ವಿಷದ ಬಾಟಲಿ ನುಂಗಿದ್ದ ನಾಗರಹಾವು ರಕ್ಷಣೆ

KannadaprabhaNewsNetwork | Published : Feb 8, 2024 1:32 AM

ಸಾರಾಂಶ

ಸುಮಿತ್ ಪೂಜಾರಿ ನೀರೆ ಎಂಬವರ ಮನೆಯಲ್ಲಿ ನಾಗರಹಾವು ವಿಷದ ಬಾಟಲಿ ನುಂಗಿದ ಘಟನೆ ನಡೆದಿದ್ದು, ನೀರೆ ಗ್ರಾಮದ ಜಗದೀಶ್ ಎಂಬವರು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್‌ಗೆ ಕರೆ ಮಾಡಿ ಮಾಹಿತಿ ನೀಡಿದರು. ಗುರುರಾಜ್ ಸನಿಲ್ ಅವರು ಗೆಳೆಯರೊಂದಿಗೆ ತೆರಳಿ ಹಾವನ್ನು ಹಿಡಿದು ವಿಷದ ಬಾಟಲಿಯನ್ನು ಹೊರ ತೆಗೆದು ರಕ್ಷಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಾರ್ಕಳ

ವಿಷದ ಬಾಟಲಿಯನ್ನು ನುಂಗಿದ ನಾಗರಹಾವನ್ನು ಉರಗ ತಜ್ಞ ಗುರುರಾಜ್ ಸನಿಲ್ ಸುರಕ್ಷಿತವಾಗಿ ಹಿಡಿದು ಬಾಟಲಿ ಹೊರತೆಗೆದು ಹಾವನ್ನು ರಕ್ಷಿಸಿರುವ ಘಟನೆ ಕಾರ್ಕಳ ತಾಲೂಕಿನ ನೀರೆ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಸುಮಿತ್ ಪೂಜಾರಿ ನೀರೆ ಎಂಬವರ ಮನೆಯಲ್ಲಿ ಘಟನೆ ನಡೆದಿದ್ದು, ನೀರೆ ಗ್ರಾಮದ ಜಗದೀಶ್ ಎಂಬವರು ಉಡುಪಿಯ ಉರಗ ತಜ್ಞ ಗುರುರಾಜ್ ಸನಿಲ್‌ಗೆ ಕರೆ ಮಾಡಿ ಮಾಹಿತಿ ನೀಡಿದರು. ಗುರುರಾಜ್ ಸನಿಲ್ ಅವರು ಗೆಳೆಯರೊಂದಿಗೆ ತೆರಳಿ ಹಾವನ್ನು ಹಿಡಿದು ವಿಷದ ಬಾಟಲಿಯನ್ನು ಹೊರ ತೆಗೆದು ರಕ್ಷಣೆ ಮಾಡಿದ್ದಾರೆ.

ಸ್ಥಳೀಯ ಜಗದೀಶ್ ಹಾಗೂ ಅವರ ಗೆಳೆಯ ಸುಜಿತ್‌ ಎಂಬವರು ಹಾವು ಅವಿತಿದ್ದ ಶೌಚಾಲಯದ ನೆಲವನ್ನು ಪೂರ್ಣ ಒಡೆದು ಕೊನೆಗೆ ಅದರ ಅಡಿಪಾಯದ ಕಲ್ಲುಗಳನ್ನು ಕಿತ್ತು ತೆಗೆದಿದ್ದಾರೆ. ಗುರುರಾಜ್ ಹಾವನ್ನು ಹೊರಗೆ ತರುವಲ್ಲಿ ಯಶಸ್ವಿಯಾದರು. ನಂತರ ಹಾವನ್ನು ಹಿಡಿದು ಪೂರ್ತಿ ಹೊಟ್ಟೆ ಸೇರಿದ್ದ ವಿಷದ ಬಾಟಲಿಯನ್ನು ಬಹಳ ಜಾಗರೂಕತೆಯಿಂದ ತಳ್ಳುತ್ತಾ ಹೊರ ತೆಗೆದಿದ್ದಾರೆ. ಬಳಿಕ ಹಾವನ್ನು ನೀರೆ ಬೈಲೂರು ಸಮೀಪ ಕಾಡಿಗೆ ಬಿಡಲಾಗಿದೆ.

ಮನೆಯ ಹಟ್ಟಿಯನ್ನು ಹೊಕ್ಕ ಹಾವು ಕೋಳಿಯೊಂದನ್ನು ಕಚ್ಚಿ ಸಾಯಿಸಿ ಅದನ್ನು ನುಂಗಲು ಯತ್ನಿಸಿದೆ. ಆದರೆ ಕೋಳಿಯ ಕೊರಳ ಪಕ್ಕದಲ್ಲಿ ಬಿದ್ದಿದ್ದ ವಿಷದ ಬಾಟಲಿಯು ಹಾವಿನ ಬಾಯಿಗೆ ಸಿಕ್ಕಿದ್ದು, ಅದನ್ನೇ ನುಂಗಿದೆ.

ಹಾವುಗಳಿಗೆ ಯಾವುದೇ ಜೀವಿ ಅಥವಾ ವಸ್ತುಗಳನ್ನು ಮನುಷ್ಯರ ಹಾಗೆ ನಿಖರವಾಗಿ ಗುರುತಿಸುವ ದೃಷ್ಟಿ ವ್ಯವಸ್ಥೆಯೂ ಇಲ್ಲ ಹಾಗೂ ಮೂಗಿನ ಮೂಲಕ ವಾಸನೆಯನ್ನು ಗ್ರಹಿಸಿ ಪತ್ತೆ ಹಚ್ಚುವ ಶಕ್ತಿಯೂ ಇಲ್ಲ. ಅವುಗಳ ಕಣ್ಣಗಳು ಜೀವಿಗಳ ಅಥವಾ ವಸ್ತುಗಳ ಓಡಾಟದ ಚಲನೆಯನ್ನು ಮಾತ್ರವೇ ಗ್ರಹಿಸಬಲ್ಲವು. ಉಳಿದಂತೆ ಅವುಗಳಿಗೆ ಸುತ್ತಲಿನ ಆಗುಹೋಗುಗಳನ್ನು ತಿಳಿದುಕೊಳ್ಳಲು ಕೇವಲ ಸೀಳು ನಾಲಗೆಯೇ ಮುಖ್ಯ ಅಂಗವಾಗಿದೆ - ಗುರುರಾಜ್ ಸನಿಲ್, ಉರಗತಜ್ಞ ಉಡುಪಿ

Share this article