ಕನ್ನಡಪ್ರಭ ವಾರ್ತೆ ಕಲಬುರಗಿ
ಇನ್ನು ಕುಡಿವ ನೀರಿಗೂ ತತ್ವಾರ, ಮಕ್ಕಳು ಮಲಗೋ ಕೋಣೆಗಳ ಕಸ ಗುಡಿಸೋರು ಗತಿ ಇಲ್ಲ, ಶೌಚಗೃಹಗಳಿದ್ದರೂ ನೀರಿನ ಅಭಾವದಿಂದ ಯಾವುದೂ ಸ್ವಚ್ಛವಿಲ್ಲ, ಕೆಲವು ಶೌಚಾಲಯಗಳಿಗೆ ಬಾಗಿಲೇ ಇಲ್ಲ.
ಇವೆಲ್ಲ ಮೇಲಿನ ಅಪಸವ್ಯಗಳು ಜೇವರ್ಗಿ ತಾಲೂಕಿನ ಕೋಳಕೂರ್ ಇಂದಿರಾ ಗಾಂಧಿ ವಸತಿ ಶಾಲೆ, ವಸತಿ ನಿಲಯವನ್ನು ತಿಕ್ಕಿ ಮುಕ್ಕುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾರೊಬ್ಬರೂ ಕೇಳೋರಿಲ್ಲ.ಈ ಶಾಲೆಗೆ ಕಲಬುರಗಿ ಲೋಕಾಯುಕ್ತ ತಂಡದ ಡಿವೈಎಸ್‌ಪಿ ಅಧಿಕಾರಿ ಗೀತಾ ಬೇನಾಳ ಭೇಟಿ ನೀಡಿದಾಗ ಕೋಳಕೂರು ವಸತಿ ಶಾಲೆ, ವಸತಿ ನಿಲಯದ ಹುಳುಕು, ಕೊಳಕುಗಳೆಲ್ಲವೂ ಬಯಲಿಗೆ ಬಂದವು. ಸಮಾಜ ಕಲ್ಯಣ ಇಲಾಖೆಯ ಜಂಟಿ ನಿರ್ದೇಶಕರ ಹಂತದಲ್ಲಿ ಉಸ್ತುವಾರಿ ಇರುವ ಈ ಶಾಲೆಯಲ್ಲಿನ ಅವ್ಯವಸ್ಥೆ ಕಂಡು ಲೋಕಾ ಅಧಿಕಾರಿಗಳೇ ದಂಗಾದರು.
ವಿದ್ಯಾರ್ಥಿಗಳು/ವಿದ್ಯಾರ್ಥಿನಿಯರು ಶೌಚಕ್ಕೆ ಹೊರಗಡೇ ಹೋಗುತ್ತಿರುವುದು ಕಂಡು ಬಂದಿರುತ್ತದೆ. ಕೆಲವು ಶೌಚಾಲಯಗಳಿಗೆ ಬಾಗಿಲುಗಳು ಇರುವುದಿಲ್ಲ. ಸ್ಟಾಕ್ ರೆಜಿಸ್ಟರ್ ಪರಿಶೀಲಿಸಲಾಗಿ ಅದರ ಅನುಗುಣವಾಗಿ ದಿನಸಿಗಳು ಹಾಗೂ ಇತರೇ ಸಾಮಾನುಗಳು ಇಲ್ಲದೇ ಇರುವುದು ಕಂಡು ಬಂದಿರುತ್ತದೆ ಎಂದು ಈ ಶಾಲೆಗೆ ಭೇಟಿ ನೀಡಿರುವ ಕಲಬುರಗಿ ಲೋಕಾಯುಕ್ತ ಡಿವೈಎಸ್ಪಿ ಗೀತಾ ಬೇನಾಳ್ ಹೇಳಿದ್ದಾರೆ.
ಕೋಳಕೂರ್ ಗ್ರಾಮದ ಅಂಗನವಾಡಿ-1 ಹಾಗೂ ಅಂಗನವಾಡಿ-4ಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿ, ಹಾಜರಾತಿ ಪುಸ್ತಕದಲ್ಲಿ ಅನುಕ್ರಮವಾಗಿ ಸುಮಾರು 30 & 25 ಮಕ್ಕಳ ಹಾಜಾರಾತಿ ತೋರಿಸಿದ್ದು, ಯಾವುದೇ ವಿದ್ಯಾರ್ಥಿಗಳು ಅಂಗನವಾಡಿ ಕೇಂದ್ರದಲ್ಲಿ ಕಂಡು ಬರಲೇ ಇಲ್ಲವೆಂದು ಡಿವೈಎಸ್ಪಿ ಗೀತಾ ಬೇನಾಳ ಅವರು ಜಿಲ್ಲಾ ಅಧೀಕ್ಷಕರಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದ್ದಾರೆ.
ಅಡುಗೆ ಅನಿಲ ಹಾಗೂ ಸ್ಟವ್ ಸುಮಾರು ದಿನಗಳಿಂದ ಬಳಸದೇ ಹಾಗೆಯೇ ಇಟ್ಟಿರುವುದು ಕಂಡು ಬಂದಿರುತ್ತದೆ. ಮೇಲ್ವಿಚಾರಕರು ಹಾಗೂ ಹಿರಿಯ ಅಧಿಕಾರಿಗಳು ಕಾಲ-ಕಾಲಕ್ಕೆ ಭೇಟಿ ನೀಡದೇ ಇರುವುದರಿಂದ ಅಡುಗೆ ಸಹಾಯಕಿಯರು ದಿನಸಿಗಳನ್ನು ತಮ್ಮ ಸ್ವಂತಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ಸಂಶಯ ಮೂಡುವಂತಿದೆ ಎಂದೂ ಡಿವೈಎಸ್ಪಿ ಗೀತಾ ಹೇಳಿದ್ದಾರೆ.