ಸಂಶೋಧಕರು ಹೊಣೆ ಅರಿತು ಕೆಲಸ ಮಾಡಿ

KannadaprabhaNewsNetwork |  
Published : Jul 19, 2024, 01:09 AM IST
ಮಹಿಳಾ ವಿವಿಯಲ್ಲಿ ಸಂಶೋಧನಾ ವೈಧಾನಿಕತೆ ಕುರಿತು 11ದಿನಗಳ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಿಗೆ ಸರ್ಕಾರ ಲಕ್ಷಾಂತರ ಹಣವನ್ನು ವ್ಯಯ ಮಾಡುತ್ತಿದೆ. ಆದ್ದರಿಂದ ಸಂಶೋಧಕರು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡಬೇಕು ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಬೋಧನೆ, ಸಂಶೋಧನೆ ಮತ್ತು ವಿಸ್ತರಣಾ ಚಟುವಟಿಕೆಗಳಿಗೆ ಸರ್ಕಾರ ಲಕ್ಷಾಂತರ ಹಣವನ್ನು ವ್ಯಯ ಮಾಡುತ್ತಿದೆ. ಆದ್ದರಿಂದ ಸಂಶೋಧಕರು ಸಾಮಾಜಿಕ ಹೊಣೆಗಾರಿಕೆಯನ್ನು ಅರಿತು ಕೆಲಸ ಮಾಡಬೇಕು ಎಂದು ಮಹಿಳಾ ವಿವಿಯ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಅಹಲ್ಯಾಬಾಯಿ ಮಹಿಳಾ ಅಧ್ಯಯನ ಕೇಂದ್ರ ಹಾಗೂ ಪ.ಜಾ, ಪ.ಪಂ ನಿರ್ದೇಶನಾಲಯದ ಸಹಯೋಗದಲ್ಲಿ ಆಯೋಜಿಸಿದ್ದ 11 ದಿನಗಳ ಸಂಶೋಧನಾ ವೈಧಾನಿಕತೆ ಕಾರ್ಯಾಗಾರ ಸಮಾರೋಪದಲ್ಲಿ ಅವರು ಮಾತನಾಡಿದರು. ಪ್ರಸ್ತುತ ಸೈದ್ಧಾಂತಿಕ ಸಂಶೋಧನೆಗಳಿಗಿಂತ ಪ್ರಯೋಗಾತ್ಮಕ ಸಂಶೋಧನೆಗಳು ಹೆಚ್ಚಾಗುತ್ತಿವೆ. ಸಮಾಜ ವಿಜ್ಞಾನ, ವಿಜ್ಞಾನದ ಸಂಶೋಧನೆಗಳು ಇಂದು ಪ್ರತ್ಯೇಕವಾಗಿಲ್ಲ. ಸಾಮಾಜಿಕ ಹೊಣೆಗಾರಿಕೆ ಬಿಟ್ಟು ಸಂಶೋಧನೆಗಳು ಇಲ್ಲ ಎಂದು ಅಭಿಪ್ರಾಯಿಸಿದರು.

ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಪ್ರತಿಯೊಬ್ಬ ಸಂಶೋಧಕರು ನೈತಿಕತೆ ಮತ್ತು ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸಬೇಕು. ಮಹಿಳಾ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಮಹಿಳಾ ಸಮುದಾಯ ಸಬಲೀಕರಣಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.ಪ್ರೊ.ಸಂಗೀತಾ ಮಾನೆ ಮಾತನಾಡಿ, ಸಂಶೋಧನೆಗಳು ಸಮಾಜದ ಬದುಕನ್ನು, ಸ್ಥಿತಿಗತಿಯನ್ನು ಸುಧಾರಿಸುವ ಕೆಲಸ ಮಾಡಬೇಕು ಎಂದರು.

ಮಹಿಳಾ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, ಮಹಿಳಾ ವಿವಿಯ ಸಂಶೋಧನೆಗಳು ಮಹಿಳಾ ಸಮುದಾಯದ ಸಬಲೀಕರಣಕ್ಕೆ ಕೊಡುಗೆ ನೀಡಿವೆ ಎಂದು ವಿವರಿಸಿದರು.

ಸಮಾರಂಭದಲ್ಲಿ ವಿವಿಯ ಸಮಾಜ ವಿಜ್ಞಾನ ನಿಕಾಯದ ಡೀನ್ ಪ್ರೊ.ಶಾಂತಾದೇವಿ.ಟಿ. ಮಾತನಾಡಿ, ಸಂಶೋಧನೆಗಳಿಗೆ ಸಾಮಾಜಿಕ ಜವಾಬ್ದಾರಿ ಇದ್ದಾಗ ಮಾತ್ರ ಸಂಶೋಧನೆಗಳಿಗೆ ಮೌಲ್ಯ ಬರುತ್ತದೆ ಎಂದರು.

ಮಹಿಳಾ ವಿವಿಯ ಪ್ರೊ.ರಾಜು ಬಾಗಲಕೋಟ ಮಾತನಾಡಿ, ಸಂಶೋಧನೆಗಳಿಗೆ ಆಕರಗಳಿಗಿಂತ ವ್ಯಕ್ತಿಗಳ ಜೊತೆಗೆ ಚರ್ಚೆ, ಸಂದರ್ಶನ ಮಾಡಿದಾಗ ಸಂಶೋಧನೆಯ ದೃಷ್ಟಿಕೋನ ಮತ್ತು ಸಾಮಾಜಿಕ ಜವಾಬ್ದಾರಿಯ ಅರಿವು ಮೂಡುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಪ್ರೊ.ವಿನಯ ಕುಲಕರ್ಣಿ, ಪ್ರೊ.ಜಿ.ಬಿ.ಸೋನಾರ, ಡಾ.ಕಲಾವತಿ ಕಾಂಬಳೆ ಮತ್ತು ವಿವಿಧ ವಿಭಾಗದ ಸಂಶೋಧನಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಲಕ್ಷ್ಮಿದೇವಿ ವಂದಿಸಿದರು, ಡಾ.ಭಾಗ್ಯಶ್ರೀ ದೊಡಮನಿ ನಿರೂಪಿಸಿದರು, ಡಾ.ಸರೋಜಾ ಸಂತಿ ಪರಿಚಯಿಸಿದರು. ಸಂಶೋಧನಾ ವಿದ್ಯಾರ್ಥಿಗಳಾದ ನಿಶಾ ಜೋಷಿ, ಸಿದ್ಧಕಿ ಖಾನಮ್, ಅನುಷಾ, ಅನಿತಾ ಅವರು ತಮ್ಮ ಅನಿಸಿಕೆ ಹಂಚಿಕೊಂಡರು.

PREV