ಕನ್ನಡಪ್ರಭ ವಾರ್ತೆ ಮಂಡ್ಯ
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಸೆಮಿ ಕಂಡಕ್ಟರ್ ಘಟಕ ಸ್ಥಾಪಿಸಲು ೧೦೦ ಎಕರೆ ಬಯಲು ಭೂಮಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಘಟಕ ಸ್ಥಾಪನೆಗೆ ಸಿದ್ಧಪಡಿಸಿದ ಕೈಗಾರಿಕಾ ಭೂಮಿ ಜಿಲ್ಲೆಯಲ್ಲಿ ಸದ್ಯಕ್ಕೆ ಲಭ್ಯವಿಲ್ಲವೆಂದು ರಾಜ್ಯ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ಆದರೆ, ಸರ್ಕಾರಿ ಗೋಮಾಳ ಜಾಗವಿರುವುದನ್ನು ಬಹುಶಃ ಯಾರೂ ಅವರ ಗಮನಕ್ಕೆ ತಂದಿಲ್ಲದಿರಬಹುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಸರ್ಕಾರಿ ಗೋಮಾಳದಲ್ಲಿ ಆಕಾರ್ ಬಂದ್‌ನಂತೆ ೧೧೦ ಎಕರೆ ೯ ಗುಂಟೆ ಬಿ-ಖರಾಬು ಜಮೀನಿದ್ದು ಆರ್‌ಟಿಸಿಯಂತೆ ೧೧೪.೨೧ ಎಕರೆ ಜಮೀನಿದೆ. ಉಳಿಕೆ ೧೦೯.೩೧ ಗುಂಟೆ ಜಮೀನಿರುತ್ತದೆ. ಈ ಜಮೀನಿನಲ್ಲಿ ಅರಣ್ಯ ಇಲಾಖೆಯಿಂದ ೫ ಹೆಕ್ಟೇರ್‌ನಷ್ಟು ನೆಡುತೋಪು ಬೆಳೆಸಲಾಗಿರುತ್ತದೆ ಎಂದು ವಿವರಿಸಿದರು.ಅಲ್ಲದೇ, ಈ ಸರ್ಕಾರಿ ಜಮೀನಿಗೆ ಹೊಂದಿಕೊಂಡಂತೆ ಶ್ರೀರಂಗಪಟ್ಟಣ ತಾಲೂಕು ಕೆ.ಶೆಟ್ಟಿಹಳ್ಳಿ-೨ರ ಹೋಬಳಿ ಸಿದ್ದಾಪುರ ಗ್ರಾಮದ ಸರ್ವೇ ನಂ.೯೩ರಲ್ಲಿ ೨೮ ಎಕರೆಗಿಂತಲೂ ಹೆಚ್ಚಿನ ಸರ್ಕಾರಿ ಹುಲ್ಲುಬನ್ನಿ ಜಮೀನಿದ್ದು ಅದರಲ್ಲಿ ಶ್ರೀರಂಗಪಟ್ಟಣ ತಾಲೂಕು ಪಂಚಾಯ್ತಿಗೆ ೩ ಎಕರೆ ಹಾಗೂ ಆರಕ್ಷಕ ಇಲಾಖೆಗೆ ೧ ಎಕರೆ ಭೂ ಮಂಜೂರಾತಿ ಆಗಿರುತ್ತದೆ. ಉಳಿಕೆ ೧೯ ಎಕರೆ ೨೪ ಗುಂಟೆ ಲಭ್ಯವಿರುವುದಾಗಿ ಹೇಳಿದರು.
ಈ ಎರಡೂ ಸರ್ವೇ ನಂಬರ್‌ಗಳ ಸರ್ಕಾರಿ ಜಮೀನುಗಳು ಬಿ-ಖರಾಬಿನಲ್ಲಿ ದಾಖಲಾಗಿದ್ದು, ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿದೆ. ಶ್ರೀರಂಗಪಟ್ಟಣ ಸಮೀಪದ ಗಣಂಗೂರು ಟೋಲ್‌ಗೆ ಹತ್ತಿರದಲ್ಲಿದ್ದು, ಮೈಸೂರು ವಿಮಾನ ನಿಲ್ದಾಣಕ್ಕೆ ಸಮೀಪವಾಗಲಿದೆ. ಈ ಜಮೀನಿನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಬೇಕಾದ ವಿದ್ಯುಚ್ಛಕ್ತಿ, ನೀರಿನ ವ್ಯವಸ್ಥೆಯೂ ಇರುತ್ತದೆ ಎಂದರು.ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್, ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರಿಗೂ ಪತ್ರ ಬರೆದು ಗಮನಸೆಳೆದಿರುವುದಾಗಿ ನುಡಿದರು.
ಅಭಿವೃದ್ಧಿ ಯೋಜನೆಗೆ ಅಗತ್ಯವಿರುವ ಜಾಗಕ್ಕಾಗಿ ರಾಜಕೀಯ ಕದನ ನಡೆಸುವುದು ಬೇಡ. ಕುಮಾರಸ್ವಾಮಿ ಕೈಗಾರಿಕೆ ತರುವ ಇಚ್ಛಾಶಕ್ತಿ ಪ್ರದರ್ಶಿಸುವುದೇ ಆದಲ್ಲಿ ಜಾಗಕ್ಕೇನೂ ಕೊರತೆ ಇಲ್ಲ. ಅದಕ್ಕೆ ದಾಖಲೆ ಸಹಿತವಾಗಿ ನೀಡಿದ್ದೇನೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ದ್ವೇಷವನ್ನು ಮರೆತು ಎಲ್ಲರೂ ಒಟ್ಟಿಗೆ ಕೈಜೋಡಿಸಿದರೆ ಸೆಮಿಕಂಡಕ್ಟರ್ ಯೋಜನೆ ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾಕೇರ್ ಸೆಂಟರ್‌ನ್ನೂ ಮಂಡ್ಯಕ್ಕೆ ತರುವುದಕ್ಕೆ ಸಾಧ್ಯವಿದೆ ಎಂದು ಕೆ.ಆರ್.ರವೀಂದ್ರ ದೃಢವಾಗಿ ಹೇಳಿದರು.ಸರ್ಕಾರಿ ಗೋಮಾಳದ ಜಾಗವೇ ಇರುವಾಗ ಸೆಮಿಕಂಡಕ್ಟರ್ ಯೋಜನೆಗೆ ಹೊಸದಾಗಿ ಭೂಮಿ ಗುರುತಿಸುವ, ರೈತರಿಗೆ ಪರಿಹಾರ ಕೊಟ್ಟು ಸ್ವಾಧೀನಪಡಿಸಿಕೊಳ್ಳುವ ಅಗತ್ಯವೇ ಇರುವುದಿಲ್ಲ. ಯಾವುದೇ ಕಾನೂನು ತೊಡಕುಗಳಿಲ್ಲದೆ ಸರ್ಕಾರಿ ಗೋಮಾಳವನ್ನು ಕಂಪನಿಯವರಿಗೆ ಬಹಳ ಸುಲಭವಾಗಿ ಹಸ್ತಾಂತರಿಸಬಹುದಾಗಿದೆ ಎಂದರು.
ಗೋಷ್ಠಿಯಲ್ಲಿ ಎಂ.ಎಸ್.ಅಣ್ಣಯ್ಯ, ಶಿವರಾಮೇಗೌಡ, ನಾಗರಾಜು ಇದ್ದರು.