ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಶಿವಮೊಗ್ಗ ನಗರದ ಶ್ರೀ ಶಾರದಾದೇವಿ ಅಂಧರ ವಿಕಾಸ ಶಾಲಾ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವತಿಯಿಂದ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ 53 ಜನ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ವಿತರಿಸಿ ಮಾತನಾಡಿ, ಯಾವುದಾದರೂ ಯೋಜನೆಗಳಲ್ಲಿ ಅನುದಾನದ ಕೊರತೆ ಅಥವಾ ಇನ್ನಾವುದೇ ರೀತಿಯ ತೊಂದರೆ ಉಂಟಾದರೆ ನನ್ನ ಗಮನಕ್ಕೆ ತನ್ನಿ, ಪರಿಹಾರ ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ನಮ್ಮ ಕೆಲಸ ಕೇವಲ ಭಾಷಣಗಳಿಗೆ ಮಾತ್ರ ಸೀಮಿತವಾಗಿರಬಾರದು. ಅನುಷ್ಠಾನ ಮತ್ತು ಸೇವೆ ನೀಡುವಲ್ಲಿ ಮುಂದಾಗಬೇಕು ಎಂದರು.
ಇನ್ನು, ವಿಕಲಚೇತನ ಮಕ್ಕಳಿಗೆ ಈ ಯೋಜನೆಗಳು ತಲುಪಬೇಕಾಗಿದ್ದು, ಶಿಕ್ಷಣ ಇಲಾಖೆ ಅಡಿಯಲ್ಲಿ ಸಿಗುವ ಉಚಿತ ಸಮವಸ್ತ್ರ, ಶೂ, ಹಾಗೂ ಇನ್ನಿತರ ಸೌಲಭ್ಯಗಳನ್ನು ರಾಜ್ಯದ ಎಲ್ಲಾ ವಿಕಲಚೇತನರ ಮಕ್ಕಳ ಶಾಲೆಗಳಿಗೆ ವಿಸ್ತರಿಸಲು ಕೂಡಲೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.ಸಮಾಜದಲ್ಲಿ ಎಲ್ಲಾ ವರ್ಗದ ಜನರಿಗೂ ಸಮಾನತೆಯನ್ನು ನೀಡುವ ಕೆಲಸ ಸರ್ಕಾರದ ಯೋಜನೆಗಳಿಂದ ಆಗುತ್ತಿದೆ. ಸಮಾಜದಲ್ಲಿ ಇತರರಿಗಿಂತ ನಾವು ಭಿನ್ನವಾಗಿದ್ದೇವೆ ಎನ್ನುವ ಮನೋಭಾವ ವಿಕಲಚೇತನರಿಗೆ ಮೂಡಬಾರದು ಎಂದು ಸರ್ಕಾರ ವಿಕಲಚೇತನರಿಗೆ ಸಮಾಜದಲ್ಲಿ ಸಮಾನತೆಯನ್ನು ತರಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 5 ಗ್ಯಾರಂಟಿಗಳ ಮೂಲಕ ಜೊತೆ ಸಮಾಜದಲ್ಲಿ ಸಮಾನತೆಯನ್ನು ನೀಡುವ ಅನೇಕ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಈ ವೇಳೆ ವಿಕಲಚೇತನರ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಆರ್‌ಡಬ್ಲ್ಯೂಮತ್ತು ಎಂಆರ್ ಡಬ್ಲ್ಯೂಗಳು ತಾವು ಅನೇಕ ವರ್ಷಗಳಿಂದ ಗೌರವಧನದ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದು, ಸೇವೆ ಖಾಯಂಗೊಳಿಸುವಂತೆ ಸಚಿವರಿಗೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರವಿಕುಮಾರ್, ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರಾದ ಚಂದ್ರಭೂಪಾಲ್, ಸೂಡಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶಶಿರೇಖಾ, ಶಾರದಾ ಅಂಧರ ವಿಕಾಸ ಶಾಲೆಯ ಮುಖ್ಯಸ್ಥರಾದ ಈಶ್ವರ್ ಭಟ್, ಮತ್ತಿತರರು ಉಪಸ್ಥಿತರಿದ್ದರು.