ಮುಸ್ಲಿಂ ಓಲೈಕೆಗಾಗಿ ಮೀಸಲಾತಿ ಘೋಷಣೆ

KannadaprabhaNewsNetwork | Published : Mar 28, 2025 12:36 AM

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮುಸ್ಲಿಂ ಮತಗಳನ್ನು ಉಳಿಸಿಕೊಳ್ಳಲು ಓಲೈಕೆಗಾಗಿ ಶೇ.4 ರಷ್ಟು ಮೀಸಲಾತಿ ನೀಡುವುದರೊಂದಿಗೆ ವಿವಿಧ ಸೌಲಭ್ಯಗಳನ್ನು ನೀಡಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಮಾತ್ರವಲ್ಲದೇ ಗುಲಾಮರನ್ನಾಗಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಇಂತಹ ಸರ್ಕಾರವನ್ನು ಕಿತ್ತೆಸೆದು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು, ಮುಖಂಡರು ಮುಂದಾಗಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮುಸ್ಲಿಂ ಮತಗಳನ್ನು ಉಳಿಸಿಕೊಳ್ಳಲು ಓಲೈಕೆಗಾಗಿ ಶೇ.4 ರಷ್ಟು ಮೀಸಲಾತಿ ನೀಡುವುದರೊಂದಿಗೆ ವಿವಿಧ ಸೌಲಭ್ಯಗಳನ್ನು ನೀಡಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ. ಮಾತ್ರವಲ್ಲದೇ ಗುಲಾಮರನ್ನಾಗಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ದಿನಗಳಲ್ಲಿ ಇಂತಹ ಸರ್ಕಾರವನ್ನು ಕಿತ್ತೆಸೆದು ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯಕರ್ತರು, ಮುಖಂಡರು ಮುಂದಾಗಬೇಕು ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಹೇಳಿದರು.

ಪಟ್ಟಣದ ವಿಜಯಪುರ ರಸ್ತೆಯ ತಮ್ಮ ಗೃಹ ಕಚೇರಿಯಲ್ಲಿ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ನೇತೃತ್ವದಲ್ಲಿ ತಾಲೂಕು ಮಂಡಲದಿಂದ ಸಂಜೆ ಹಮ್ಮಿಕೊಂಡಿದ್ದ ವಿಜಯಪುರ ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಗುರುಲಿಂಗಪ್ಪ ಅಂಗಡಿ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಅತಿಹೆಚ್ಚು ಬಿಜೆಪಿ ಸದಸ್ಯತ್ವವ ಮಾಡಿದ ಕೀರ್ತಿ ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಲ್ಲುತ್ತದೆ. ದೇಶ, ನಾಡು ಕಟ್ಟಬೇಕೆನ್ನುವ ರೈತರ ಬದುಕಿಗೆ ನ್ಯಾಯ ಒದಗಿಸುವ ಸಾಮಾಜಿಕ ಕಳಕಳಿಯೊಂದಿಗೆ ನಾವೇಲ್ಲ ರಾಜಕಾರಣಕ್ಕೆ ಪಾದಾರ್ಪಣೆ ಮಾಡಿದ್ದೇವೆ. ಕಾಂಗ್ರೆಸ್‌ ನಮ್ಮನ್ನು ಗುಲಾಮರನ್ನಾಗಿ ಮಾಡಿದ್ದಾರೆ. ಮುಸ್ಲಿಂರಿಗೆ ಶೇ.4 ರಷ್ಟು ಗುತ್ತಿಗೆ ನೀಡಿಕೆಯಲ್ಲಿ ಮೀಸಲಾತಿ ನೀಡಬೇಕೆನ್ನುವ ಹಿಂದೂ ವಿರೋಧಿ ನೀತಿಯ ಮಸೂದೆಯನ್ನು ಅಂಗೀಕಾರ ಮಾಡಿದೆ. ಅದರಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮುಸಲ್ಮಾನರಿಗೋಸ್ಕರ ಸಂವಿಧಾನವನ್ನೇ ಬದಲಿಸುತ್ತೇವೆ ಎಂದು ಹೇಳಿಕೆ ನೀಡಿರುವುದು ಓಲೈಕೆ ಉದ್ದೇಶವಿದೆ ಎಂಬುದು ಸ್ಪಷ್ಟವಾಗುತ್ತದೆ. ಜೊತೆಗೆ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳ ಮದುವೆಗಾಗಿ ಸುಮಾರು ₹ 2 ಸಾವಿರ ಕೋಟಿ ಮೀಸಲಿಟ್ಟಿದ್ದು, ಇದು ಸಂಪೂರ್ಣ ಹಿಂದು ವಿರೋಧಿ ಪಕ್ಷವಾಗಿದೆ ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಬಿಜೆಪಿ ನಾಯಕರು ಒಂದಾಗಿದ್ದು, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬೇಕು. ಬಹಳಷ್ಟು ಜನ ಹಿರಿಯರು, ಕಾರ್ಯಕರ್ತರು ಚುರುಮುರಿ ತಿಂದೇ ಜಿಲ್ಲೆಯಲ್ಲಿ ಪಕ್ಷ ಕಟ್ಟಿ ಬೆಳೆಸಿದ್ದಾರೆ. ಯಾರ್‍ಯಾರು ಪಕ್ಷದೊಳಗೆ ಇದ್ದು ಕುತಂತ್ರ ನಡೆಸಿದ್ದಾರೆ, ಯಾರು ಪಕ್ಷ ಕಟ್ಟಿ ಬೆಳೆಸಿದ್ದಾರೆ ಎಂಬುದು ರಾಜ್ಯದ ಘಟಕದಲ್ಲಿ ಸಂಪೂರ್ಣ ಮಾಹಿತಿ ಇದೆ. ಈ ನಿಟ್ಟಿನಲ್ಲಿ ಪಕ್ಷಕ್ಕಾಗಿ ದುಡಿದ ಸಾಮಾನ್ಯ ಕಾರ್ಯಕರ್ತರು ಕೂಡ ಪ್ರಮುಖರೇ ನಿಜವಾದ ಕಾರ್ಯಕರ್ತರಿಗೆ ಅತೀ ಶೀಘ್ರದಲ್ಲಿಯೇ ಸ್ಥಾನಮಾನ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಅಳೆದು ತೂಗಿ ಗುರಲಿಂಗಪ್ಪ ಅಂಗಡಿ ಅವರನ್ನು ಸೂಕ್ತ ಸಮಯಕ್ಕೆ ಆಯ್ಕೆ ಮಾಡಿ ಸಂಘಟನೆಗೆ ಶಕ್ತಿ ತುಂಬಿದ್ದಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಎಂಟು ಮತಕ್ಷೇತ್ರದಲ್ಲೂ ಬಿಜೆಪಿ ಜಯಭೇರಿ ಸಾಧಿಸಲು ಕಾರ್ಯಕರ್ತರು ಶ್ರಮಿಸಬೇಕಿದೆ. ಈ ನಿಟ್ಟಿನಲ್ಲಿ ಪಕ್ಷದ ಹಿತದೃಷ್ಠಿಯಿಂದ ಯಾರ್‍ಯಾರು ಸಿಟ್ಟಾಗಿದ್ದಾರೋ, ಅವರ ಮನೆಗೆ ತೆರಳಿ ಮನವೊಲಿಸಿ ನೂತನ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ನೇತೃತ್ವದಲ್ಲಿ ಮುದ್ದೇಬಿಹಾಳ ಸೇರಿದಂತೆ ಜಿಲ್ಲೆಯಾದ್ಯಂತ ಮುಖಂಡರು ಕಾರ್ಯಕರ್ತರು ಸೇರಿಕೊಂಡು ಬಲಿಷ್ಠ ಪಕ್ಷ ಕಟ್ಟುವಲ್ಲಿ ಮುಂದಾಗುತ್ತೇವೆ, ಕಾರ್ಯಕರ್ತರು ಒಗ್ಗಟ್ಟಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಬಿಜೆಪಿ ನೂತನ ಜಿಲ್ಲಾಧ್ಯಕ್ಷ ಗುರಲಿಂಗಪ್ಪ ಅಂಗಡಿ ಮಾತನಾಡಿ, ಎ.ಎಸ್.ಪಾಟೀಲ ನಡಹಳ್ಳಿ ಅವರು ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಮುಖಂಡರು ನನ್ನ ಜಿಲ್ಲಾಧ್ಯಕ್ಷನನ್ನಾಗಿ ಮಾಡಲು ಶ್ರಮಿಸಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನವಿರೋಧಿ ಸರ್ಕಾರವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ವೈಫಲ್ಯಗಳನ್ನು ಜನರಿಗೆ ತಿಳಿಸುವ ಮೂಲಕ ಬಿಜೆಪಿ ಶಕ್ತಿ ಹೆಚ್ಚಿಸುವಲ್ಲಿ ಎಲ್ಲರೊಂದಿಗೆ ಸದಾಸಿದ್ಧವಿರುವುದಾಗಿ ತಿಳಿಸಿದರು.

