ಅಮೆರಿಕ ಮೂಲದ ರೈಸ್‌ ವಿಶ್ವವಿದ್ಯಾಲಯ - ಬೆಂಗಳೂರಿನ ಐಐಎಸ್ಸಿ ಜತೆ ಸಂಶೋಧನಾ ಒಡಂಬಡಿಕೆ

KannadaprabhaNewsNetwork |  
Published : Nov 19, 2024, 12:50 AM ISTUpdated : Nov 19, 2024, 07:45 AM IST
RICE  University PC 2 | Kannada Prabha

ಸಾರಾಂಶ

ಅಮೆರಿಕ ಮೂಲದ ರೈಸ್‌ ವಿಶ್ವವಿದ್ಯಾಲಯವು ಭಾರತದಲ್ಲಿ ‘ರೈಸ್‌ ಗ್ಲೋಬಲ್‌ ಇಂಡಿಯಾ’ ಸಂಸ್ಥೆಯನ್ನು ಅನಾವರಣಗೊಳಿಸಿದೆ. ತನ್ಮೂಲಕ ಭಾರತದ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಕ್ರಮಗಳ ಉತ್ತೇಜನಕ್ಕಾಗಿ ಬೆಂಗಳೂರಿನ ಐಐಎಸ್ಸಿ ಮತ್ತು ಕಾನ್ಪುರದ ಐಐಟಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

 ಬೆಂಗಳೂರು : ಅಮೆರಿಕ ಮೂಲದ ರೈಸ್‌ ವಿಶ್ವವಿದ್ಯಾಲಯವು ತನ್ನ ಜಾಗತಿಕ ವಿಸ್ತರಣೆಯ ಭಾಗವಾಗಿ ಭಾರತದಲ್ಲಿ ‘ರೈಸ್‌ ಗ್ಲೋಬಲ್‌ ಇಂಡಿಯಾ’ ಸಂಸ್ಥೆಯನ್ನು ಅನಾವರಣಗೊಳಿಸಿದೆ. ತನ್ಮೂಲಕ ಭಾರತದ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಶೈಕ್ಷಣಿಕ ಹಾಗೂ ಸಂಶೋಧನಾ ಕಾರ್ಯಕ್ರಮಗಳ ಉತ್ತೇಜನಕ್ಕಾಗಿ ಬೆಂಗಳೂರಿನ ಐಐಎಸ್ಸಿ ಮತ್ತು ಕಾನ್ಪುರದ ಐಐಟಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ರೈಸ್ ವಿಶ್ವವಿದ್ಯಾಲಯ ಅಧ್ಯಕ್ಷ ರೆಜಿನಾಲ್ಡ್ ಡೆಸ್‌ರೋಚೆಸ್ ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.

ರೈಸ್‌ ಗ್ಲೋಬಲ್‌ ಇಂಡಿಯಾದ ಮೂಲಕ ಭಾರತದ ಶಿಕ್ಷಣ ಮತ್ತು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ರೈಸ್‌ ವಿಶ್ವವಿದ್ಯಾಲಯವು ತನ್ನದೇ ಆದ ಕೊಡುಗೆ ನೀಡಲು ಉದ್ದೇಶಿಸಿದೆ. ಈ ನಿಟ್ಟಿನಲ್ಲಿ ಐಐಎಸ್ಸಿ, ಐಐಟಿಯಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಶೋಧನಾ ಚಟುವಟಿಕೆಗಳು, ವಿದ್ಯಾರ್ಥಿಗಳು, ಅಧ್ಯಾಪಕರ ವಿನಿಮಯ ಕಾರ್ಯಕ್ರಮಗಳಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌, ಜೈವಿಕ ತಂತ್ರಜ್ಞಾನ ಮತ್ತು ಸುಸ್ಥಿರ ಇಂಧನ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೊಸ ಆವಿಷ್ಕಾರ, ಸಂಶೋಧನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು. ವಿದ್ಯಾರ್ಥಿಗಳ ವಿನಿಮಯ ವೆಚ್ಚಗಳನ್ನು ಸಂಪೂರ್ಣವಾಗಿ ರೈಸ್‌ ವಿವಿಯೇ ಭರಿಸುತ್ತದೆ ಎಂದು ವಿವರಿಸಿದರು.

