ಹಂಪಿ: ವಿಜಯನಗರ ಸಾಮ್ರಾಜ್ಯ ಹಾಗೂ ಹಂಪಿಯ ವೈಭವೋಪೇತ ಆಡಳಿತ ವೈಖರಿಯೇ ಒಂದು ಅಚ್ಚರಿ. ಈ ನೆಲದ ಆಡಳಿತ, ಧರ್ಮ ಸ್ಥಾಪನೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಅಡಿಪಾಯದಲ್ಲಿ ನೆಲೆಗೊಂಡಿದ್ದ ಆಳ್ವಿಕೆ ಕುರಿತು ಸಾಕಷ್ಟು ಸಂಶೋಧನೆಗಳು ನಡೆದಿದ್ದು ಇಂದಿಗೂ ಹಂಪಿ ಕುರಿತಾದ ಅನ್ವೇಷಣೆಗಳು ಮುಂದುವರಿದಿವೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಡಿ.ಪರಮಶಿವಮೂರ್ತಿ ತಿಳಿಸಿದರು.
ಆಫ್ರಿಕಾ, ಗ್ರೀಕ್ ಹೊರತುಪಡಿಸಿದರೆ ವಿಜಯನಗರ ಚರಿತ್ರೆಯ ಬಗ್ಗೆ ಅತಿ ಹೆಚ್ಚು ಸಂಶೋಧನೆಗಳು ನಡೆದಿವೆ. ಆ ಕಾಲದ ಆಡಳಿತ ವೈಖರಿ, ಸಮಾನತೆ, ಸೌಹಾರ್ದದ ನೆಲೆಯಲ್ಲಿ ನಡೆಯುತ್ತಿದ್ದ ಸುಧಾರಣಾ ಕ್ರಮಗಳು ಹೆಚ್ಚು ಗಮನ ಸೆಳೆಯುತ್ತವೆ. ಈ ಕಾರಣಕ್ಕಾಗಿಯೇ ದೇಶ-ವಿದೇಶಗಳ ಖ್ಯಾತ ಸಂಶೋಧಕರು ಹಂಪಿಯತ್ತ ಸಂಶೋಧನೆಗಾಗಿ ಮುಖವೊಡ್ಡುತ್ತಿದ್ದಾರೆ ಎಂದು ಹೇಳಿದರು.
ಸಮ ಸಮಾಜದ ಸಾಂಸ್ಕೃತಿಕ ಬೇರು ಹುಟ್ಟಿದ್ದೇ ಹಂಪಿಯಲ್ಲಿ. ಜನಸಾಮಾನ್ಯರ ಭಾವನೆ ವಿಜಯನಗರ ಸಾಮ್ರಾಜ್ಯದ ಜೊತೆ ಬೆರೆತಿದ್ದರಿಂದಲೇ ಇಲ್ಲಿನ ಆಳ್ವಿಕೆ ದೇಶ-ವಿದೇಶಗಳಿಗೂ ಪಸರಿಸಿತು. ಅಷ್ಟೇ ಅಲ್ಲ; ವಿಜಯನಗರ ಕಾಲದ ಸಾಂಸ್ಕೃತಿಕ ವೈಭವ ಅತಿಹೆಚ್ಚು ಚರ್ಚೆಗೆ ಒಳಗಾಗಿದ್ದು ಸುವರ್ಣಯುಗ ಸೃಷ್ಟಿಸಿದ ಸಾಮ್ರಾಜ್ಯವೊಂದರ ಆಡಳಿತ ಶೈಲಿಯ ಬಗ್ಗೆ ಇಂದಿಗೂ ಅಚ್ಚರಿ ಎನಿಸುತ್ತದೆ. ಹಂಪಿಯ ಸಮಗ್ರ ಸಂಶೋಧನೆಗೆ ಚಾರಿತ್ರಿಕ ದಾಖಲೆಗಳ ಕೊರತೆಯಿದ್ದು, ಅರಸರಿಗೆ ಕೀರ್ತಿ ತಂದ ತೆರೆಯ ಹಿಂದಿನ ಜನಗಳ ಸಂಶೋಧನೆ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.ಪ್ರೌಢದೇವರಾಯನ ಕಾಲದ ಸಾಹಿತ್ಯ ಕುರಿತು ಮಾತನಾಡಿದ ಲೇಖಕ ಡಾ.ಎಂ.ಎಂ. ಶಿವಪ್ರಕಾಶ್, 12ನೇ ಶತಮಾನದ ನೂರೊಂದು ಶರಣರು ಹಂಪಿಯ ನೆಲದಲ್ಲಿ ಇದ್ದು ವಚನ ಸಾಹಿತ್ಯ ಸಂಗ್ರಹಿಸಿದರು. ಇದಕ್ಕೆ ಪ್ರೌಢದೇವರಾಯರು ವಚನ ಸಾಹಿತ್ಯ ಬೆಳವಣಿಗೆಗೆ ಸಹಕಾರ ನೀಡಿದರು. ವೀರಶೈವ ಸಾಹಿತ್ಯ ಸಮೃದ್ಧವಾಗಿ ಬೆಳೆಯಲು ಪ್ರೌಢದೇವರಾಯರು ಸಾಕಷ್ಟು ಶ್ರಮಿಸಿದರು ಎಂದು ತಿಳಿಸಿದರು.
ಸಂಶೋಧಕ ಹಾಗೂ ಲೇಖಕ ಡಾ.ಜಾಜಿ ದೇವೇಂದ್ರಪ್ಪ ಅವರು ಆಶಯ ನುಡಿಗಳನ್ನಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾಧ್ಯಕ್ಷ ನಿಷ್ಠಿರುದ್ರಪ್ಪ, ಹೊಸಪೇಟೆ ತಾಲೂಕು ಕಸಾಪ ಅಧ್ಯಕ್ಷ ಡಾ.ಗುಂಡಿ ಮಾರುತಿ, ಕೊಪ್ಪಳ ಜಿಲ್ಲಾ ಕಸಾಪ ಅಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್ ಉಪಸ್ಥಿತರಿದ್ದರು. ಕೆ.ಎಂ. ವೀರೇಶ್ ಹಾಗೂ ಎಚ್.ಎಂ.ವಿದ್ಯಾವತಿ ಕಾರ್ಯಕ್ರಮ ನಿರ್ವಹಿಸಿದರು.