ಬಳ್ಳಾರಿ: ಶಿಷ್ಯವೇತನ ಹೆಚ್ಚಳಕ್ಕೆ ಆಗ್ರಹಿಸಿ ಇಲ್ಲಿನ ಬಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಥಾನಿಕ ವೈದ್ಯರು ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕಾರ್ಡ್) ನೇತೃತ್ವದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದರು. ಬೇರೆ ರಾಜ್ಯಗಳಲ್ಲಿ ಸ್ಥಾನಿಕ ವೈದ್ಯರು ಪಡೆಯುತ್ತಿರುವ ಶಿಷ್ಯವೇತನದ ಶೇ. 50ರಷ್ಟು ಸಹ ಕರ್ನಾಟಕದ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಸ್ಥಾನಿಕ ವೈದ್ಯರಿಗೆ ನೀಡುತ್ತಿಲ್ಲ. ಇದರಿಂದ ವೈದ್ಯರ ದೈನಂದಿನ ಖರ್ಚು-ವೆಚ್ಚಗಳು ಹಾಗೂ ಕುಟುಂಬ ನಿರ್ವಹಣೆ ಸಹ ಕಷ್ಟವಾಗಿದೆ. ದೀರ್ಘಾವಧಿ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ಶಿಷ್ಯವೇತನದಲ್ಲಿ ಮಾತ್ರ ಯಾವುದೇ ಬದಲಾವಣೆಯಾಗಿಲ್ಲ. ವೈದ್ಯಕೀಯ ಕೋರ್ಸ್‌ಗಳ ಶುಲ್ಕವು ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಅಧಿಕವಾಗಿದೆ. ಆದರೆ, ಸ್ಥಾನಿಕ ವೈದ್ಯರ ಶಿಷ್ಯವೇತನ ಹೆಚ್ಚಳದ ಬಗ್ಗೆ ಮಾತ್ರ ಸರ್ಕಾರ ಅತ್ಯಂತ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು. ಸ್ಥಾನಿಕ ವೈದ್ಯರಿಗೆ ಶಿಷ್ಯವೇತನ ಹೆಚ್ಚಿಸಬೇಕು ಎಂದು ಈಗಾಗಲೇ ಅನೇಕ ಬಾರಿ ಹೋರಾಟಗಳನ್ನು ನಡೆಸಲಾಗಿದೆ. ಕಪ್ಪುಪಟ್ಟಿ ಧರಿಸಿ ಕಾರ್ಯನಿರ್ವಹಿಸಿ, ನಮ್ಮ ಅಸಮಾಧಾನ ಹೊರ ಹಾಕಿದ್ದೇವೆ. ಆದರೆ, ರಾಜ್ಯ ಸರ್ಕಾರ ಈ ವರೆಗೆ ಸ್ಥಾನಿಕ ವೈದ್ಯರ ಸಮಸ್ಯೆಗಳತ್ತ ಗಮನ ನೀಡಿಲ್ಲ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆಂಟ್ ಡಾಕ್ಟರ್ಸ್ (ಕಾರ್ಡ್) ಸಂಘಟನೆಯ ಜಿಲ್ಲಾಧ್ಯಕ್ಷ ಡಾ.ಎನ್.ಸಿ. ಮಂಜುನಾಥ, ಉಪಾಧ್ಯಕ್ಷ ಡಾ. ನೂರಿ ತಬ್ಸುಮ್, ಡಾ. ಫಾರಾಜ್ ಖಾನ್, ಡಾ. ಶಿರಿಷ್ ಹಾಗೂ ಸ್ಥಾನಿಕ ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸ್ಥಾನಿಕ ವೈದ್ಯರ ಪ್ರತಿಭಟನೆಯಿಂದಾಗಿ ಇಲ್ಲಿನ ಬಿಮ್ಸ್ ಆಸ್ಪತ್ರೆಯ ರೋಗಿಗಳ ವೈದ್ಯಕೀಯ ಸೇವೆಯಲ್ಲಿ ಒಂದಷ್ಟು ವ್ಯತ್ಯಯವಾಗಿತ್ತು. ಪ್ರತಿಭಟನೆಯ ನಡುವೆಯೂ ಅನೇಕ ಸ್ಥಾನಿಕ ವೈದ್ಯರು ಸೇವೆಯಲ್ಲಿ ನಿರತರಾಗಿ ಮಾನವೀಯತೆ ಮೆರೆದರು. ರಾಜ್ಯ ಸರ್ಕಾರ ಕೂಡಲೇ ಶಿಷ್ಯವೇತನ ಹೆಚ್ಚಳಗೊಳಿಸಿ, ಸ್ಥಾನಿಕ ವೈದ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂಬ ಪ್ರಮುಖ ಬೇಡಿಕೆಯ ಹೋರಾಟ ಮುಂದುವರಿಯಲಿದೆ. ಹೋರಾಟದಲ್ಲಿ ಯಾವುದೇ ರಾಜಿಯಿಲ್ಲ ಎಂದು ಸಂಘಟನೆಯ ಪ್ರಮುಖರು ತಿಳಿಸಿದರು.