ತುಂಗಭದ್ರಾ ಬೋರ್ಡ್‌ನಿಂದ ಅನ್ಯಾಯವಾದರೂ ಬಿಜೆಪಿ ಸುಮ್ಮನಿರುವುದ್ಯಾಕೆ: ಶಿವರಾಜ ತಂಗಡಗಿ

KannadaprabhaNewsNetwork |  
Published : Aug 13, 2024, 12:52 AM IST
12ಕೆಪಿಎಲ್31 ಕೊಪ್ಪಳ ತಾಲೂಕಿನ ಮುನಿರಾಬಾದ್ ನಲ್ಲಿ ಜಲ ತಜ್ಞ ಕನ್ನಯ್ಯ ಅವರ ಜೊತೆಗೆ ಸಚಿವ ಶಿವರಾಜ ತಂಗಡಗಿ ಅವರು ಚರ್ಚೆ ಮಾಡುತ್ತಿರುವುದು. | Kannada Prabha

ಸಾರಾಂಶ

ಈಗ ಕೇಂದ್ರದ ಅಧೀನದಲ್ಲಿಯೇ ಇರುವ ತುಂಗಭದ್ರಾ ಬೋರ್ಡ್‌ನಿಂದಲೇ ಅನ್ಯಾಯವಾಗುತ್ತಿದ್ದರೂ ಯಾಕೆ ಸುಮ್ಮನಿದ್ದಾರೆ?.

ಬಿಜೆಪಿಯವರು ರಾಜಕಾರಣ ಮಾಡವುದನ್ನು ಬಿಡಲಿ

ನಮಗೂ ರಾಜಕಾರಣ ಮಾಡಲು ಬರುತ್ತೆಕನ್ನಡಪ್ರಭ ವಾರ್ತೆ ಕೊಪ್ಪಳ

ಬಿಜೆಪಿಯವರು ಕಿತ್ತು ಗುಡ್ಡೆ ಹಾಕಿದ್ದು ಅಷ್ಟರಲ್ಲಿಯೇ ಇದೆ. ಅವರು ಅಧಿಕಾರವಧಿಯಲ್ಲಿ ಏನು ಮಾಡಿದ್ದಾರೆ ಎನ್ನುವುದು ಗೊತ್ತಿದೆ. ಈಗ ಕೇಂದ್ರದ ಅಧೀನದಲ್ಲಿಯೇ ಇರುವ ತುಂಗಭದ್ರಾ ಬೋರ್ಡ್‌ನಿಂದಲೇ ಅನ್ಯಾಯವಾಗುತ್ತಿದ್ದರೂ ಯಾಕೆ ಸುಮ್ಮನಿದ್ದಾರೆ? ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಕಿಡಿಕಾರಿದರು.

ತುಂಗಭದ್ರಾ ಜಲಾಶಯದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಗಭದ್ರಾ ಬೋರ್ಡ್ ಯಾರ ವ್ಯಾಪ್ತಿಗೆ ಬರುತ್ತದೆ. ಇದರ ನಿರ್ವಹಣೆಯ ಹೊಣೆಯನ್ನು ಯಾರು ನೋಡಿಕೊಳ್ಳುತ್ತಾರೆ ಎನ್ನುವುದು ತಮಗೆ ಗೊತ್ತಿಲ್ಲವೇ ಎಂದು ಪ್ರಶ್ನೆ ಮಾಡಿದರು.

ತುಂಗಭದ್ರಾ ಬೋರ್ಡ್‌ನಿಂದ ಆಗುತ್ತಿರುವ ಅನ್ಯಾಯ ಸರಿಪಡಿಸಲು ನೀವೆಷ್ಟು ಪ್ರಯತ್ನ ಮಾಡಿದ್ದೀರಿ, ಎಷ್ಟು ಬಾರಿ ಕೇಂದ್ರಕ್ಕೆ ಪತ್ರ ಬರೆದಿದ್ದೀರಿ, ನಿಮ್ಮದೇ ಸರ್ಕಾರ ಇದೆ, ಅದನ್ನು ಯಾಕೆ ಸರಿ ಮಾಡುತ್ತಿಲ್ಲ ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.

