ಕುಕನೂರು: ಮೊಬೈಲ್ ದುರ್ಬಳಕೆಯಿಂದ ವಿದ್ಯಾರ್ಥಿಗಳು ಹಾಳಾಗಬಾರದು ಎಂದು ಪ್ರಾಚಾರ್ಯ ಈಶಪ್ಪ ಮಳಿಗಿ ಹೇಳಿದರು.
ಪಟ್ಟಣದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕಲಾ, ಮತ್ತು ವಾಣಿಜ್ಯ ಮತ್ತು ವಿಜ್ಞಾನ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪುಸ್ತಕಗಳ ಜತೆ ಒಡನಾಡ ಹೊಂದಬೇಕು. ಜ್ಞಾನದ ಸಂಪತ್ತು ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಬದುಕನ್ನು ತಪಸ್ಸಿನಂತೆ ಕಳೆಯಬೇಕು. ಸ್ಪಷ್ಟ ಗುರಿಯೊಂದಿಗೆ ನಿರಂತರ ಪರಿಶ್ರಮ ಮಾಡಿದರೆ ಯಶಸ್ಸು ಸಹಜವಾಗಿ ಲಭಿಸುತ್ತದೆ. ಇಂದಿನ ಆಧುನಿಕ ತಂತ್ರಜ್ಞಾನದಲ್ಲಿ ಜೀವನ ಹಾಳು ಮಾಡಿಕೊಳ್ಳುವುದನ್ನು ಬಿಟ್ಟು ಜ್ಞಾನದ ಹಾದಿಯಲ್ಲಿ ನಡೆಯಲು ಮುಂದಾಗಬೇಕು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಸಿಡಿಸಿ ಉಪಾಧ್ಯಕ್ಷ ಶ್ರೀನಿವಾಸ್ ದೇಸಾಯಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಹಿಂದೆ ಪೋಷಕರ ಶ್ರಮ, ತ್ಯಾಗ ಇರುವುದನ್ನು ಅರಿತುಕೊಳ್ಳಬೇಕು. ಜೀವನದಲ್ಲಿ ಉನ್ನತ ಗುರಿ ಇಟ್ಟುಕೊಂಡು ಶ್ರದ್ಧೆಯಿಂದ ಓದು, ಬರಹದಲ್ಲಿ ತೊಡಗಿದರೆ ಗುರಿ ತಲುಪುವುದು ಸಾಧ್ಯ. ಅವಕಾಶ ಎಲ್ಲರಿಗೂ ಸಿಗುತ್ತವೆ. ಆದರೆ, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದರು.
ಮಸಬಹಂಚಿನಾಳ ಪಿಯು ಕಾಲೇಜ್ ಪ್ರಾಚಾರ್ಯ ಮಾರುತಿ, ಗುರುಕುಲ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀಕಾಂತ್ ಕುಲಕರ್ಣಿ, ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಕಳಕಪ್ಪ ಕುಂಬಾರ್, ಚುಸಾಪ ಜಿಲ್ಲಾಧ್ಯಕ್ಷ ರುದ್ರಪ್ಪ ಭಂಡಾರಿ, ಪತ್ರಕರ್ತ ಕನಕರಾಯ ಭಜೆಂತ್ರಿ, ಉಪನ್ಯಾಸಕ ಭರಮಪ್ಪ ಸಾಬಳ್ಳಿ, ಜ್ಯೋತಿ ಮುಧೋಳ, ವಿದ್ಯಾರ್ಥಿಗಳು ಹಾಗೂ ಇತರರು ಇದ್ದರು.