ಸಮುದಾಯಗಳ ಮುಖ್ಯವಾಹಿನಿಗೆ ತರಲು ಮೀಸಲಾತಿ: ಅಂಬಣ್ಣ

KannadaprabhaNewsNetwork | Published : Oct 17, 2024 12:48 AM

ಸಾರಾಂಶ

ದೇಶದಲ್ಲಿ ಮೊದಲಿಗೆ ಮೀಸಲಾತಿಯನ್ನು ನೀಡಿದವರು ಶಾಹು ಮಹಾರಾಜರು.

ಹೊಸಪೇಟೆ: ಸಮಾಜದಲ್ಲಿ ಇಂದಿಗೂ ನಿರೀಕ್ಷಿಸಿದ ಮಟ್ಟದಲ್ಲಿ ಜಾತಿ ವ್ಯವಸ್ಥೆಯ ಬಗೆಗಿನ ಧೋರಣೆ ಬದಲಾಗಿಲ್ಲ. ಸಾವಿರಾರು ವರ್ಷಗಳಿಂದ ಸಾಮಾಜಿಕ, ಆರ್ಥಿಕವಾಗಿ ತುಳಿತಕ್ಕೊಳಗಾಗಿದ್ದ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮೀಸಲಾತಿಯನ್ನು ಕಲ್ಪಿಸಿಕೊಟ್ಟರು ಎಂದು ಮಾನವಶಾಸ್ತ್ರ ವಿಭಾಗದ ಸಂಶೋಧನಾರ್ಥಿ ಅಂಬಣ್ಣ ಬಿ. ಹೇಳಿದರು.

ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ಒಳ ಮೀಸಲಾತಿಗಳು ನಡೆದು ಬಂದ ದಾರಿ, ಸವಾಲು ಮತ್ತು ಸಾಧ್ಯತೆಗಳು ಎಂಬ ವಿಷಯ ಕುರಿತು ಹಮ್ಮಿಕೊಂಡಿದ್ದ ಪಾಕ್ಷಿಕ ಮಾತು-02ರ ಕಾರ್ಯಕ್ರಮದಲ್ಲಿ ವಿಚಾರ ಮಂಡಿಸಿದರು.

ಎಲ್ಲ ಸಮುದಾಯಗಳಿಗೆ ಮೀಸಲಾತಿ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಿಕೊಡುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಾತ್ರ ಅಪಾರವಾದುದು. ದೇಶದಲ್ಲಿ ಮೊದಲಿಗೆ ಮೀಸಲಾತಿಯನ್ನು ನೀಡಿದವರು ಶಾಹು ಮಹಾರಾಜರು. ಕರ್ನಾಟಕದ ನಾಲ್ವಡಿ ಕೃಷ್ಣರಾಜ ಒಡೆಯರು ತಮ್ಮ ಆಡಳಿತದಲ್ಲಿ ಮೀಸಲಾತಿಯನ್ನು ನೀಡಿದ್ದರು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮಿಸಲಾತಿಯನ್ನು ಒಳಗಡೆ ಇರುವ ಪ್ರಬಲ ಜಾತಿಗಳು ಬಳಸಿಕೂಂಡು ಉನ್ನತವಾಗುತ್ತಿವೆ ಹೊರತು, ನಿಜವಾಗಿಯೂ ದೊರೆಯಬೇಕಾದ ದುರ್ಬಲ ವರ್ಗದವರಿಗೆ ಮೀಸಲಾತಿ ಸೌಲಭ್ಯ ಸಿಗುತ್ತಿಲ್ಲ. ರಾಜಕೀಯ ಪಕ್ಷಗಳು ಒಳ ಮೀಸಲಾತಿ ಜಾರಿಯ ಕುರಿತ ವಿಚಾರವನ್ನು ಕೇವಲ ಒಂದು ರಾಜಕೀಯ ದಾಳವಾಗಿ ಬಳಸಿಕೊಳ್ಳುತ್ತ ಬಂದಿವೆ. ಇದು ಬದಲಾಗಬೇಕು. ಸಮುದಾಯದೊಂದಿಗೆ ಸರ್ಕಾರ ಕೈ ಜೋಡಿಸಿ ಒಳಮೀಸಲಾತಿ ಕಲ್ಪಿಸಿಕೊಡುವ ಕೆಲಸ ಮಾಡಬೇಕು ಎಂದರು.ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ತಾರಿಹಳ್ಳಿ ಹನುಮಂತಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊರನೋಟಕ್ಕೆ ನಾವೆಲ್ಲ ಒಂದೇ, ಆದರೆ ನಗರಗಳ ಹೊರತುಪಡಿಸಿ ಗ್ರಾಮಗಳ ಸ್ಥಿತಿ ಒಳಗೆ ನೋಡಿದಾಗ ನಿಜವಾದ ನೋಟ ಗೊತ್ತಾಗುತ್ತದೆ. ಪ್ರಾಣಿಗಳಿಗೆ ಕೆರೆಯ ನೀರು ಕುಡಿಯುವ ಹಕ್ಕಿದೆ, ಆದರೆ ಕೆಳಜಾತಿಗಳಿಗೆ ಅವಕಾಶವಿಲ್ಲ. ಶಿಕ್ಷಣ, ಸಂಘಟನೆ ಮತ್ತು ಹೋರಾಟದಿಂದ ಮಾತ್ರ ನಮ್ಮ ಪ್ರಗತಿ ಸಾಧ್ಯ. ಯುವಕರು ದುಶ್ಚಟಗಳಿಂದ ದೂರ ಇದ್ದು, ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದರು.

ಪ್ರಾಧ್ಯಾಪಕ ಡಾ.ಎಲ್.ಶ್ರೀನಿವಾಸ್‌, ಕಮಲಾಪುರದ ರೈತ ಮುಖಂಡರು ಮತ್ತು ಸಂಶೋಧನಾರ್ಥಿಗಳು ಇದ್ದರು. ಡಾ. ವಿನಾಯಕ ಜೆ., ಸಂಚಾಲಕ ಡಾ. ಶಿವರಾಜ ಎಸ್. ನಿರ್ವಹಿಸಿದರು.

ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದಲ್ಲಿ ಒಳ ಮೀಸಲಾತಿಗಳು ನಡೆದು ಬಂದ ದಾರಿ ಸವಾಲು ಮತ್ತು ಸಾಧ್ಯತೆಗಳು ವಿಷಯದ ಕುರಿತು ಹಮ್ಮಿಕೊಂಡಿದ್ದ ಪಾಕ್ಷಿಕ ಮಾತು-02 ಕಾರ್ಯಕ್ರಮದಲ್ಲಿ ಅಂಬಣ್ಣ ಬಿ. ಅವರು ವಿಚಾರ ಮಂಡಿಸಿದರು. ವಿಭಾಗದ ಮುಖ್ಯಸ್ಥ ಡಾ.ತಾರಿಹಳ್ಳಿ ಹನುಮಂತಪ್ಪ ಇದ್ದರು.

Share this article