ಅಡಕೆ ಉಪ ಉತ್ಪನ್ನ ಬಳಕೆ ಕುರಿತು ಸಂಶೋಧನೆ ನಡೆಯಬೇಕು: ಶಾಸಕ ಆರಗ ಜ್ಞಾನೇಂದ್ರ

KannadaprabhaNewsNetwork |  
Published : Jun 29, 2025, 01:33 AM IST
ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು | Kannada Prabha

ಸಾರಾಂಶ

ಅಡಕೆ ಬೆಳೆಗಾರರು ಸಹ ಲಾಬಿ ಮಾಡಬೇಕಾಗಿದೆ. ಇಲ್ಲವಾದಲ್ಲಿ ಅಡಕೆ ಬೆಳೆ ಮತ್ತು ಬೆಲೆ ಉಳಿಸಿಕೊಳ್ಳುವುದು ಕಷ್ಟ ಎಂದು ತೀರ್ಥಹಳ್ಳಿ ಶಾಸಕ ಹಾಗೂ ಅಡಕೆ ಮಹಾಮಂಡಲದ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಸಾಗರ

ಅಡಕೆ ಬೆಳೆಗಾರರು ಸಹ ಲಾಬಿ ಮಾಡಬೇಕಾಗಿದೆ. ಇಲ್ಲವಾದಲ್ಲಿ ಅಡಕೆ ಬೆಳೆ ಮತ್ತು ಬೆಲೆ ಉಳಿಸಿಕೊಳ್ಳುವುದು ಕಷ್ಟ ಎಂದು ತೀರ್ಥಹಳ್ಳಿ ಶಾಸಕ ಹಾಗೂ ಅಡಕೆ ಮಹಾಮಂಡಲದ ಅಧ್ಯಕ್ಷ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಲಕ್ಷ್ಮೀ ವೆಂಕಟರಮಣ ಸಭಾಭವನದಲ್ಲಿ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ `ಐವತ್ತರ ಈ ಹೊತ್ತು'''''''' ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಡಕೆ ಹಾಳೆ ಕ್ಯಾನ್ಸರ್‌ ಕಾರಕ ಎಂದು ಅಮೇರಿಕಾ ನೀಡಿದ ಒಂದು ಹೇಳಿಕೆಯಿಂದ ಸುಮಾರು ಮೂರುವರೆ ಸಾವಿರ ಕೋಟಿ ನಷ್ಟ ಸಂಭವಿಸಿದೆ. ಅಡಕೆ ತಟ್ಟೆ, ದೊನ್ನೆ ಎಲ್ಲದರ ಉತ್ಪಾದನೆ ನಿಂತಿದ್ದು, ಕೈಗಾರಿಕೆಗಳು ಬಾಗಿಲು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ವಾಸ್ತವವಾಗಿ ಅಡಕೆ ಹಾಳೆ ಬಳಕೆ ಕ್ಯಾನ್ಸರ್‌ ಕಾರಕವಲ್ಲ. ಸರ್ಕಾರ ಅಡಕೆ ಮತ್ತು ಅಡಕೆ ಉಪ ಉತ್ಪನ್ನಗಳ ಬಳಕೆ ಕುರಿತು ಸಂಶೋಧನೆ ನಡೆಸಬೇಕು ಎಂದು ಹೇಳಿದರು.

ಅಡಕೆ ಎಲೆಚುಕ್ಕೆ ರೋಗ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸುತ್ತಿದೆ. ಸರ್ಕಾರ ಹೆಕ್ಟೇರ್‌ಗೆ ೧೬೦೦ ರು. ಪರಿಹಾರ ನೀಡುತ್ತಿದ್ದು, ಇದು ಅತೀ ಕಡಿಮೆಯಾಗಿದೆ. ಇದನ್ನು ಹೆಚ್ಚು ಮಾಡಲು ಹಕ್ಕೊತ್ತಾಯ ಮಂಡಿಸಬೇಕಾಗಿದೆ. ಸಾಂಪ್ರದಾಯಿಕ ಅಡಕೆ ಬೆಳೆಗಾರರು ಗುಣಮಟ್ಟದ ಅಡಕೆ ಬೆಳೆಯಲು ಹೆಚ್ಚು ಕಾಳಜಿ ವಹಿಸಬೇಕು. ಅಡಕೆಗೆ ಬಣ್ಣ ಹಾಕುವ ಹೆಸರಿನಲ್ಲಿ ಕೆಮಿಕಲ್ ಮಿಶ್ರಣ ಮಾಡುವುದನ್ನು ನಾವು ವಿರೋಧಿಸಬೇಕು. ಇದರಿಂದ ಅಡಕೆ ಗುಣಮಟ್ಟ ಹಾಳಾಗುವ ಜೊತೆಗೆ ಸುಪ್ರೀಂ ಕೋರ್ಟ್‌ಗೆ ಇಂತಹ ಒಂದು ಪ್ರಕರಣ ಸಿಕ್ಕರೆ ಅಡಕೆ ಮಾನ ಇನ್ನಷ್ಟು ಪಾತಾಳಕ್ಕೆ ಇಳಿಯುತ್ತದೆ ಎಂದರು.

ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂಬ ವಾದ ಸುಪ್ರಿಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಮಹಾಮಂಡಲದಿಂದ ಪ್ರತಿ ಬಾರಿ ವಕೀಲರಿಗೆ ೩ ಲಕ್ಷ ರು. ಶುಲ್ಕವನ್ನು ಪಾವತಿ ಮಾಡಲಾಗುತ್ತಿದೆ. ವಿವಿಧ ಅಡಕೆ ವಹಿವಾಟು ನಡೆಸುವ ಸಹಕಾರಿ ಸಂಘಗಳಿಂದ ಮಹಾಮಂಡಲಕ್ಕೆ ೧.೫೦ ಕೋಟಿ ರು. ಹಣ ಸಂಗ್ರಹವಾಗಿದೆ. ನಿಮ್ಮ ವ್ಯಾಪ್ತಿಯ ಅಡಕೆ ಸಹಕಾರ ಸಂಘಗಳನ್ನು ಮಹಾಮಂಡಲಕ್ಕೆ ಸದಸ್ಯರನ್ನಾಗಿ ಮಾಡಲು ಮುಂದಾಗಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್, ಅಡಕೆ ಬೆಳೆಗಾರರ ಸಂಘ ಐದು ದಶಕಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಡಕೆ ಬೆಳೆಗಾರರ ಸಮಾವೇಶವನ್ನು ಅರ್ಥಪೂರ್ಣವಾಗಿ ನಡೆಸಲಾಗಿದ್ದು, ಒಟ್ಟು ೫೦ ಲಕ್ಷ ರು. ಹಣ ಸಂಗ್ರಹ ಮಾಡಲಾಗಿತ್ತು. ಅದರಲ್ಲಿ ೧೨ ಲಕ್ಷ ರು. ಉಳಿತಾಯ ಮಾಡಲಾಗಿದೆ. ಹಿರಿಯ ಸಹಕಾರಿಗಳು, ಎಲ್ಲ ಬೆಳೆಗಾರರು, ಅಡಕೆ ಸಂಬಂಧಿತ ಸಂಘಟನೆಗಳು, ಜನಪ್ರತಿನಿಧಿಗಳು ಸಮಾವೇಶ ಯಶಸ್ಸಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

ಎಚ್,ಎಸ್,ಮಂಜಪ್ಪ, ಕೆ.ಎಂ.ಸೂರ್ಯನಾರಾಯಣ, ಹಕ್ರೆ ಮಲ್ಲಿಕಾರ್ಜುನ, ಕೆ.ಸಿ.ದೇವಪ್ಪ, ಆರ್.ಎಸ್.ಗಿರಿ, ಅನಿಲ್ ಒಡೆಯರ್, ರಾಜೇಂದ್ರ ಖಂಡಿಕಾ, ಯು.ಎಚ್.ರಾಮಪ್ಪ ಇನ್ನಿತರರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೈಕೋರ್ಟ್‌ ಹೊಸ ಕಟ್ಟಡಕ್ಕೆ 30 ಎಕ್ರೆ ಕೋರಿಕೆ : ರಾಜ್ಯ ಸರ್ಕಾರಕ್ಕೆ ನೋಟಿಸ್‌
ಬಿಎಂಐಸಿ ಮರುಪರಿಶೀಲಿಸಿ: ರಾಜ್ಯಕ್ಕೆ ಕೋರ್ಟ್‌ ಸೂಚನೆ