ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ 177 ತಾಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಕೇಂದ್ರದ ಬರ ಪರಿಹಾರಕ್ಕೆ ಇರುವ ಪ್ರಕ್ರಿಯೆ ವಿಳಂಬವಾಗುವ ಹಿನ್ನೆಲೆಯಲ್ಲಿ ತುರ್ತು ಪರಿಹಾರ ಕ್ರಮಗಳಿಗಾಗಿ ಶೇಕಡ 50 ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ನೀಡಬೇಕು

ಬೆಂಗಳೂರು : ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ 177 ತಾಲೂಕುಗಳಲ್ಲಿ ಬರ ಘೋಷಣೆಯಾಗಿದೆ. ಕೇಂದ್ರದ ಬರ ಪರಿಹಾರಕ್ಕೆ ಇರುವ ಪ್ರಕ್ರಿಯೆ ವಿಳಂಬವಾಗುವ ಹಿನ್ನೆಲೆಯಲ್ಲಿ ತುರ್ತು ಪರಿಹಾರ ಕ್ರಮಗಳಿಗಾಗಿ ಶೇಕಡ 50 ರಷ್ಟು ಹಣವನ್ನು ಮಧ್ಯಂತರ ಪರಿಹಾರವಾಗಿ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಮೊದಲು 101 ತಾಲೂಕುಗಳಲ್ಲಿ ಬರ

ಈ ಮೊದಲು 101 ತಾಲೂಕುಗಳಲ್ಲಿ ಬರ ಘೋಷಣೆಯಾಗಿದ್ದು, ₹3,705.30 ಕೋಟಿ ತಕ್ಷಣದ ಬರ ಪರಿಹಾರ ಒದಗಿಸುವಂತೆ ಕೇಂದ್ರವನ್ನು ಕೋರಲಾಗಿತ್ತು. ಇದೀಗ ಹೆಚ್ಚುವರಿ 76 ತಾಲೂಕುಗಳು ಘೋಷಿಸಿದ್ದು, ಒಟ್ಟು ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ. ತೀವ್ರ ಮಳೆ ಅಭಾವದಿಂದಾಗಿ ಈ ಸಂಖ್ಯೆ 200ಕ್ಕೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಡಿ.ಕೆ.ಶಿವಕುಮಾರ್‌ ವಿವರಣೆ ನೀಡಿದ್ದಾರೆ.

ಮಳೆ ಕೊರತೆಯಿಂದ ರಾಜ್ಯದಲ್ಲಿ 40 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ಹಾನಿ ಅಂದಾಜಿಸಲಾಗಿದೆ. ಅಲ್ಲದೆ, ಜಲಾಶಯದಲ್ಲಿ ನೀರಿನ ಅಲಭ್ಯತೆ, ಜಲವಿದ್ಯುತ್‌ ಉತ್ಪಾದನೆ ಕುಸಿತ, ಮೇವಿನ ಅಲಭ್ಯತೆ, ಅಂತರ್ಜಲ ಮರುಪೂರಣ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆ ಉಂಟಾಗಿದೆ. ಜಲಾಶಯ ನೀರಿನ ಮಟ್ಟ ಕುಸಿದಿದ್ದು ಅದರಲ್ಲೂ ಕಾವೇರಿ ಭಾಗದಲ್ಲಿ ಗಂಭೀರ ಸಮಸ್ಯೆ ತಲೆದೋರಿದೆ. ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗಲಿದೆ.

ರೈತರಿಗೆ ಇನ್‌ಪುಟ್‌ ಸಬ್ಸಿಡಿ

ಹೀಗಾಗಿ ರೈತರಿಗೆ ಇನ್‌ಪುಟ್‌ ಸಬ್ಸಿಡಿ, ಕುಡಿಯುವ ನೀರು ಸರಬರಾಜು, ಜಾನುವಾರುಗಳ ರಕ್ಷಣೆ, ಅಗತ್ಯ ಬರ ಪರಿಹಾರ ಕ್ರಮಗಳನ್ನು ತುರ್ತಾಗಿ ಕೈಗೊಳ್ಳಬೇಕಾಗಿದೆ. ಹೀಗಾಗಿ ಎಸ್‌ಡಿಆರ್‌ಎಫ್‌ ಎರಡನೇ ಕಂತನ್ನು ಮುಂಗಡವಾಗಿ ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಕೋರಿದ್ದಾರೆ.

ಇನ್ನು ಕೇಂದ್ರದಿಂದ ಎನ್‌ಡಿಆರ್‌ಎಫ್‌ ಅಡಿ ಬರ ಪರಿಹಾರ ನೀಡಲು ಇಂಟರ್‌ ಮಿನಿಸ್ಟರಲ್‌ ಸೆಂಟರ್‌ ಟೀಂ (ಐಎಂಸಿಟಿ) ರಾಜ್ಯಕ್ಕೆ ಬಂದು ಮೊದಲ ಹಂತದ ಹಾನಿ, ನಷ್ಟದ ಬಗ್ಗೆ ಅಧ್ಯಯನ ನಡೆಸಬೇಕು. ಬಳಿಕ ರಾಷ್ಟ್ರೀಯ ಕಾರ್ಯನಿರ್ವಹಣಾ ಸಮಿತಿಯ ಉಪಸಮಿತಿ ಎದುರು ವರದಿ ಸಲ್ಲಿಸಬೇಕು. ಅದನ್ನು ಉನ್ನತ ಮಟ್ಟದ ಸಮಿತಿ ಪರಿಗಣಿಸಿ ಮಂಜೂರಾತಿ ನೀಡಬೇಕು. ಇದೆಲ್ಲಾ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ತ್ವರಿತ ಪರಿಹಾರ ಕ್ರಮ ಕೈಗೊಳ್ಳಲು ಶೇ.50 ರಷ್ಟು ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ.