ಶ್ರೀ ಯೋಗಿ ನಾರಾಯಣ ಯತೀಂದ್ರರ ಜಯಂತಿ ಕಾರ್ಯಕ್ರಮ
ಬಲಿಜ ಸಮಾಜದ ವಿದ್ಯಾರ್ಥಿಗಳ ಉದ್ಯೋಗದ ಅನುಕೂಲಕ್ಕಾಗಿ 2ಎ ಹಿಂದುಳಿದ ವರ್ಗದ ಮೀಸಲಾತಿ ನೀಡುವಂತಾಗಬೇಕು ಎಂದು ಯೋಗಿ ನಾರಾಯಣ ಬಲಿಜ ಸಂಘದ ಜಿಲ್ಲಾಧ್ಯಕ್ಷರಾದ ಟಿ.ಜಿ.ಗಣೇಶ್ ನಾಯ್ಡು ಅವರು ಒತ್ತಾಯಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದೊಂದಿಗೆ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಯೋಗಿ ನಾರಾಯಣ ಯತೀಂದ್ರದ ಜಯಂತಿ(ಕೈವಾರ ತಾತಯ್ಯ) ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಲಿಜ ಸಮಾಜದ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ 2ಎ ಮೀಸಲಾತಿ ನೀಡಲಾಗಿದೆ. ಆದರೆ ಉದ್ಯೋಗದಲ್ಲಿ ಮಾತ್ರ 3ಎ ನಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಇದರಿಂದ ಬಲಿಜ ಸಮಾಜದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದ್ದು, ಶಿಕ್ಷಣದಂತೆ ಉದ್ಯೋಗದಲ್ಲಿಯೂ ಸಹ 2ಎ ಹಿಂದುಳಿದ ವರ್ಗದಡಿ ಮೀಸಲಾತಿ ನೀಡುವಂತಾಗಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಅವರು ಮಾತನಾಡಿ, ಶ್ರೀ ಯೋಗಿ ನಾರಾಯಣ ಯತೀಂದ್ರ ಅವರ 300 ನೇ ವರ್ಷಾಚರಣೆಯನ್ನು ಇಂದು ಹಮ್ಮಿಕೊಳ್ಳಲಾಗಿದೆ ಎಂದರು.
ದಾರ್ಶನಿಕರಾಗಿದ್ದ ಕೈವಾರ ತಾತಯ್ಯ ಅವರು 1726 ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಜನಿಸಿದ್ದಾರೆ ಎಂದು ಅವರು ಹೇಳಿದರು.
ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಬೆಳೆದು ಸಮಾಜದಲ್ಲಿ ಇತರರಂತೆ ಬದುಕುವುದು ಹೇಗೆ ಎಂಬುದನ್ನು ಕಲಿಸಿಕೊಟ್ಟಿದ್ದಾರೆ ಎಂದು ಟಿ.ಪಿ.ರಮೇಶ್ ಅವರು ಹೇಳಿದರು.
ಜಿಲ್ಲೆಯ ಪ್ರತೀ ಗ್ರಾಮಗಳಲ್ಲಿ ಕೈವಾರ ತಾತಯ್ಯ ಅವರ ಜಯಂತಿಯನ್ನು ಆಚರಿಸುವಂತಾಗಬೇಕು ಎಂದು ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ಕೃಷ್ಣಪ್ಪ ಅವರು ಮಾತನಾಡಿದರು. ಪ್ರಮುಖರಾದ ಎಚ್.ಎಲ್.ದಿವಾಕರ, ಕಂದಾ ದೇವಯ್ಯ ಉದಯ್ ಕುಮಾರ್, ಹೇಮಲತಾ, ಶ್ಯಾಮಲಾ, ನವೀನ, ಸಮಂತ್, ಯಶವಂತ್, ಇತರರು ಇದ್ದರು.