ಗದಗ: ಗದಗ ಬೈಪಾಸ್, ಇಳಕಲ್ ಕಾರವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಅಗತ್ಯ ಭೂಸ್ವಾಧೀನ ಮಾಡಿಕೊಟ್ಟರೆ ಕೇಂದ್ರ ಸರ್ಕಾರ ಯೋಜನೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಹಾವೇರಿ-ಗದಗ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಮಂಗಳವಾರ ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆಯ ನಂತರ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.ಇಂದು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಹೊಸ ಕಾಮಗಾರಿಗಳ ಕುರಿತು ಚರ್ಚೆ ನಡೆಸಲಾಯಿತು. ಈಗ ನಡೆಯುತ್ತಿರುವ ಕಾಮಗಾರಿಗಳಿಗೆ ಇರುವ ಸಮಸ್ಯೆ ಚರ್ಚೆ ಮಾಡಲಾಯಿತು. ಬಾಗಲಕೋಟೆ ಜಿಲ್ಲೆಯ ಶಾಂತಗಿರಿಯಿಂದ ಬರುವ ರಾಷ್ಟ್ರೀಯ ಹೆದ್ದಾರಿ ಬಳಿ ಕೆಲಸ ನಿಂತಿದ್ದು, ಅದನ್ನು ಪುನ ಆರಂಭ ಮಾಡಿದ್ದೇವೆ. ಗಜೇಂದ್ರಗಡ ಬೈಪಾಸ್ ಕಾಮಗಾರಿ ಆರಂಭವಾಗಿದೆ . ಗದಗ ಬೈಪಾಸ್ ಡಿಪಿಆರ್ ಸಿದ್ದಪಡಿಸಲಾಗಿದ್ದು, ₹473 ಕೋಟಿ ಅಂದಾಜು ಮಾಡಲಾಗಿದೆ. ₹73 ಕೋಟಿ ಭೂ ಸ್ವಾಧಿನಕ್ಕೆ ಬೇಕಾಗಿದೆ. ನಾನು ಸಿಎಂ ಇದ್ದಾಗ ₹ 38 ಕೋಟಿ ಮೀಸಲಿಡಲಾಗಿದೆ. ಶೀಘ್ರವೇ ಭೂ ಸ್ವಾಧೀನ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ರಾಜ್ಯ ಸರ್ಕಾರ ಕಾರ್ಯ ಚುರುಕುಗೊಳಿಸಿದರೆ ಶೀಘ್ರವೇ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ನರಗುಂದ ಬೈಪಾಸ್ ಕಾಮಗಾರಿ ನಡೆಯುತ್ತಿದೆ. ಅದರ ಪ್ರಗತಿ ಮಾಡಬೇಕಿದೆ ಎಂದು ಹೇಳಿದರು.
ಇಳಕಲ್ ಕಾರವಾರ ರಾಷ್ಟ್ರೀಯ ಹೆದ್ದಾರಿ ಮಾಡಲು ಈಗಾಗಲೇ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಆದ್ಯತೆ ಮೇಲೆ ಮಾಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳೂ ಕೂಡ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದಾರೆ. ಹೊಸ ಪಟ್ಟಿಯಲ್ಲಿ ಸೇರಿಸುವುದು ವಿಳಂಬವಾಗುವ ಸಾಧ್ಯತೆ ಇರುವುದರಿಂದ ತ್ವರಿತಗತಿಯಲ್ಲಿ ಮೇಲ್ದರ್ಜೆಗೇರಿಸಲು ಬೇಕಾದ ಕ್ರಮ ಕೈಗೊಳ್ಳುವ ಪ್ರಯತ್ನ ನಡೆದಿದೆ ಎಂದರು.ಹಾವೇರಿ ಮತ್ತು ಗದಗ ರೈಲ್ವೆ ಯೋಜನೆಗಳ ಕುರಿತು ಮುಂದಿನ ತಿಂಗಳು ಅಧಿಕಾರಿಗಳ ಜತೆ ಸಭೆ ನಡೆಸಿ ಗದಗ ರೈಲು ನಿಲ್ದಾಣ, ರೈಲ್ವೆ ಮೇಲ್ಸೇತುವೆ ನಿರ್ಮಾಣದ ಕುರಿತು ಚರ್ಚೆ ನಡೆಸಲಾಗುವುದು. ಗದಗ ಯಲವಿಗಿ ರೈಲ್ವೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ ₹250 ಕೋಟಿ ಮೀಸಲಿಡಲಾಗಿದೆ. ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಯೋಜನೆ ಜಾರಿಗೆ ಅನುಕೂಲವಾಗುತ್ತದೆ. ವರ್ಷದ ಆರಂಭದಲ್ಲಿ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿದರೆ ವರ್ಷಾಂತ್ಯದಲ್ಲಿ ಕೇಂದ್ರದ ಹಣ ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ಹೇಳಿದರು.