ಗಂಗಾಮತ ಸಮಾಜಕ್ಕೆ ಮೀಸಲಾತಿ ಅನಿವಾರ್ಯ: ಮುಸ್ಟೂರು ರಾಜಶೇಖರಪ್ಪ

KannadaprabhaNewsNetwork | Published : May 23, 2024 1:11 AM

ಸಾರಾಂಶ

ಗಂಗಾಮತ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮಾಜ ಅಭಿವೃದ್ಧಿ ಕಂಡುಕೊಳ್ಳಬೇಕಾದರೆ ಮೀಸಲಾತಿ ತುಂಬಾ ಅನಿವಾರ್ಯವಾಗಿದೆ.

ಗಂಗಾಮತ ಸಮಾಜದ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷಕನ್ನಡಪ್ರಭ ವಾರ್ತೆ ಗಂಗಾವತಿ

ಗಂಗಾಮತ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಸಮಾಜ ಅಭಿವೃದ್ಧಿ ಕಂಡುಕೊಳ್ಳಬೇಕಾದರೆ ಮೀಸಲಾತಿ ತುಂಬಾ ಅನಿವಾರ್ಯವಾಗಿದೆ. ನಾವೆಲ್ಲರೂ ಒಗ್ಗಟ್ಟಿನಿಂದ ಮೀಸಲಾತಿಗೆ ಹೋರಾಟ ಮಾಡಬೇಕು ಎಂದು ಗಂಗಾಮತ ಸಮಾಜದ ರಾಜ್ಯ ಘಟಕದ ಮಾಜಿ ಉಪಾಧ್ಯಕ್ಷ ಮುಸ್ಟೂರು ರಾಜಶೇಖರಪ್ಪ ಹೇಳಿದರು.

ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಗಂಗಾಮತ ಸಮಾಜದ ವತಿಯಿಂದ ಬುಧವಾರ ಹಮ್ಮಿಕೊಂಡ 16ನೇ ವರ್ಷದ ಗಂಗಾ ಪರಮೇಶ್ವರಿ ದೇವಿಯ ಜಯಂತಿಯಲ್ಲಿ ಮಾತನಾಡಿದರು.

ನದಿ ಪಾತ್ರಗಳಲ್ಲಿ ಮೀನು ಹಿಡಿದುಕೊಂಡು, ಕೂಲಿ ಮಾಡಿಕೊಂಡು ಬದುಕು ಸಾಗಿಸುತ್ತಿರುವ ಗಂಗಾಮತ ಸಮಾಜದವರು ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸಮಾಜದಲ್ಲಿ ಪ್ರತಿಯೊಬ್ಬರು ಆರ್ಥಿಕ ಸಂಕಷ್ಟವನ್ನು ಎದುರಿಸಿಕೊಂಡು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ರಾಜ್ಯದಲ್ಲಿ ಬಹುಸಂಖ್ಯೆಯಲ್ಲಿದ್ದರೂ ಯಾವುದೇ ಪ್ರಯೋಜನ ಇಲ್ಲದಂತ ಪರಿಸ್ಥಿತಿ ಗಂಗಾಮತ ಸಮಾಜದವರು ಎದುರಿಸುತ್ತಿದ್ದಾರೆ. ಮೀಸಲಾತಿಗಾಗಿ ಸುಮಾರು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಎಲ್ಲಿ ವರೆಗೆ ನಾವೆಲ್ಲರೂ ಹೋರಾಟ ಮಾಡಲು ಮುಂದಾಗುವುದಿಲ್ಲವೋ ಅಲ್ಲಿಯವರೆಗೆ ಮೀಸಲಾತಿ ದೊರೆಯುದಿಲ್ಲ. ಸಮಾಜದ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕು. ಹೋರಾಟ ಮನೋಭಾವವನ್ನು ಮೈಗೂಡಿಸಿಕೊಂಡು ಒಗ್ಗಟ್ಟಿನಿಂದ ಸಮಾಜದ ಏಳಿಗೆಗೆ ನಾವೆಲ್ಲರೂ ಮುಂದಾಗಬೇಕು ಎಂದು ಹೇಳಿದರು.

ಗಂಗಾ ಪರಮೇಶ್ವರಿ ಜಯಂತಿ ಅಂಗವಾಗಿ ದೇವಸ್ಥಾನದಲ್ಲಿ ಗಂಗಾದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ನಾನಾ ಧಾರ್ಮಿಕ ಪೂಜೆಗಳು ಜರುಗಿದವು. ನಂತರ ಗಂಗಾ ಪರಮೇಶ್ವರಿ ದೇವಿಯ ಭಾವಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಭ, ಕಳಶಗಳೊಂದಿಗೆ ಅದ್ಧೂರಿಯಾಗಿ ಮೆರವಣಿಗೆ ಮಾಡಲಾಯಿತು. ಗಂಗಾಮತ ಸಮಾಜದ ತಾಲೂಕು ಗೌರವ ಅಧ್ಯಕ್ಷ ಬಿ. ಅಂಜೀನಪ್ಪ, ಅಂಬಿಗರ ಚೌಡಯ್ಯ ಯುವಕ ಸಂಘದ ಅಧ್ಯಕ್ಷ ಹನುಮೇಶ ಭಟಾರಿ, ಗ್ರಾಮ ಘಟಕದ ಗೌರವಾಧ್ಯಕ್ಷ ಜಿ. ರಾಮಣ್ಣ, ಅಧ್ಯಕ್ಷರಾದ ಆರ್.ಕೆ. ಎರಿಸ್ವಾಮಿ, ಉಪಾಧ್ಯಕ್ಷರಾದ ಅಯ್ಯಪ್ಪ ಮುಕ್ಕುಂದಿ, ಕಾರ್ಯದರ್ಶಿ ಜೆ. ಚಂದ್ರಶೇಖರ, ಖಜಾಂಚಿ ಜಿ. ಪಂಪಾಪತಿ, ಸಹ ಕಾರ್ಯದರ್ಶಿ ನಾಗರಾಜ ರಾಮಸಾಗರ ಪ್ರಮುಖರಾದ ಬಿ. ಹರೀಶ್, ಗೌರೀಶ್ ಬಾಗೋಡಿ ಇತರರು ಇದ್ದರು.

Share this article