ಶಂಕರ ಭಟ್ಟ ತಾರೀಮಕ್ಕಿಯಲ್ಲಾಪುರ: ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಯನ್ನು ಪ್ರಕಟಿಸಿದ್ದು, ಬಹುಸಮಯದಿಂದ ಈ ಹುದ್ದೆಗಳಿಗೆ ಚುನಾವಣೆ ನಡೆಯದೇ ನನೆಗುದಿಗೆ ಬಿದ್ದಿತ್ತು. ಇದೀಗ ಆದೇಶದ ಹಿನ್ನೆಲೆ ಪಟ್ಟಣ ಪಂಚಾಯಿತಿಗೆ ಜೀವಕಳೆ ಬಂದಂತಾಗಿದೆ.ಯಲ್ಲಾಪುರ ಪಪಂಗೆ ಪ್ರಟಿಸಿರುವ ಮೀಸಲಾತಿ ಅನ್ವಯ ಬ ವರ್ಗದ ಮಹಿಳೆಗೆ ಅಧ್ಯಕ್ಷ ಸ್ಥಾನ, ಉಪಾಧ್ಯಕ್ಷರಿಗೆ ಸಾಮಾನ್ಯ ವರ್ಗಕ್ಕೆ ಲಭಿಸಿವೆ. ಆದರೆ, ಯಲ್ಲಾಪುರ ಪಟ್ಟಣ ಪಂಚಾಯಿತಿ ಒಟ್ಟು ೧೯ ಸದಸ್ಯರ ಬಲ ಹೊಂದಿದ್ದರೂ, ಬ ವರ್ಗದ ಮಹಿಳಾ ಅಭ್ಯರ್ಥಿ ಇಲ್ಲ. ಆದರೆ, ಕರ್ನಾಟಕ ಪೌರಸಭೆಗಳ ಅಧಿನಿಯಮ ೧೯೬೪ರ ಪ್ರಕಾರ ಅ ವರ್ಗ, ಬ ವರ್ಗದ ಸದಸ್ಯರಿಲ್ಲದ ಪಕ್ಷದಲ್ಲಿ ಅ ಪ್ರವರ್ಗಕ್ಕೆ ಸೇರಿದ ವ್ಯಕ್ತಿಗಳಿಂದ ಭರ್ತಿ ಮಾಡಿಕೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಉಪಾಧ್ಯಕ್ಷ ಸ್ಥಾನ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಮೂರು ಗುಂಪುಗಳು: ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ ಅವರ ಅಣತಿಯಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆ ನಿರ್ಧರಿತವಾಗಲಿದೆ ಎಂಬುದು ರಾಜಕೀಯ ವಲಯದ ವಿಶ್ಲೇಷಣೆ. ೧೯ ಸದಸ್ಯರ ಪೈಕಿ ಓರ್ವರು ಮರಣ ಹೊಂದಿದ ಹಿನ್ನೆಲೆಯಲ್ಲಿ ಪ್ರಸ್ತುತ ೧೮ ಸದಸ್ಯರ ಬಲವಿದೆ. ಇವರಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಹೆಬ್ಬಾರ್ ಅಭಿಮಾನಿ ಬಳಗ ಎಂಬ ಮೂರು ಗುಂಪುಗಳಿವೆ.ಹೆಬ್ಬಾರ್ ಅಭಿಮಾನಿ ಬಳಗದ ಸುನಂದಾ ದಾಸ್, ಸತೀಶ ಎಸ್. ನಾಯ್ಕ, ಪುಷ್ಪಾ ನಾಯ್ಕ, ರಾಜು ನಾಯ್ಕ, ಜನಾರ್ದನ ಪಾಟಣಕರ, ಗೀತಾ ದೇಶಭಂಡಾರಿ, ನಾಗರಾಜ ಅಂಕೋಲೇಕರ, ಅಮಿತ್ ಅಂಗಡಿ, ಅಲಿ, ಹಲೀಮಾ ಕಕ್ಕೇರಿ ಸೇರಿದಂತೆ ೧೦ ಸದಸ್ಯರಿದ್ದಾರೆ. ಬಿಜೆಪಿಯ ಸೋಮೇಶ್ವರ ನಾಯ್ಕ, ಶ್ಯಾಮಿಲಿ ಪಾಟಣಕರ, ಆದಿತ್ಯ ಗುಡಿಗಾರ, ಕಲ್ಪನಾ ಜಿ. ನಾಯ್ಕ, ಜ್ಯೋತಿ ನಾಯ್ಡು ಸೇರಿದಂತೆ ೫ ಸದಸ್ಯರು; ಕಾಂಗ್ರೆಸ್ಸಿನ ನರ್ಮದಾ ನಾಯ್ಕ, ಕೈಸರ್ ಅಲಿ ಮತ್ತು ಪಕ್ಷೇತರ ಸದಸ್ಯ ರಾಧಾಕೃಷ್ಣ ನಾಯ್ಕ ಸೇರಿ ಒಟ್ಟು ೧೮ ಸದಸ್ಯರಿದ್ದಾರೆ.
