ತುಮಕೂರು ದಸರಾ : ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ - ಗೃಹ ಸಚಿವ ಡಾ.ಜಿ.ಪರಮೇಶ್ವರ್

KannadaprabhaNewsNetwork |  
Published : Oct 14, 2024, 01:27 AM ISTUpdated : Oct 14, 2024, 01:28 PM IST
Dr G parameshwar

ಸಾರಾಂಶ

ಎಲ್ಲರನ್ನೂ ಒಗ್ಗೂಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿರುವ ತುಮಕೂರು ದಸರಾ ಮುಂದಿನ ವರ್ಷಗಳಲ್ಲಿ ಇದೇ ರೀತಿ ಮತ್ತಷ್ಟು ಯಶಸ್ವಿಯಾಗಿ ಆಚರಿಸೋಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

 ತುಮಕೂರು : ಎಲ್ಲರನ್ನೂ ಒಗ್ಗೂಡಿಸುವ  ನಿಟ್ಟಿನಲ್ಲಿ ಯಶಸ್ವಿಯಾಗಿರುವ ತುಮಕೂರು ದಸರಾ ಮುಂದಿನ ವರ್ಷಗಳಲ್ಲಿ ಇದೇ ರೀತಿ ಮತ್ತಷ್ಟು ಯಶಸ್ವಿಯಾಗಿ ಆಚರಿಸೋಣ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ತುಮಕೂರು ದಸರಾ ಉತ್ಸವದ ಕೊನೆಯ ದಿನದಂದು ಸಾಂಸ್ಕೃತಿಕ ವೇದಿಕೆಯಲ್ಲಿ ಮಾತನಾಡಿದರು. ಈ ಉತ್ಸವ ಆರಂಭವಾದಾಗಿನಿಂದ ಇಲ್ಲಿಯತನಕ ಎಲ್ಲವೂ ಸುಸೂತ್ರವಾಗಿ ನಡೆದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು ಎಂದರು.

ನಾಡಿನಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಶ್ರೀ ಚಾಮುಂಡೇಶ್ವರಿ ದೇವಿಯಲ್ಲಿ ನಾವುಗಳು ಪ್ರಾರ್ಥಿಸಿದ್ದೇವೆ. ಮೈಸೂರಿನಂತೆ ಐತಿಹಾಸಿಕ ದಸರಾ ಆಚರಿಸಲು ಸಾಧ್ಯವಾಗದೆ ಹೋದರೂ ಅಂತಹ ಒಂದು ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ. ಸ್ಥಳೀಯ ಕಲಾವಿದರುಗಳಿಗೂ ಅವಕಾಶ ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲರ ಸಹಕಾರದಿಂದ ತುಮಕೂರು ದಸರಾ ಒಂದು ಮಹೋನ್ನತ ಉತ್ಸವವಾಗಿ ಹೊರಬರಲಿ ಎಂದು ನಾನು ಆಶಿಸುತ್ತೇನೆ. ಈ ಉತ್ಸವಕ್ಕೆ ಯಾವುದೇ ರಾಜಕೀಯ ಮತ್ತಿತರ ಸೋಂಕು ಇಲ್ಲದಂತೆ ಎಲ್ಲರ ದಸರಾ ಉತ್ಸವವಾಗಿ ಇದು ಹೀಗೆಯೇ ಮುಂದುವರೆಯಲಿ ಎಂದರು.

ಈ ಉತ್ಸವ ಇಷ್ಟು ದಿನಗಳ ಕಾಲ ಯಶಸ್ವಿಯಾಗಿ ನೆರವೇರಲು ಇಲ್ಲಿನ ಜಿಲ್ಲಾಡಳಿತ, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಕೇಂದ್ರ ಸಚಿವ ವಿ.ಸೋಮಣ್ಣ, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಬಿ.ಸುರೇಶ್‌ಗೌಡ ಎಲ್ಲರೂ ಕೈಜೋಡಿಸಿದ್ದಾರೆ. ಅವರೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ತುಮಕೂರು ಒಂದು ಕಲೆ, ಸಂಗೀತ ಮತ್ತು ಸಾಹಿತ್ಯದ ನೆಲೆ ಬೀಡು. ಬಹಳಷ್ಟು ಮಂದಿ ಇಲ್ಲಿನ ಕಲಾವಿದರು ನಾಡಿಗೆ ಕೊಡುಗೆ ನೀಡಿದ್ದಾರೆ. ಅವರೆಲ್ಲರನ್ನೂ ಸ್ಮರಿಸುವ ಕಾರ್ಯ ಆಗಬೇಕು ಎಂದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಇಂತಹ ಒಂದು ದೊಡ್ಡ ಮಟ್ಟದ ಉತ್ಸವವನ್ನು ನೆರವೇರಿಸಲು ಡಾ.ಜಿ.ಪರಮೇಶ್ವರ್ ಧೈರ್ಯ ಮಾಡಿದ್ದಾರೆ. ಅವರಿಗೆ ಇಲ್ಲಿನ ಆಡಳಿತ ಸಂಪೂರ್ಣ ಬೆಂಬಲ ನೀಡಿ ತಮ್ಮ ಮನೆಯ ಕಾರ್ಯಕ್ರಮದಂತೆ ನೋಡಿಕೊಂಡಿದ್ದಾರೆ. ದಸರಾ ಆಚರಣೆಯ ಈ ಸಂಪ್ರದಾಯ ಮತ್ತು ಪರಂಪರೆ ಪ್ರತಿ ವರ್ಷ ಹೀಗೆಯೇ ಮುಂದುವರೆಯಲಿ ಎಂದು ಆಶಿಸಿದರು.ಖ್ಯಾತ ಸಂಗೀತ ನಿರ್ದೇಶಕ, ಗಾಯಕ ವಿಜಯಪ್ರಕಾಶ್ ಅವರ ಸಂಗೀತ ರಸಸಂಜೆ ಕಾರ್ಯಕ್ರಮ ಪ್ರೇಕ್ಷಕರನ್ನು ಆಕರ್ಷಿಸಿತು. ಕೊನೆಯಲ್ಲಿ ಜಗಮಗಿಸುವ ಸಿಡಿಮದ್ದುಗಳ ಪ್ರದರ್ಶನವೂ ಜನರ ಮನ ಸೂರೆಗೊಂಡಿತು. ಡ್ರೋನ್ ಮೂಲಕ ಸಾಂಸ್ಕೃತಿಕ ದಸರಾ ಕಾರ್ಯಕ್ರಮಗಳ ಶೋ ಏರ್ಪಡಿಸಲಾಗಿತ್ತು.

ಶಾಸಕ ಬಿ.ಸುರೇಶ್‌ಗೌಡ, ಐಜಿಪಿ ಲಾಬೂರಾಂ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಎಚ್. ಉಪಸ್ಥಿತರಿದ್ದರು. ಪೋಟೋ

ತುಮಕೂರಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದ ಸಾಂಸ್ಕೃತಿಕ ವೇದಿಕೆಯಲ್ಲಿ ಆಯೋಜಿಸಿದ್ದ ತುಮಕೂರು ದಸರಾ ಉತ್ಸವದಲ್ಲಿ ಖ್ಯಾತ ಗಾಯಕ ವಿಜಯಪ್ರಕಾಶ್ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಗಳ ಜತೆಗೆ ಹಲವು ಹೊಸ ಯೋಜನೆಗಳೂ ಉಂಟು
ಕೇರಳ ರೀತಿ ಮನೆಯಲ್ಲೇ ರೋಗಿಗಳಿಗೆ ಆರೈಕೆ