಘವೇಂದ್ರ, ಪುಟ್ಟ ಮಾದೇಗೌಡ, ಶಿವರಾಮು, ಜಯರಾಮನ್, ಯುವ ಮುಖಂಡರಾದ ಅಭಿಷೇಕ್, ರವಿಕುಮಾರ್, ಶಿವಲಿಂಗ ಮತ್ತಿತರರು ಉಪಸ್ಥಿತರಿದ್ದರು. ಕೆ ಕೆ ಪಿ ಸುದ್ದಿ 01:ಕನಕಪುರದಲ್ಲಿ ರೈತ ಸಂಘದ ರಾಜ್ಯ ಸಂಚಾಲಕ ಚೀಲೂರು ಮುನಿರಾಜು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.