-ಕನ್ನಡ ರಥಕ್ಕೆ ಅದ್ದೂರಿ ಸ್ವಾಗತ, ಮೆರವಣಿಗೆ -ತಾಲೂಕು ಆಡಳಿತ, ಕನ್ನಡ ಸಂಘಟನೆಗಳ ನೇತೃತ್ವದಲ್ಲಿ ಸಂಭ್ರಮ
ಕರ್ನಾಟಕ ಸಂಭ್ರಮ 50ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಅಭಿಯಾನದ ಭಾಗವಾಗಿ ಬುಧವಾರ ತಾಲೂಕಿಗೆ ಆಗಮಿಸಿದ ಕನ್ನಡ ಜ್ಯೋತಿ ರಥವನ್ನು ತಾಲೂಕಿನ ಗಡಿ ಪ್ರದೇಶದಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ, ರೈಲು ನಿಲ್ದಾಣ ಬಳಿಯ ವಿ.ಕೃ.ಗೋಕಾಕ್ ವೃತ್ತ, ಡಿ ಕ್ರಾಸ್ ಬಳಿಯ ಡಾ.ರಾಜ್‌ಕುಮಾರ್ ವೃತ್ತದ ಮೂಲಕ ದೊಡ್ಡಬಳ್ಳಾಪುರ ನಗರಕ್ಕೆ ಬರಮಾಡಿಕೊಳ್ಳಲಾಯಿತು. ಇಲ್ಲಿನ ನೆಲದಾಂಜನೇಯಸ್ವಾಮಿ ದೇವಾಲಯ ಸಮೀಪದ ಜಯಚಾಮರಾಜೇಂದ್ರ ವೃತ್ತದಲ್ಲಿ ಕನ್ನಡ ರಥದ ಮೆರವಣಿಗೆಗೆ ಅಧಿಕೃತ ಚಾಲನೆ ದೊರೆಯಿತು.ಈ ವೇಳೆ ತಹಸೀಲ್ದಾರ್ ವಿಭಾ ವಿದ್ಯಾ ರಾಥೋಡ್ ಮಾತನಾಡಿ, ವಿಶಾಲ ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿ 50 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ಅವಿಸ್ಮರಣೀಯ ಕ್ಷಣವನ್ನು ಸಂಭ್ರಮವನ್ನಾಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಕನ್ನಡ ರಥಯಾತ್ರೆಗೆ ಚಾಲನೆ ನೀಡಿದೆ. ವಿಜಯನಗರ ಜಿಲ್ಲೆಯ ಹಂಪಿಯಿಂದ ಹೊರಟಿರುವ ರಥ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಸಂಚರಿಸಿ ನಾಡಿನ ಅನನ್ಯತೆಯನ್ನು ಸಾರಿದೆ ಎಂದರು.
ಕನ್ನಡ ಸಂಘಟನೆಗಳ ಮುಖಂಡರು ಮಾತನಾಡಿ, ಕನ್ನಡ ನಾಡಿನ ಅಸ್ಮಿತೆಯ ರಕ್ಷಣೆಗೆ ಕನ್ನಡಿಗರನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಈ ರಥಯಾತ್ರೆ ಮಹತ್ವ ಪಡೆದಿದೆ. ಪ್ರತಿಯೊಬ್ಬ ಕನ್ನಡಿಗನೂ ಭಾಷೆ, ನಾಡು, ನೆಲ, ಜಲದ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ಕರ್ನಾಟಕ ಎಂದು ಹೆಸರಾಗಿರುವ ನಮ್ಮ ನಾಡಿನಲ್ಲಿ ಕನ್ನಡ ಉಸಿರಾಗಬೇಕು. ಕನ್ನಡತನ ರಾರಾಜಿಸಬೇಕು ಎಂಬುದು ಎಲ್ಲರ ಆಶಯ ಎಂದು ತಿಳಿಸಿದರು.
ಬಾಶೆಟ್ಟಹಳ್ಳಿಯಿಂದ ಪ್ರಾರಂಭವಾದ ಕನ್ನಡ ಜ್ಯೋತಿ ರಥವನ್ನು ಶಾಲಾ ವಿದ್ಯಾರ್ಥಿಗಳು ಕನ್ನಡ ಬಾವುಟಗಳನ್ನು ಹಿಡಿದು ಸಂಭ್ರಮದಿಂದ ಬರಮಾಡಿಕೊಂಡರು. ಪೂರ್ಣಕುಂಭ ಸ್ವಾಗತ ನೀಡಲಾಯಿತು. ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದ ವಿ.ಕೃ.ಗೋಕಾಕ್ ವೃತ್ತ, ಡಿ ಕ್ರಾಸ್‌ನ ಡಾ.ರಾಜ್‌ಕುಮಾರ್ ವೃತ್ತ, ಮಹಾತ್ಮಗಾಂಧಿ ವೃತ್ತ, ಜಯಚಾಮರಾಜೇಂದ್ರ ವೃತ್ತ, ಬಿಎಂಶ್ರೀ ರಸ್ತೆ, ರಂಗಪ್ಪ ವೃತ್ತ, ತೇರಿನಬೀದಿ, ಅರಳುಮಲ್ಲಿಗೆ ಬಾಗಿಲು, ಸಂಜಯನಗರ, ಸ್ವಾಮಿ ವಿವೇಕಾನಂದ ರಸ್ತೆ, ತಾಲೂಕು ಕಛೇರಿ ವೃತ್ತ(ಬಸವೇಶ್ವರ ವೃತ್ತ), ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ, ಜಿ.ರಾಮೇಗೌಡ ವೃತ್ತದವರೆಗೆ ಸಂಚರಿಸಿತು.
ಮೊಕದ್ದಮೆ ವಾಪಸ್ಸಿಗೆ ಒತ್ತಾಯ: