ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಡಾ.ಹೊ.ಶ್ರೀನಿವಾಸಯ್ಯರ ಹೆಸರಿಡಲು ಕೇಂದ್ರಕ್ಕೆ ಮನವಿ: ಸಚಿವ ಸಿಆರ್‌ಎಸ್

KannadaprabhaNewsNetwork | Published : Jan 9, 2025 12:47 AM

ಸಾರಾಂಶ

ಈ ಹಿಂದೆ ನಾನು ಆರೋಗ್ಯ ಸಚಿವನಾಗಿದ್ದಾಗ ದಕ್ಷಿಣ ಭಾರತದಲ್ಲಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನ ಸ್ಥಾಪಿಸಲು ಪ್ರಸ್ತಾವನೆ ಬಂದಿತ್ತು. ಅನುಸಂಧಾನ ಪರಿಷತ್‌ ನಿರ್ದೇಶಕರಾಗಿದ್ದ ಡಾ. ಬಿ.ಟಿ.ಚಿದಾನಂದಮೂರ್ತಿ ಅವರು ಡಾ. ಹೊ. ಶ್ರೀನಿವಾಸಯ್ಯರ ಮೂಲಕ ನನ್ನ ಗಮನಕ್ಕೆ ತಂದು ಎಂ.ಹೊಸೂರು ಬಳಿ 15 ಎಕರೆ ಜಾಗ ಮೀಸಲಿರಿಸಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಮಹಾತ್ಮ ಗಾಂಧೀಜಿ ಅವರ ಸಂಪರ್ಕ ಪಡೆದು ಅವರ ವಿಚಾರಗಳನ್ನು ನಾಡಿನಾದ್ಯಂತ ಪ್ರಚಾರ ಪಡಿಸಿದ್ದ ಡಾ.ಹೊ.ಶ್ರೀನಿವಾಸಯ್ಯ ಅವರ ಹೆಸರನ್ನು ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಇಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಭರವಸೆ ನೀಡಿದರು.

ತಾಲೂಕಿನ ಚೌದ್ರಿಕೊಪ್ಪಲು ಗ್ರಾಮದಲ್ಲಿ ಡಾ.ಹೊ.ಶ್ರೀನಿವಾಸಯ್ಯ ಚಾರಿಟಬಲ್ ಟ್ರಸ್ಟ್, ಚೌದ್ರಿ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಹಾಗೂ ಬೆಂಗಳೂರಿನ ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ಡಾ.ಹೊ.ಶ್ರೀನಿವಾಸಯ್ಯ ಜನ್ಮಶತಮಾನೋತ್ಸವ ಆಚರಣೆ ಹಾಗೂ ಜಯಲಕ್ಷ್ಮಿ ಮತ್ತು ಡಾ.ಹೊ.ಶ್ರೀನಿವಾಸಯ್ಯ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಈ ಹಿಂದೆ ನಾನು ಆರೋಗ್ಯ ಸಚಿವನಾಗಿದ್ದಾಗ ದಕ್ಷಿಣ ಭಾರತದಲ್ಲಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನ ಸ್ಥಾಪಿಸಲು ಪ್ರಸ್ತಾವನೆ ಬಂದಿತ್ತು. ಅನುಸಂಧಾನ ಪರಿಷತ್‌ ನಿರ್ದೇಶಕರಾಗಿದ್ದ ಡಾ. ಬಿ.ಟಿ.ಚಿದಾನಂದಮೂರ್ತಿ ಅವರು ಡಾ. ಹೊ. ಶ್ರೀನಿವಾಸಯ್ಯರ ಮೂಲಕ ನನ್ನ ಗಮನಕ್ಕೆ ತಂದು ಎಂ.ಹೊಸೂರು ಬಳಿ 15 ಎಕರೆ ಜಾಗ ಮೀಸಲಿರಿಸಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಲಾಯಿತು ಎಂದರು.

ಇದರಿಂದ ತಾಲೂಕಿನಲ್ಲಿ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನ ನಿರ್ಮಾಣವಾಗಿದ್ದು, ಇದಕ್ಕೆ ಸಂಪೂರ್ಣ ಪ್ರೇರಣೆ ಡಾ. ಹೊ ಶ್ರೀನಿವಾಸಯ್ಯ ಅವರು ಎಂದು ಆಸ್ಪತ್ರೆ ನಿರ್ಮಾಣದ ನೆನಪನ್ನು ಮೆಲುಕು ಹಾಕಿದರು.

ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಡಾ.ಹೊ.ಶ್ರೀನಿವಾಸಯ್ಯ ಅವರಂತೆ ಪ್ರತಿಯೊಬ್ಬ ಪ್ರಜೆಯೂ ಎಚ್ಚೆತ್ತಾಗ ಮಾತ್ರ ದೇಶದ ಭವಿಷ್ಯ ಸಾಕಾರವಾಗಿ ವ್ಯಕ್ತಿಯ ಮಹತ್ವದಿಂದ ಕಾರ್ಯಕ್ರಮ ಉಜ್ಬಲಿಸುತ್ತದೆ. ಸನ್ಯಾಸಿಯ ಮೊದಲ ಕೆಲಸ ಸೇವೆ ಎಂದು ಅನೇಕ ಮಜಲುಗಳಲ್ಲಿ ಸಾರಿದ ಹಿರಿಯ ಚೇತನರ ಸರಳತೆ ಇಂದಿನ ಸಮಾಜಕ್ಕೆ ಅಗತ್ಯವಾದ ಆಸ್ತಿ ಎಂದು ತಿಳಿಸಿದರು.

ವಿಧಾನಪರಿಷತ್ ಮಾಜಿ ಸದಸ್ಯ ಡಿ.ಆರ್.ಪಾಟೀಲ್ ಮತ್ತು ಬೆಂಗಳೂರಿನ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ನಾಡೋಜ ವೂಡೇ ಪಿ.ಕೃಷ್ಣ ಮಾತನಾಡಿದರು. ಇದೇ ವೇಳೆ ಪ್ರೊ. ಜಿ.ಬಿ. ಶಿವರಾಜ್ ಅವರು ಬರೆದಿರುವ ಕರ್ನಾಟಕದ ಗಾಂಧಿ ಡಾ. ಹೊ ಶ್ರೀನಿವಾಸಯ್ಯ ಕೃತಿಯನ್ನು ಬಿಡುಗಡೆ ಮಾಡಲಾಯಿತು.

ಸಮಾರಂಭದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಡಾ. ಹೊ. ಶ್ರೀನಿವಾಸಯ್ಯ ಅವರ ಪುತ್ರಿ ಶಶಿಕೃಷ್ಣ, ಗಾಂಧಿ ಸ್ಮಾರಕ ನಿದಿ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಮು, ಮಂಡ್ಯದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ, ರಾಜ್ಯ ಸಾಯವಯ ಕೃಷಿ ಉನ್ನತ ಸಮಿತಿ ಮಾಜಿ ಉಪಾಧ್ಯಕ್ಷ ಎಚ್.ಟಿ.ಕೃಷ್ಣೇಗೌಡ, ಸಮಾಜ ಸೇವಕ ಮಾವಿನಕೆರೆ ಸುರೇಶ್, ದೇವರ ಮಲ್ಲನಾಯಕನಹಳ್ಳಿ ಗ್ರಾಪಂ ಅಧ್ಯಕ್ಷೆ ಶೃತಿ ಕೃಷ್ಣ ಸೇರಿದಂತೆ ಹಲವರು ಇದ್ದರು.

Share this article