ಗ್ಲೋಬಲ್ ಉಪಾಧ್ಯಕ್ಷೆ ಕ್ಯಾರೋಲಿನ್ ಲೆವಾಂಡರ್ ಮಾತನಾಡಿ, ಇಂತಹ ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಕ್ರಮಗಳು ಭಾರತ ಮತ್ತು ಅಮೆರಿಕದ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಸಲು ಸಹಕಾರಿಯಾಗಲಿದೆ. ಕಳೆದ ಐದಾರು ದಶಕಗಳಿಂದ ಉಭಯ ರಾಷ್ಟ್ರಗಳ ಸಂಬಂಧ ಬಹಳ ಉತ್ತಮವಾಗಿ ಸಾಗುತ್ತಿದ್ದು, ಇದರಿಂದ ಭಾರತಕ್ಕೆ ಅಮೆರಿಕ ಎಷ್ಟು ಅಗತ್ಯವೋ ಹಾಗೇ ಅಮೆರಿಕಕ್ಕೆ ಭಾರತದ ಅಗತ್ಯತೆಯೂ ಅಷ್ಟೇ ಅಗತ್ಯ ಎನ್ನುವುದನ್ನು ಸಾಭೀತುಪಡಿಸುತ್ತದೆ ಎಂದು ವ್ಯಾಖ್ಯಾನಿಸಿದರು.ಸುದ್ದಿಗೋಷ್ಠಿಯಲ್ಲಿ ರೈಸ್ ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಉಪಾಧ್ಯಕ್ಷ ರಾಮಮೂರ್ತಿ ರಮೇಶ್, ಶೈಕ್ಷಣಿಕ ವ್ಯವಹಾರಗಳ ಕಾರ್ಯಕಾರಿ ಉಪಾಧ್ಯಕ್ಷೆ ಆಮಿ ಡಿಟ್ಮಾರ್ ಉಪಸ್ಥಿತರಿದ್ದರು.

ವಾರ್ಷಿಕ ₹16.88 ಕೋಟಿ ವಿದ್ಯಾರ್ಥಿ ವೇತನ : ರೈಸ್‌ ವಿವಿಯು ವೃತ್ತಿಪರ ಸ್ನಾತಕೋತ್ತರ ಪದವಿ ಕೋರ್ಸುಗಳ ವ್ಯಾಸಂಗದಲ್ಲಿ ಜಾಗತಿಕ ವಿದ್ಯಾರ್ಥಿಗಳ ವಿನಿಮಯ ಕಾರ್ಯಕ್ರಮಗಳ ಭಾಗವಾಗಿ ವಾರ್ಷಿಕ $2 ಮಿಲಿಯನ್ (ಸುಮಾರು ₹16.88 ಕೋಟಿ) ವರೆಗೆ ವಿದ್ಯಾರ್ಥಿವೇತನ ನೀಡುತ್ತದೆ. ಪಿಎಚ್‌ಡಿಗೆ ದಾಖಲಾಗುವ ಜಾಗತಿಕ ವಿದ್ಯಾರ್ಥಿಗಳಿಗೂ ವಾರ್ಷಿಕ $35,000 ವ್ಯಾಸಂಗ ವೇತನ (ಸ್ಟೈಫಂಡ್‌) ನೀಡಲಾಗುತ್ತದೆ. ಇದು ಅಂತಾರಾಷ್ಟ್ರೀಯ ಪ್ರತಿಭೆಗಳನ್ನು ಆಕರ್ಷಿಸಲು ಮತ್ತು ಜಾಗತಿಕವಾಗಿ ವಿಶ್ವವಿದ್ಯಾಲಯದ ಪ್ರಭಾವವನ್ನು ವಿಸ್ತರಿಸುವ ಉದ್ದೇಶವಾಗಿದೆ ಎಂದು ಇದೇ ವೇಳೆ ರೆಜಿನಾಲ್ಡ್ ಡೆಸ್‌ರೋಚೆಸ್ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!