ಕನ್ನಡಪ್ರಭ ವಾರ್ತೆ ಕೋಲಾರ ರಾಜ್ಯದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾದರಿಯಲ್ಲಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕಾಗಿ ವಸತಿ ಶಾಲೆಗಳನ್ನು ತೆರೆಯಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದರು.ನಗರದ ಹೊರವಲಯದ ನಾರಾಯಣಿ ಕನ್ವೆನ್ಷನ್ ಹಾಲ್‌ನಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ರಾಜ್ಯ ಅಸಂಘಟಿತ ಕಾರ್ಮಿಕ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ ಹಾಗೂ ಜಿಪಂನಿಂದ ಜಿಲ್ಲೆಯ ಅಸಂಘಟಿತ ವರ್ಗಗಳ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರಿಗಾಗಿ ಹಲವು ಯೋಜನೆ ಅಸಂಘಟಿತ ವಲಯದ ಕಾರ್ಮಿಕರ ಜೀವನ ಭದ್ರತೆಗೆ ನೆರವಾಗುವಂತಹ ಹತ್ತು ಹಲವು ಯೋಜನೆ, ಕಾರ್ಯಕ್ರಮಗಳನ್ನು ರಾಜ್ಯಸರ್ಕಾರ ರೂಪಿಸಿದೆ. ಗಿಗ್ ಬಿಲ್, ಸಿನಿ ಬಿಲ್, ಸಾರಿಗೆ ಬಿಲ್, ಆಶಾ ದೀಪ ಯೋಜನೆ, ಅಂಬೇಡ್ಕರ್ ಸಹಾಯ ಹಸ್ತ ಯೋಜನೆ, ಹೊರಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ಪ್ರಮುಖ ಯೋಜನೆಗಳಾಗಿವೆ. ಅಸಂಘಟಿತ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವಂತೆ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲಾಗುತ್ತಿದೆ ಎಂದರು.ರಾಜ್ಯ ಸರ್ಕಾರ ೨ ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ರಾಜ್ಯದ ಮೂಲೆಮೂಲೆಗೂ ತಲುಪುತ್ತಿವೆ. ತಲಾ ಆದಾಯ, ಜಿಡಿಪಿಯಲ್ಲಿ ರಾಜ್ಯ ಅಗ್ರಸ್ಥಾನದಲ್ಲಿದೆ. ಜಿ.ಎಸ್.ಟಿ ಸಂಗ್ರಹದಲ್ಲಿ ದೇಶದಲ್ಲಿಯೇ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂದು ಸಚಿವರು ತಿಳಿಸಿದರು.
ಕಾರ್ಮಿಕ ಭವನ ನಿರ್ಮಾಣ ಮಾಡಿ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಾತನಾಡಿ, ೯೧ ಕಾರ್ಮಿಕ ವರ್ಗಗಳನ್ನು ಗುರುತಿಸಿ ಸರ್ಕಾರದ ಯೋಜನೆಗಳನ್ನು ಜಾರಿಗೆ ತಂದಿದೆ. ಕೆಜಿಎಫ್, ಬಂಗಾರಪೇಟೆ ಭಾಗದಿಂದ ಪ್ರತಿನಿತ್ಯ ಸುಮಾರು ೨೫ ಸಾವಿರ ಯುವಕ ಯುವತಿಯರು, ಬಡವರು ಕೆಲಸಕ್ಕಾಗಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಾರೆ. ಕೆಜಿಎಫ್ ಭಾಗದಲ್ಲಿ ಚಿನ್ನದ ಗಣಿ ಮುಚ್ಚಿದ ನಂತರ ಅನೇಕರು ನಿರುದ್ಯೋಗಿಗಳಾಗಿದ್ದಾರೆ ಅವರಿಗೆ ಕಾರ್ಮಿಕ ಭವನ ನಿರ್ಮಾಣ ಮಾಡಿಕೊಡಲು ಮತ್ತು ಅವರ ಮಕ್ಕಳಿಗೆ ವಸತಿ ಶಾಲೆ ನಿರ್ಮಿಸಿಕೊಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು,ನಮ್ಮ ಕ್ಷೇತ್ರಕ್ಕೆ ಕಾರ್ಮಿಕ ವಸತಿ ಶಾಲೆ ಮಂಜೂರು ಮಾಡಿಕೊಟ್ಟಿದ್ದಾರೆ, ೩೬ ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ ನಾವು ಈಗಾಗಲೇ ೧೦ ಎಕರೆ ಜಾಗವನ್ನು ಗುರುತಿಸಿದ್ದೇವೆ. ಅದರಲ್ಲಿ ಸ್ಮಾರ್ಟ್ ತರಗತಿಗಳನ್ನು ಪ್ರಾರಂಭಿಸಲು ವಿಶೇಷ ಆದ್ಯತೆ ನೀಡಿ ಇನ್ನೂ ೧೫ ಕೋಟಿ ರುಪಾಯಿ ಅನುದಾನ ಬಿಡುಗಡೆ ಮಾಡಲು ಮನವಿ ಮಾಡಿದರು. ಕಾರ್ಮಿಕರೆಂದು ಪರಿಗಣಿಸಿ
ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಅನೇಕ ಮಹಿಳೆಯರು ಹಿರಿಯರು ಪ್ರತಿದಿನ ತೋಟದಲ್ಲಿ ಕೂಲಿ ಕೆಲಸಕ್ಕೆ ಹೋಗುವವರನ್ನು ತಾವು ಕಾರ್ಮಿಕರು ಎಂದು ಪರಿಗಣಿಸಬೇಕು, ಮಾಲೂರು ಕ್ಷೇತ್ರದಲ್ಲಿಯೂ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆಯನ್ನು ಮಂಜೂರು ಮಾಡಿದ್ದು, ಮುಂದಿನ ತಿಂಗಳು ಸಿಎಂ ಸಿದ್ದರಾಮಯ್ಯ ಭೂಮಿಪೂಜೆ ಮಾಡಲಿದ್ದಾರೆ ಎಂದರು.ಶಾಸಕ ಡಾ.ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ಇತ್ತೀಚೆಗೆ ಜಿಲ್ಲೆಯಲ್ಲಿ ಕೈಗಾರಿಕೆ ಕ್ಷೇತ್ರ ಅಭಿವೃದ್ಧಿಯತ್ತ ಸಾಗುತ್ತಿದೆ. ಹಿಂದೆ ಸಂಘಟಿತ ಕಾರ್ಮಿಕರಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ದೊರೆಯುತ್ತಿತ್ತು. ಪ್ರಸ್ತುತ ರಾಜ್ಯಸರ್ಕಾರ ಅಸಂಘಟಿತ ಕಾರ್ಮಿಕರ ಹಿತರಕ್ಷಣೆಗೆ ಮುಂದಾಗಿದೆ ಎಂದರು.ಸಮಾರಂಭದಲ್ಲಿ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಕೆ.ಎಂ, ಎಂಎಲ್ಸಿ ಎಂ.ಎಲ್.ಅನಿಲ್ ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ ರಮೇಶ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ.ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಜಿಪಂ ಸಿಇಓ ಡಾ.ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾ ರಕ್ಷಣಾಧಿಕಾರಿ ಡಾ.ಬಿ.ನಿಖಿಲ್, ಕೂಡಾ ಅಧ್ಯಕ್ಷ ಮೊಹಮ್ಮದ್ ಹನಿಫ್, ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷ್ಮಿ ಮತ್ತಿತರರು ಇದ್ದರು.