ಈಗ ನಾನು ಅದರ ಬಗ್ಗೆ ಮಾತನಾಡಲು ಹೋಗುವುದಿಲ್ಲ, ಈ ಕ್ರಸ್ಟ್ ಗೇಟ್ ದುರಸ್ತಿಯಾಗಿ, ರೈತರ ಒಂದು ಬೆಳೆಗಾದರೂ ನೀರು ಕೊಡುವಂತಾಗಬೇಕಾಗಿದೆ. ಅದಾದ ಮೇಲೆ ಈ ಬಿಜೆಪಿಯವರ ಕುರಿತು ಮಾತನಾಡುತ್ತೇನೆ, ಬೋರ್ಡ್ ಬಗ್ಗೆ ಮಾತನಾಡುತ್ತೇನೆ ಎಂದರು ತಂಗಡಗಿ.

ಮಾಜಿ ಸಿಎಂ ಆಗಿರುವ ಜಗದೀಶ ಶೆಟ್ಟರ್‌, ಬಸವರಾಜ ಬೊಮ್ಮಾಯಿ ಹಾಗೂ ಪ್ರತಿಪಕ್ಷದ ನಾಯಕ ಆರ್. ಅಶೋಕ ಸಹ ಸರ್ಕಾರದ ಬೇಜವಾಬ್ದಾರಿಯಿಂದಲೇ ಕ್ರಸ್ಟ್ ದುರಂತ ನಡೆದಿದೆ ಎಂದು ಆರೋಪಿಸಿದ್ದಾರೆ. ಇಂತ ವಿಷಯದಲ್ಲಿಯೂ ರಾಜಕೀಯ ಮಾಡುವುದು ಸರಿಯಲ್ಲ ಎಂದರು.

ತುಂಗಭದ್ರಾ ಜಲಾಶಯ ಸ್ಥಳಕ್ಕೆ ಇಂದು ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಆಗಮಿಸಿದ್ದಾರೆ. ಅವರು ಸಹ ಮತ್ತೆ ರಾಜಕೀಯ ಮಾಡುವ ಬದಲು, ದುರಸ್ತಿ ಮಾಡುವುದಕ್ಕೆ, ರೈತರಿಗೆ ಅನುಕೂಲವಾಗುವುದಕ್ಕೆ ಏನು ಮಾಡಬೇಕು ಎಂದು ಸಲಹೆ ಮಾಡಬೇಕು. ಅದು ಬಿಟ್ಟು ಮತ್ತೆ ರಾಜಕೀಯ ಮಾಡಿದರೇ ಸುಮ್ಮನೇ ಕುಳಿತುಕೊಳ್ಳುವುದಿಲ್ಲ, ನಮಗೂ ರಾಜಕೀಯ ಮಾಡಲು ಬರುತ್ತದೆ ಮತ್ತು ಉತ್ತರ ಕೊಡಲು ಗೊತ್ತಿದೆ ಎಂದರು.

ಸಿಎಂ ಸಿದ್ದರಾಮಯ್ಯ ಅವರು ಖುದ್ದು ನಿಗಾವಹಿಸಿದ್ದಾರೆ. ಪ್ರತಿ 2-3 ಗಂಟೆಗೊಮ್ಮೆ ಕರೆ ಮಾಡಿ, ಮಾಹಿತಿ ಪಡೆಯುತ್ತಿದ್ದಾರೆ. ಆದಷ್ಟು ಬೇಗನೆ ದುರಸ್ತಿ ಮಾಡಿಸಿ ಎಂದೆಲ್ಲ ಮಾರ್ಗದರ್ಶನ ಮಾಡುತ್ತಿದ್ದಾರೆ.

ದಸರಾ ಉತ್ಸವ ಕುರಿತು ಸಭೆ ಇತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವನಾಗಿ ಭಾಗವಹಿಸಬೇಕಾಗಿತ್ತು, ಆದರೆ, ಸಿಎಂ ಸಿದ್ದರಾಮಯ್ಯ ಅವರೇ ಕರೆ ಮಾಡಿ, ನೀನು ಬರುವುದು ಬೇಡ, ತುಂಗಭದ್ರಾ ಜಲಾಶಯ ಸಮಸ್ಯೆಯನ್ನು ನೀಗಿಸುವುದಕ್ಕಾಗಿ ಅಲ್ಲಿಯೇ ಇರು ಎಂದು ಹೇಳಿದ್ದಾರೆ ಎಂದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