ಕನ್ನಡಪ್ರಭ ವಾರ್ತೆ ಬೆಂಗಳೂರು
ಆರ್ಥಿಕತೆಯನ್ನು ಆಧರಿಸಿ ಕೇಂದ್ರ ಸರ್ಕಾರ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸಿದ್ದು ಸರಿಯಲ್ಲ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ ದಾಸ್ ಅಭಿಪ್ರಾಯಪಟ್ಟರು.ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟದಿಂದ ಬುಧವಾರ ಗಾಂಧಿ ಭವನದಲ್ಲಿ ಆಯೋಜಿಸಿದ್ದ ‘ಸಂವಿಧಾನ ಜಾರಿಯಾಗಿ 74 ವರ್ಷ ಕಳೆದಿದ್ದರೂ ಸಂವಿಧಾನದ ಆಶಯಗಳು ಇನ್ನೂ ಈಡೇರಲಿಲ್ಲ ಏಕೆ? ಮುಂದೇನು?’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗೆ ಅನುಗುಣವಾಗಿ ಮೀಸಲಾತಿ ನೀಡಬೇಕು ಎಂಬುದು ದೇಶದ ಸಂವಿಧಾನದ ಆಶಯವಾಗಿದೆ. ಆರ್ಥಿಕ ಮಾನದಂಡದಲ್ಲಿ ಮೀಸಲಾತಿ ನೀಡಬೇಕು ಎಂದು ಸಂವಿಧಾನ ಹೇಳಿಲ್ಲ. ಆದ್ದರಿಂದ ಆರ್ಥಿಕವಾಗಿ ಹಿಂದುಳಿದ ವರ್ಗ(ಇಡಬ್ಲ್ಯೂಎಸ್)ದವರಿಗೆ ಕೇಂದ್ರ ಸರ್ಕಾರ ಶೇ.10 ಮೀಸಲಾತಿ ನೀಡಿದ್ದು ಸರಿಯಲ್ಲ. ಬೇರೆ ಜಾತಿ, ಧರ್ಮದಲ್ಲಿ ಬಡವರು ಇಲ್ಲವೇ ಎಂದು ಪ್ರಶ್ನಿಸಿದರು.ಸಂವಿಧಾನ ತಿದ್ದುಪಡಿ ಮಾಡಲು ಸಂಸತ್‌ಗೆ ಅಧಿಕಾರವಿದ್ದರೂ ಕೇಶವಾನಂದ ಭಾರತೀ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇಲ್ಲಿ ಉಲ್ಲೇಖನೀಯ. ಸಂವಿಧಾನ ತಿದ್ದುಪಡಿಗೆ ಸಂಸತ್‌ಗೆ ಅವಕಾಶವಿದ್ದರೂ ‘ಸಂವಿಧಾನದ ಮೂಲ ತತ್ವಗಳನ್ನು ಮುಟ್ಟಲು, ಸಂವಿಧಾನವನ್ನು ಬದಲಿಸಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.
ಸಮಸ್ಯೆಗಳಿಗೆ ಸಂವಿಧಾನವೇ ಪರಿಹಾರ:ಭಾರತದ ಹಿನ್ನಲೆ, ಅತಿಕ್ರಮಣಕಾರ ಇತಿಹಾಸ ಇವೆಲ್ಲವನ್ನೂ ಪರಿಗಣಿಸಿ ಅಂಬೇಡ್ಕರ್ ಅವರು ನಮಗೆ ಸಂವಿಧಾನ ನೀಡಿದ್ದಾರೆ. ಪ್ರಸ್ತುತ ಎಲ್ಲ ಸಮಸ್ಯೆಗಳಿಗೂ ಸಂವಿಧಾನವೇ ಪರಿಹಾರವಾಗಿದೆ. ನಮ್ಮದು ಜಾತ್ಯತೀತ ರಾಷ್ಟ್ರವಾಗಿದ್ದು, ದೇಶದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಸಂವಿಧಾನವು ಎಲ್ಲ ಧರ್ಮದವರಿಗೂ ಸಮಾನವಾದ ಅವಕಾಶ, ಗೌರವ ನೀಡಬೇಕು ಎಂದು ಉಲ್ಲೇಖಿಸಿದೆ ಎಂದು ವಿವರಿಸಿದರು.
ಸಂಘಟನೆಗಳ ಬಗ್ಗೆ ದಿಕ್ಸೂಚಿ ಭಾಷಣ ಮಾಡಿದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ಸಂವಿಧಾನ ಓದುವ ಮೊದಲು ಅಂಬೇಡ್ಕರ್, ದೇಶದ ಇತಿಹಾಸವನ್ನು ಅಭ್ಯಾಸ ಮಾಡಬೇಕು. ಅಂಬೇಡ್ಕರ್ ಅವರ ತ್ಯಾಗ ಅರ್ಥವಾಗದಿದ್ದರೆ ಸಂವಿಧಾನದ ಬಗ್ಗೆ ಅರ್ಥವಾಗುವುದಿಲ್ಲ. ಸಂಘಟನೆಗಳು ಒಗ್ಗಟ್ಟಾಗಿ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಸಬೇಕು ಎಂದು ಕರೆ ನೀಡಿದರು.ಸಾಕ್ಷ್ಯಚಿತ್ರ ನಿರ್ಮಾಣ:
ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎಂ.ಎನ್.ರಮೇಶ್ ಮಾತನಾಡಿ, ನ್ಯಾ.ನಾಗಮೋಹಸದಾಸ್ ಅವರು ಸಂವಿಧಾನದ ಬಗ್ಗೆ ಸವಿವರವಾಗಿ ಮಾರ್ಗದರ್ಶನ ನೀಡಿದ್ದಾರೆ. ಇದು ಬಹಳ ಉಪಯುಕ್ತವಾದುದು. ಒಕ್ಕೂಟದ ಸ್ವಂತ ಹಣದಿಂದ ಅವರ ಭಾಷಣದ ಸಾಕ್ಷ್ಯಚಿತ್ರ ನಿರ್ಮಿಸಿ ಸರ್ಕಾರಿ ಶಾಲಾ-ಕಾಲೇಜುಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್, ನಟ ಚೇತನ್, ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ಚನ್ನಕೃಷ್ಣಪ್ಪ ಮತ್ತಿತರರು ಹಾಜರಿದ್ದರು.
---ಕ್ಯಾಪ್ಷನ್
ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸಂವಿಧಾನ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹಸದಾಸ್ ಅವರಿಗೆ ಸಂವಿಧಾನದ ಪೀಠಿಕೆ ನೀಡಿ ಗೌರವಿಸಲಾಯಿತು. ಕೋಟಿಗಾನಹಳ್ಳಿ ರಾಮಯ್ಯ, ಎಸ್.ಆರ್.ಹಿರೇಮಠ್, ಚೇತನ್, ಬಿ.ಚನ್ನಕೃಷ್ಣಪ್ಪ, ಆರ್.ಎಂ.ಎನ್.ರಮೇಶ್ ಹಾಜರಿದ್ದರು.