ಹಗರಿಬೊಮ್ಮನಹಳ್ಳಿ: ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಚ್ಚರಿಯ ಬೆಳವಣಿಗೆಯೊಂದರಲ್ಲಿ ೮ನೇ ವಾರ್ಡ್ ಸದಸ್ಯೆ ಕೆ.ರೇಷ್ಮಾ ಸಿಕಂದರ್ ೧೩ ಮತಗಳನ್ನು ಪಡೆದು ಎರಡನೇ ಅವಧಿಗೆ ನೂತನ ಅಧ್ಯಕ್ಷರಾಗಿ ಚುನಾಯಿತರಾದರು.
ಬಿಜೆಪಿಯಿಂದ ವಿಪ್ ಜಾರಿಯಾಗಿದ್ದರೂ ಸದಸ್ಯರಾದ ಚನ್ನಮ್ಮ ವಿಜಯಕುಮಾರ್, ಮಲ್ಲೇಶ್ವರಿ ಭರತ್ ಮತ್ತು ಬೋವಿ ವೀರೇಶ್ ಚುನಾವಣೆಯಿಂದ ದೂರ ಉಳಿದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಸಂಸದ ಈ.ತುಕಾರಾಮ್ ಮತ ಚಲಾಯಿಸಿದರೆ, ಬಿಜೆಪಿ ಅಭ್ಯರ್ಥಿ ಪರವಾಗಿ ಶಾಸಕ ನೇಮರಾಜ್ ನಾಯ್ಕ ಮತ ಚಲಾಯಿಸಿದರು.
ಕಾಂಗ್ರೆಸ್‌ನ ರೇಷ್ಮಾ ಸಿಕಂದರ್ ೧೩ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ೯ ಮತಗಳನ್ನು ಪಡೆದ ಬಿಜೆಪಿಯ ಬಣಕಾರ್ ಸುರೇಶ್ ಪರಾಭವಗೊಂಡರು. ಸಂಸದ ಈ.ತುಕಾರಾಮ್ ಮಾತನಾಡಿ, ಪುರಸಭೆಯ ಎಲ್ಲ ಸದಸ್ಯರ ವಿಶ್ವಾಸ ಪಡೆದು ಪಟ್ಟಣದ ಅಭಿವೃದ್ಧಿ ಸಾಧಿಸುವಂತೆ ಸೂಚಿಸಿದರು. ಮಾಜಿ ಶಾಸಕ ಭೀಮಾನಾಯ್ಕ, ಸದಸ್ಯ ಪವಾಡಿ ಹನಮಂತಪ್ಪ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋರಿ ಗೋಣಿಬಸಪ್ಪ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್, ಹಾಲ್ದಾಳ್ ವಿಜಯಕುಮಾರ್ ಇದ್ದರು.ಹಗರಿಬೊಮ್ಮನಹಳ್ಳಿಯ ಪುರಸಭೆಗೆ ನೂತನ ಅಧ್ಯಕ್ಷೆಯಾಗಿ ಗುರುವಾರ ಆಯ್ಕೆಯಾದ ರೇಷ್ಮಾ ಸಿಕಂದರ್ ಅವರನ್ನು ಕಾಂಗ್ರೆಸ್ ಮುಖಂಡರು ಅಭಿನಂದಿಸಿದರು.