ಬಳ್ಳಾರಿ: ಸಂಡೂರು ತಾಲೂಕಿನ ಚೋರನೂರು ಹೋಬಳಿ ವ್ಯಾಪ್ತಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ವಿವಿಧ ಇಲಾಖೆಗಳ ಜಂಟಿ ಆಶ್ರಯದಲ್ಲಿ ಗುರುವಾರ ಹಠಾತ್ ದಾಳಿ ನಡೆಸಿ, ಇಬ್ಬರು ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ರಕ್ಷಿಸಲಾಗಿದೆ.
ಈ ಸಂದರ್ಭದಲ್ಲಿ ಕಾನೂನುಬಾಹಿರವಾಗಿ ಕೆಲಸ ಮಾಡುತ್ತಿದ್ದ ಇಬ್ಬರು ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರನ್ನು ಪತ್ತೆ ಹಚ್ಚಿ, ಕೆಲಸದಿಂದ ಮುಕ್ತಿಗೊಳಿಸಲಾಗಿದೆ. ರಕ್ಷಿಸಲ್ಪಟ್ಟ ಮಕ್ಕಳನ್ನು ಅವರು ಈ ಹಿಂದೆ ವ್ಯಾಸಂಗ ಮಾಡುತ್ತಿದ್ದ ಶಾಲೆಗೆ ಮರು ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ.
ಮಕ್ಕಳ ವಯಸ್ಸಿನ ದಾಖಲಾತಿಗಳನ್ನು ಪಡೆದುಕೊಂಡಿರುವ ಅಧಿಕಾರಿಗಳು, ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ ಮಾಲೀಕರ ವಿರುದ್ಧ ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಬಾಲಕಾರ್ಮಿಕ ಕಾಯ್ದೆಯಡಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಇದೇ ವೇಳೆ, ಇನ್ನು ಮುಂದೆ ಅಂಗಡಿ ಮತ್ತು ಉದ್ದಿಮೆಗಳಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕರನ್ನು ಯಾವುದೇ ಕಾರಣಕ್ಕೂ ಕೆಲಸಕ್ಕೆ ನೇಮಿಸಿಕೊಳ್ಳಬಾರದು ಎಂದು ಮಾಲೀಕರಿಗೆ ಎಚ್ಚರಿಕೆ ನೀಡಿ, ಪೋಸ್ಟರ್‌ಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು.ಜಿಲ್ಲಾ ಬಾಲಕಾರ್ಮಿಕ ಯೋಜನೆ, ಕಂದಾಯ ಇಲಾಖೆ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಪೊಲೀಸ್ ಇಲಾಖೆ ಮತ್ತು ಚೈಲ್ಡ್ ಲೈನ್ ಸಹಯೋಗದಲ್ಲಿ ಈ ಜಂಟಿ ಕಾರ್ಯಾಚರಣೆ ನಡೆದಿದೆ.