ಮಳೆ ನಿಂತರೂ ನಿಲ್ಲದ ಬೆಂಗಳೂರು ಜನರ ಗೋಳು

KannadaprabhaNewsNetwork |  
Published : May 01, 2026, 01:45 AM IST
ಮಳೆ ಆವಾಂತರ | Kannada Prabha

ಸಾರಾಂಶ

ಬೇಸಿಗೆ ಕಾಲದ ಒಂದೆರೆಡು ತಾಸಿನ ಮಳೆಗೆ ಉದ್ಯಾನ ನಗರಿ ಬೆಂಗಳೂರು ತತ್ತರಿಸಿ ಹೋಗಿದ್ದು, ಮಳೆ ನಿಂತು 24 ತಾಸುಗಳು ಕಳೆದರೂ ನಗರವನ್ನು ಯಥಾಸ್ಥಿತಿಗೆ ತರಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಗಳು ವಿಫಲರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೇಸಿಗೆ ಕಾಲದ ಒಂದೆರೆಡು ತಾಸಿನ ಮಳೆಗೆ ಉದ್ಯಾನ ನಗರಿ ಬೆಂಗಳೂರು ತತ್ತರಿಸಿ ಹೋಗಿದ್ದು, ಮಳೆ ನಿಂತು 24 ತಾಸುಗಳು ಕಳೆದರೂ ನಗರವನ್ನು ಯಥಾಸ್ಥಿತಿಗೆ ತರಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಧಿಕಾರಗಳು ವಿಫಲರಾಗಿದ್ದಾರೆ.

ಮರಗಳು ಹಾಗೂ ವಿದ್ಯುತ್ ಕಂಬಗಳು ಬಿದ್ದ ಕಾರಣ ನಗರದ ಬಹುತೇಕ ಕಡೆ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಮಳೆ ನೀರಿಗೆ ಹರಿದು ಬಂದ ಕಸ, ತ್ಯಾಜ್ಯಗಳು ರಸ್ತೆಯಲ್ಲಿ ಎಲ್ಲೆಂದರಲ್ಲೇ ಬಿದ್ದಿದ್ದವು. ಗುರುವಾರ ರಾತ್ರಿಯಾದರೂ ತೆರವು ಕಾರ್ಯಾಚರಣೆ ಮುಗಿದಿರಲಿಲ್ಲ. ಮಳೆ ಅಧ್ವಾನ, ಜಿಬಿಎ ವೈಫಲ್ಯತೆಯಿಂದ ನಗರದ ಜನತೆ ಪರದಾಡುವಂತಾಗಿದ್ದು, ಸಾರ್ವಜನಿಕರು ಪಾಲಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಸಂಜೆ ಬಿರುಗಾಳಿ, ಆಲಿಕಲ್ಲು ಮಳೆಗೆ ನಗರದಲ್ಲಿ 226 ಮರಗಳು ಬುಡಸೇಮತ ಧರೆಗುರುಳಿವೆ. 623 ಮರಗಳ ರೆಂಬೆ ಕೊಂಬೆಗಳು ಬಿದ್ದಿವೆ. 186 ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, 36 ಟ್ರಾನ್ಸ್‌ಫರ್ಮರ್‌ಗಳು ಸುಟ್ಟು ಹೋಗಿವೆ. ಮರಗಳು, ಕಂಬಗಳು ಬಿದ್ದಿದ್ದರಿಂದ ನಗರದ ಅನೇಕ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಂಡು ವಾಹನ ಸವಾರರು ಪರದಾಡುವಂತಾಯಿತು. ಗುರುವಾರ ರಾತ್ರಿಯಾದರೂ ತೆರವು ಕಾರ್ಯಾಚರಣೆ ಮುಗಿದಿರಲಿಲ್ಲ. ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿದ್ದ ಸಂಚಾರ ಪೊಲೀಸರು ಪರ್ಯಾಯ ಮಾರ್ಗ ಕಲ್ಪಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣ ಹಾಗೂ ಕಾವೇರಿ ನಿವಾಸದ ಬಳಿ ಏಳು ಮರಗಳು ಧರೆಗುರುಳಿವೆ. ಕುಮಾರಕೃಪಾ ಅತಿಥಿ ಗೃಹದ ಒಳಗೆ ಹಾಗೂ ರಸ್ತೆಯಲ್ಲಿನ ಮರಗಳು ಉರುಳಿ ಬಿದ್ದಿವೆ. ಗಾಲ್ಫ್ ಮೈದಾನದ ಸುತ್ತ ನೆಟ್ ಕಟ್ಟಲು ಅಳವಡಿಸಿದ್ದ ಎತ್ತರದ ಕಬ್ಬಿಣದ ಕಂಬಗಳು ಸಿಎಂ ನಿವಾಸದ ಕಾಂಪೌಂಡ್ ಮೇಲೆ ಬಿದ್ದಿವೆ. ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವು ಮಾಡಬೇಕಿದ್ದ ಕಾರಣ ಕುಮಾರಕೃಪಾ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು.

ರೆಂಬೆ ಕೊಂಬೆಗಳು ಮುರಿದಿರುವುದು ಹಾಗೂ ಬುಡಸಮೇತ ಬಿದ್ದಿರುವ ಮರಗಳು ಸೇರಿ ಸುಮಾರು 850 ಮರಗಳು ಬಿದ್ದಿವೆ. 186 ವಿದ್ಯುತ್ ಕಂಬಗಳು, 36 ಕಡೆ ಟ್ರಾನ್ಸ್‌ಫರ್ಮರ್ ಸುಟ್ಟಿದ್ದ ಕಾರಣ ನಗರದ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು.

ಬೌರಿಂಗ್ ಆಸ್ಪತ್ರೆ ಕಾಂಪೌಂಡ್

ಕುಸಿತ: 2 ಎಂಜಿನಿಯರ್‌ ಸಸ್ಪೆಂಡ್‌

ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಜನ ಮೃತಪಟ್ಟು, 8 ಜನ ಗಾಯಗೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ನಗರ ಪಾಲಿಕೆಯ ಇಬ್ಬರು ಎಂಜಿನಿಯರ್‌ಗಳನ್ನು ಅಮಾನತುಗೊಳಿಸಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಗುರುವಾರ ಆದೇಶ ಹೊರಡಿಸಿದ್ದಾರೆ.

ವಸಂತ ನಗರ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್.ಟಿ. ರುದ್ರಮುನಿ ಹಾಗೂ ಶಿವಾಜಿನಗರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮೊಹಮ್ಮದ್ ಜಾವೇದ್ ಅಮಾನತುಗೊಂಡ ಅಧಿಕಾರಿಗಳು.

ಕುಸಿದಿರುವ ಕಾಂಪೌಡ್ ಆರೋಗ್ಯ ಇಲಾಖೆಯ ಅಧೀನದಲ್ಲಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಆದರೆ, ಸಾರ್ವಜನಿಕರು ನಿಂತಿದ್ದ ಪಾದಚಾರಿ ಮಾರ್ಗದ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಇಬ್ಬರು ಅಧಿಕಾರಿಗಳು ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವ ಕಾರಣ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಜನಾಕ್ರೋಶ ಪಾದಯಾತ್ರೆ, ಪ್ರತಿಭಟನಾ ಸಭೆ
ಸ್ವಾಮಿನಿಷ್ಠೆ, ನಿಸ್ವಾರ್ಥ ಸೇವೆಗೆ ಹೊಸ ಭಾಷ್ಯ ಬರೆದ ಹನುಮಂತ: ಶಿವಲಿಂಗ ಶಿವಾಚಾರ್ಯ ಶ್ರೀ