ಟೇಕ್ವಾಂಡೋ ಕ್ರೀಡಾಪಟುಗಳಿಗೂ ಉದ್ಯೋಗದಲ್ಲಿ ಮೀಸಲಾತಿ: ಶಾಸಕ ತಮ್ಮಯ್ಯ

KannadaprabhaNewsNetwork |  
Published : Oct 14, 2024, 01:27 AM IST
ಚಿಕ್ಕಮಗಳೂರಿನ ಎಐಟಿ ಕ್ಯಾಂಪಸ್‌ನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ - ಬಾಲಕಿಯರ ಟೇಕ್ವಾಂಡೋ ಪಂದ್ಯಾವಳಿಯನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಅವರು ಭಾನುವಾರ ಉದ್ಘಾಟಿಸಿ ಪಂದ್ಯವನ್ನು ವೀಕ್ಷಿಸಿದರು.  | Kannada Prabha

ಸಾರಾಂಶ

ಟೇಕ್ವಾಂಡೋ ಕ್ರೀಡೆಗೆ ಹೆಚ್ಚು ಉತ್ತೇಜನ ನೀಡುವ ಉದ್ದೇಶದಿಂದ ನಮ್ಮ ಸರ್ಕಾರ ಇತರೆ ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ನೀಡುವಂತಹ ಶೇ.2 ರಷ್ಟು ಮೀಸಲನ್ನು ಟೇಕ್ವಾಂಡೋ ಕ್ರೀಡಾಪಟುಗಳಿಗೂ ನೀಡಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಟೇಕ್ವಾಂಡೋ ಕ್ರೀಡೆಗೆ ಹೆಚ್ಚು ಉತ್ತೇಜನ ನೀಡುವ ಉದ್ದೇಶದಿಂದ ನಮ್ಮ ಸರ್ಕಾರ ಇತರೆ ಕ್ರೀಡಾಪಟುಗಳಿಗೆ ಉದ್ಯೋಗದಲ್ಲಿ ನೀಡುವಂತಹ ಶೇ.2 ರಷ್ಟು ಮೀಸಲನ್ನು ಟೇಕ್ವಾಂಡೋ ಕ್ರೀಡಾಪಟುಗಳಿಗೂ ನೀಡಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.

ರಾಜ್ಯ ಟೇಕ್ವಾಂಡೋ ಸಂಸ್ಥೆ, ಶಾಲಾ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಎಐಟಿ ಆಶ್ರಯದಲ್ಲಿ ನಡೆಯುತ್ತಿರುವ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯನ್ನು ಎಐಟಿ ಆವರಣದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

2008 ರಲ್ಲಿ ಟೇಕ್ವಾಂಡೋ ಪ್ರಾರಂಭವಾದಾಗ ನಾನು ನಗರಸಭೆ ಅಧ್ಯಕ್ಷನಾಗಿ ಉದ್ಘಾಟಿಸಿದ್ದೆ. ಯೋಗಾಯೋಗ ಈಗ ರಾಜ್ಯಮಟ್ಟದ ಪ್ರಥಮ ಟೇಕ್ವಾಂಡೋ ಸ್ಪರ್ಧೆಯನ್ನು ಉದ್ಘಾಟಿಸುವ ಭಾಗ್ಯ ನನಗೆ ದೊರೆತಿರುವುದು ಸಂತೋಷವಾಗಿದೆ. ನಮ್ಮ ಸರ್ಕಾರ ಎಲ್ಲಾ 34 ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ನೀಡುವ ಶೇ.2 ರಷ್ಟು ಮೀಸಲನ್ನು ಟೇಕ್ವಾಂಡೋ ಪಟುಗಳಿಗೂ ವಿಸ್ತರಿಸಿದೆ. ಇದು ಸಂತೋಷದ ವಿಚಾರ ಎಂದರು.

ಜಿಲ್ಲೆಯ ಟೇಕ್ವಾಂಡೋ ತರಬೇತುದಾರ ಗಿರೀಶ್‌ ಅವರ ಉತ್ತೇಜನದಿಂದ ಇಲ್ಲಿನ ನಿರೀಕ್ಷಾ ನಾಡಿಗ್ ಮತ್ತು ರಾಹುಲ್ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವಂತಾಗಿದೆ. ನಮ್ಮ ಸರ್ಕಾರ ಒಲಂಪಿಕ್‌ನಲ್ಲಿ ಚಿನ್ನ ಗೆದ್ದವರಿಗೆ 7.5 ಕೋಟಿ, ಬೆಳ್ಳಿ ಗೆದ್ದವರಿಗೆ 5 ಕೋಟಿ, ಕಂಚು ಗೆದ್ದವರಿಗೆ 3 ಕೋಟಿ ನೀಡುತ್ತಿದೆ. ಇದು ಇತರೆ ಯಾವುದೇ ರಾಜ್ಯದಲ್ಲಿ ಇಲ್ಲ ಎಂದು ಹೇಳಿದ ಅವರು, ಪೋಷಕರು ಮತ್ತು ಶಿಕ್ಷಕರು ಮಕ್ಕಳನ್ನು ಬರಿ ಶಿಕ್ಷಣಕ್ಕೆ ಸೀಮಿತಗೊಳಿಸದೆ ಕ್ರೀಡೆಗಳಿಗೂ ಪ್ರೋತ್ಸಾಹಿಸಬೇಕು ಎಂದರು.

ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ಪಾಲಾಕ್ಷಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಟೇಕ್ವಾಂಡೋ ತರಬೇತುದಾರ ಗಿರೀಶ್‌ ಅವರ ಹೋರಾಟದ ಫಲವಾಗಿ ರಾಜ್ಯಮಟ್ಟದಲ್ಲಿ ಟೇಕ್ವಾಂಡೋ ಸೇರ್ಪಡೆಯಾಗಿದೆ. 14 - 17 ರ ವಯೋಮಿತಿಯ ಬಾಲಕ, ಬಾಲಕಿಯರ ಟೇಕ್ವಾಂಡೋ ಸ್ಪರ್ಧೆ ನಡೆಯುತ್ತಿದ್ದು, 42 ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದವರು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿಡಿಪಿಐ ಪುಟ್ಟರಾಜು, ರಾಜ್ಯ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷ ಸಂಜೀವ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ಬಿಇಒ ರವೀಶ್, ಜಿಲ್ಲಾ ಟೇಕ್ವಾಂಡೋ ಸಂಸ್ಥೆಯ ಅಧ್ಯಕ್ಷ ಸಂತೋಷ್‌ಕುಮಾರ್, ತರಬೇತುದಾರ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಯಧು ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಾನಾಯ್ಕ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೈರೇಗೌಡ, ಡಿ.ಪಿ.ಕುಮಾರಸ್ವಾಮಿ, ಪರಮೇಶ್ವರಪ್ಪ, ಮಂಜುನಾಥ್, ಉಮೇಶ್, ಪ್ರವೀಣ್‌ ಪಿಂಟೋ, ಶಿವಪ್ಪ, ಸೈಯದ್‌ ರಿಯಾಜ್ ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