ಯಾರಿಗೆ ಅಧ್ಯಕ್ಷ ಸ್ಥಾನ?: ಪ್ರಸ್ತುತ ಅತ್ಯಂತ ಹಿರಿಯ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಪುಷ್ಪಾ ನಾಯ್ಕ, ಮಾಜಿ ಅಧ್ಯಕ್ಷೆ ಸುನಂದಾ ದಾಸ್, ಸದಸ್ಯರಾದ ನರ್ಮದಾ ನಾಯ್ಕ, ಗೀತಾ ಭಂಡಾರಿ ಅ ವರ್ಗಕ್ಕೆ ಸೇರಿದವರಾಗಿದ್ದಾರೆ. ಆದ್ದರಿಂದ ಅಧಿನಿಯಮದ ಪ್ರಕಾರ ಈ ನಾಲ್ವರೂ ಬ ವರ್ಗದಿಂದ ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ. ಇದರಿಂದ ನಾಲ್ವರಲ್ಲಿ ತೀವ್ರ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ.ಅನೇಕ ಬಾರಿ ಪುಷ್ಪಾ ನಾಯ್ಕ ಅವರಿಗೆ ಅಧ್ಯಕ್ಷ ಸ್ಥಾನದ ಅವಕಾಶವಿದ್ದರೂ ಒಲಿದು ಬಂದಿರಲಿಲ್ಲ. ಇದೀಗ ಅವರು ಹಿರಿಯರು ಮತ್ತು ಅನುಭವಿಗಳೂ ಆಗಿರುವುದರಿಂದ ಉತ್ತಮ ಅವಕಾಶ ಲಭ್ಯವಾಗಿದೆ. ಈ ನಡುವೆ ರಾಜಕೀಯ ಲೆಕ್ಕಾಚಾರ ಬೇರೆಯೇ ಆಗಿರುವುದರಿಂದ ಏನಾಗುವುದೆಂಬುದನ್ನು ಊಹಿಸುವುದು ಕಷ್ಟಸಾಧ್ಯ. ಕಾನೂನು ಪ್ರಕಾರ ಪ್ರಕ್ರಿಯೆ: ಸರ್ಕಾರ ಮೀಸಲಾತಿ ಪ್ರಕಟಿಸಿದೆ. ಅಂತೆಯೇ ಬ ಮಹಿಳಾ ಕೆಟಗಿರಿ ನಮ್ಮಲ್ಲಿ ಇಲ್ಲದೇ ಇರುವುದರಿಂದ ಅಧಿನಿಯಮ ೪೨ರಂತೆ ಕಾನೂನು ಪ್ರಕಾರ ಚುನಾವಣಾಧಿಕಾರಿಗಳು ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಯನ್ನು ನಡೆಸಿಕೊಡಲಿದ್ದಾರೆ ಎಂದು ಪಪಂ ಮುಖ್ಯಾಧಿಕಾರಿ ಸುನಿಲ ಗಾವಡೆ ತಿಳಿಸಿದರು.