ತಾಲೂಕು ಬಿಜೆಪಿ ಮುಖಂಡ ರಮೇಶ ಬಿದನೂರ ಮಾತನಾಡಿ, ಒಬ್ಬ ಯೋಗ್ಯ ವ್ಯಕ್ತಿತ್ವದ ಸಮರ್ಥ ನಾಯಕ ಗುರುಲಿಂಗಪ್ಪ ಅಂಗಡಿ ಅವರನ್ನು ಬಿಜೆಪಿ ಜಿಲ್ಲಾ ಅಧ್ಯಕ್ಷರನ್ನಾಗಿ ಮಾಡುವಲ್ಲಿ ಶ್ರಮಿಸಿದ ಕಾರ್ಯನಿಜಕ್ಕೂ ಶ್ಲಾಘನೀಯ. ಈ ಆಯ್ಕೆಯಿಂದಾಗಿ ಜಿಲ್ಲೆಯ ನಿಜವಾದ ಬಿಜೆಪಿ ಕಾರ್ಯಕರ್ತರಿಗೆ ಸಂತೋಷವಾಗಿದೆ ಎಂದರು.

ಮುಖಂಡರಾದ ಎಂ.ಎಸ್.ಪಾಟೀಲ, ಮಲಕೇಂದ್ರಾಯಗೌಡ ಪಾಟೀಲ, ಮುನ್ನಾಧಣಿ ನಾಡಗೌಡರ, ಮುತ್ತುಸಾಹುಕಾರ ಅಂಗಡಿ, ಕೆಂಚಪ್ಪ ಬಿರಾದಾರ ಪುರಸಭೆ ಸದಸ್ಯರಾದ ಚನ್ನಪ್ಪ ಕಂಠಿ, ಸಹನಾ ಬಡಿಗೇರ, ಸಂಗಮ್ಮ ದೇವರಳ್ಳಿ, ಬಸವರಾಜ ಮುರಾಳ, ಅಶೋಕ ಹೊನ್ನಳ್ಳಿ, ಗೌರಮ್ಮ ಹುನಗುಂದ, ತಾಲೂಕು ಮಂಡಲದ ಅಧ್ಯಕ್ಷ ಜಗದೀಶ ಪಂಪಣ್ಣವರ, ಸಿದ್ದರಾಜ ಹೊಳಿ, ಅಶೊಕ ರಾಠೋಡ, ಸಂಜಯ ಬಾಗೇವಾಡಿ, ಪುನೀತ್ ಹಿಪ್ಪರಗಿ ಸೇರಿದಂತೆ ಹಲವರು ಹಾಜರಿದ್ದರು.

Share this article