ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
ಕಳೆದ ಕೆಲವು ದಿನಗಳ ಹಿಂದೆ ಸಾಲೂರು ಗ್ರಾಮದ ಜಾನುವಾರುಗಳು ನದಿ ದಾಟಿ ದ್ವೀಪಕ್ಕೆ ಮೇಯಲು ಹೋಗಿದ್ದು, ಮರಳಿ ಗ್ರಾಮಕ್ಕೆ ಬಂದಿರಲಿಲ್ಲ. ಈ ವಿಷಯವನ್ನು ಗ್ರಾಮಸ್ಥರು ಗ್ರಾಪಂ ಸದಸ್ಯ ಹಂಚಿನಮನೆ ರಾಘವೇಂದ್ರ ಅವರಿಗೆ ತಿಳಿಸಿದ್ದಾರೆ.
ಸದಸ್ಯ ರಾಘವೇಂದ್ರ ಅವರು ಭದ್ರಾ ವನ್ಯ ಜೀವಿ ಮುತ್ತೋಡಿ ವಿಭಾಗದ ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬೋಪಯ್ಯನವರ ಗಮನಕ್ಕೆ ತಂದಿದ್ದಾರೆ. ಅವರ ನಿರ್ದೇಶನದಂತೆ ಹೆಬ್ಬೆ ಉಪವಲಯ ಅರಣ್ಯಾಧಿಕಾರಿಗಳಾದ ದಯಾನಂದ್, ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಹಾಗೂ ಅರಣ್ಯ ರಕ್ಷಕ ಸಂಪ್ರೀತ್ ಅವರ ಗಮನಕ್ಕೆ ತಂದು ಸೋಮವಾರ ಹೆಬ್ಬೆ ವಲಯ ಅರಣ್ಯ ಇಲಾಖೆಯ ಬೋಟು ಪಡೆದು ಗ್ರಾಮಸ್ಥರ ಸಹಕಾರದಿಂದ ಕಾರ್ಯಾಚರಣೆ ನಡೆಸಲಾಯಿತು.ಬೋಟ್‌ಗೆ ಒಂದು ಹಸುವನ್ನು ಕಟ್ಟಿಕೊಂಡು ನಿಧಾನವಾಗಿ ಮತ್ತೊಂಡು ದಡಕ್ಕೆ ತರಲಾಯಿತು. ಆ ಸಂದರ್ಭದಲ್ಲಿ ಉಳಿದ ಹಸುಗಳು ಬೋಟನ್ನು ಹಿಂಬಾಲಿಸಿಕೊಂಡು ಸಾಲೂರು ಗ್ರಾಮಕ್ಕೆ ತಲುಪಿವೆ. ಅರಣ್ಯ ಇಲಾಖೆಯ ಸಹಕಾರದಿಂದ ಹಸುಗಳನ್ನು ರಕ್ಷಣೆ ಮಾಡಿದ ಸಂತೃಪ್ತಿ ಗ್ರಾಮಸ್ಥರಿಗೆ ಸಿಕ್ಕಿದೆ.