ನ್ಯಾಯಾಂಗ ನೌಕರರಿಗಾಗಿ ಬಿಡಿಎ ಸೈಟ್‌ ಮೀಸಲಿಡಿ: ನ್ಯಾ.ಅರವಿಂದ

KannadaprabhaNewsNetwork |  
Published : Feb 24, 2025, 12:34 AM IST
Jananjyothi 5 | Kannada Prabha

ಸಾರಾಂಶ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ನಿರ್ಮಿಸುವ ಬಡಾವಣೆಯಲ್ಲಿ ನಿವೇಶನ ಮತ್ತು ವಸತಿ ಸಮುಚ್ಚಯಗಳಲ್ಲಿ ಫ್ಲಾಟ್‌ಗಳನ್ನು ನ್ಯಾಯಾಂಗ ಸಿಬ್ಬಂದಿಗೆ ಮೀಸಲಿಡಲು ಆದ್ಯತೆ ನೀಡಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹಾಗೂ ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ನಿರ್ಮಿಸುವ ಬಡಾವಣೆಯಲ್ಲಿ ನಿವೇಶನ ಮತ್ತು ವಸತಿ ಸಮುಚ್ಚಯಗಳಲ್ಲಿ ಫ್ಲಾಟ್‌ಗಳನ್ನು ನ್ಯಾಯಾಂಗ ಸಿಬ್ಬಂದಿಗೆ ಮೀಸಲಿಡಲು ಆದ್ಯತೆ ನೀಡಬೇಕು ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಅರವಿಂದ ಕುಮಾರ್ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ನ್ಯಾಯಾಂಗ ಇಲಾಖಾ ನೌಕರರ ಸಂಘದ ಸುವರ್ಣ ಮಹೋತ್ಸವ ಪ್ರಯುಕ್ತ ಜ್ಞಾನಜ್ಯೋತಿ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 8ನೇ ರಾಜ್ಯಮಟ್ಟದ ಮಹಾ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ದಕ್ಷತೆಯಿಂದ ಕಾರ್ಯನಿರ್ವಹಿಸುವ ಸರ್ಕಾರಿ ಇಲಾಖೆಯಲ್ಲಿ ನ್ಯಾಯಾಂಗ ಇಲಾಖೆ ಸಹ ಒಂದಾಗಿದೆ. ಆರ್ಥಿಕವಾಗಿಯೂ ಸರ್ಕಾರಕ್ಕೆ ಲಾಭ ತಂದುಕೊಟ್ಟಿದೆ. ವಿವಿಧ ಪ್ರಕರಣಗಳಲ್ಲಿ ಪಕ್ಷಗಾರರಿಗೆ ನ್ಯಾಯಾಲಯಗಳು ವಿಧಿಸುವ ದಂಡಗಳಿಂದ ಕಳೆದ ಮೂರು ವರ್ಷದಲ್ಲಿ ಸುಮಾರು 1,044 ಕೋಟಿ ರು. ಆದಾಯ ಸರ್ಕಾರಕ್ಕೆ ಸೇರಿದೆ. ಅದರಲ್ಲಿ ಅರ್ಧ ಮೊತ್ತವನ್ನೂ ದಕ್ಷತೆಯಿಂದ ಕೆಲಸ ಮಾಡುವ ನ್ಯಾಯಾಂಗ ಇಲಾಖೆಯ ಸಿಬ್ಬಂದಿಗೆ ಸರ್ಕಾರ ವ್ಯಯಿಸುತ್ತಿಲ್ಲ. ಆದ್ದರಿಂದ ನ್ಯಾಯಾಂಗದ ಸಿಬ್ಬಂದಿಗೆ ಸರ್ಕಾರ ಮೂಲಭೂತ ಸೌಲಭ್ಯ ಕಲ್ಪಿಸಲು ಆದ್ಯತೆ ನೀಡಬೇಕು. ಕಾಲ ಕಾಲಕ್ಕೆ ಬಡ್ತಿ ಸಿಗುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಮಾತನಾಡಿ, ಎಲ್ಲ ಇಲಾಖೆಯಲ್ಲಿಯೂ ಕೆಲಸದ ಒತ್ತಡವಿದೆ. ಹೀಗಾಗಿ, ನ್ಯಾಯಾಂಗ ನೌಕರರು ಒತ್ತಡದಿಂದ ಕೆಲಸದ ದಕ್ಷತೆ ಹಾಳಾಗದಂತೆ ಎಚ್ಚರವಹಿಸಬೇಕಿದೆ. ನ್ಯಾಯಾಂಗ ನೌಕರರ ಭರ್ತಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಹೈಕೋರ್ಟ್ ನ್ಯಾಯಮೂರ್ತಿ ಕೆ.ಎಸ್.ಮುದಗಲ್ ಮಾತನಾಡಿ, ನ್ಯಾಯದೇವತೆ ಕೆಲಸದಲ್ಲಿ ಸಮಗ್ರತೆ ಮತ್ತು ವೈವಿಧ್ಯತೆ ಬಹಳ ಮುಖ್ಯ. ನ್ಯಾಯಾಂಗ ಇಲಾಖೆ ಸಿಬ್ಬಂದಿ ಇಲ್ಲದೆ ನ್ಯಾಯಾಂಗ ವ್ಯವಸ್ಥೆ ಮುನ್ನಡೆಯಲ್ಲ. ಇಲಾಖೆಯಲ್ಲಿ ಸಿಬ್ಬಂದಿಯ ಪಾತ್ರ ಬಹಳ ಮುಖ್ಯವಾದುದು ಎಂದು ಬಣ್ಣಿಸಿದರು.

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ನ್ಯಾಯಾಂಗ ಇಲಾಖೆಯಲ್ಲಿ ಶೇ.40ರಷ್ಟು ಸಿಬ್ಬಂದಿಯ ಕೊರತೆ ಇದೆ. ಆದರೂ ಯಾವುದೇ ಕೆಲಸವು ವಿಳಂಬವಾಗದಂತೆ ನಡೆಸಿಕೊಂಡು ಹೋಗಲಾಗುತ್ತಿದೆ. ಹುದ್ದೆ ಭರ್ತಿ ಮಾಡುವ ನಿಟ್ಟಿನಲ್ಲಿ ಸಂಘದ ಮಟ್ಟದಲ್ಲಿ ಮಾಡಬಹುದಾದ ಕೆಲಸವನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಸಿ.ಕಾಮೇಶ್ವರ್ ರಾವ್, ನ್ಯಾಯಾಂಗ ನೌಕರರ ಸಂಘದ ಅಧ್ಯಕ್ಷ ಎಚ್.ವಿ.ನಾಗೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಕೆ.ಪುರುಷೋತ್ತಮ್ ಉಪಸ್ಥಿತರಿದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...