ಕನ್ನಡಪ್ರಭ ವಾರ್ತೆ ಮೈಸೂರು
ಅಸೋಸಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್ ನ್ಯಾಷನಲ್‌ನ ಪ್ರಿನ್ಸ್, ನಾಲ್ವಡಿ, ಕಿಂಜಾಲ, ಕೃಷ್ಣದೇವರಾಯ ಹಾಗೂ ಬನ್ನೂರು ಕ್ಲಬ್‌ಗಳ ಪದಗ್ರಹಣ ಸಮಾರಂಭ ನಗರದ ಹೆಬ್ಬಾಳು ವರ್ತುಲ ರಸ್ತೆಯ ಕಲ್ಯಾಣಿ ಸಭಾಂಗಣದಲ್ಲಿ ನಡೆಯಿತು.ಜಿಲ್ಲಾ ಗೌರ್ನರ್ ಎಸ್. ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಲಯನ್ಸ್ ಕ್ಲಬ್ ಮೂಲಕ ಸಮಾಜಸೇವೆ ಮಾಡಲು ಸಾಕಷ್ಟು ಅವಕಾಶಗಳಿವೆ. ಇದನ್ನು ಸದುಪಯೋಗ ಮಾಡಿಕೊಂಡು ಪ್ರತಿಯೊಂದು ಕ್ಲಬ್ ಕೂಡ ಜನರಿಗೆ ನೆರವಾಗಬೇಕು ಎಂದರು.
ಪದಗ್ರಹಣ ನೆರವೇರಿಸಿದ ಅಲಯನ್ಸ್ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜ ವಿ. ಬೈರಿ ಮಾತನಾಡಿ, ಬೇರೆ ಬೇರೆ ಕ್ಲಬ್‌ಗಳನ್ನು ವಿದೇಶಿಯರು ಸ್ಥಾಪಿಸಿ ನಮ್ಮ ದೇಶಕ್ಕೆ ಬಂದರೆ ಅಲಯನ್ಸ್ ಭಾರತೀಯರೇ ಸ್ಥಾಪಿಸಿ, 32 ದೇಶಗಳಿಗೆ ಪರಿಚಯಿಸಿದ್ದಾರೆ. ಬೇರೆ ಕ್ಲಬ್‌ಗಳು ಸದಸ್ಯತ್ವ ಶುಲ್ಕ ನೀಡಲಾಗದೇ ಮುಚ್ಚುತ್ತಿವೆ. ಆದರೆ ನಮ್ಮಲ್ಲಿ ವಾರ್ಷಿಕ ಶುಲ್ಕ ಕೇವಲ ಒಂದು ಸಾವಿರ ರು. ಮಾತ್ರ ಇದೆ. ಹೀಗಾಗಿ ಕರ್ನಾಟಕ ಸೇರಿದಂತೆ ಎಲ್ಲೆಡೆ ಶರವೇಗದಲ್ಲಿ ಕ್ಲಬ್‌ಗಳು ಬೆಳೆಯುತ್ತಿವೆ. ಸದಸ್ಯರ ಸಂಖ್ಯೆ ಹೆಚ್ಚಳವಾಗುತ್ತಿವೆ ಎಂದರು.ಸಮಾಜಸೇವೆ ಮಾಡಲು ಹಣ ಬೇಕಾಗಿಲ್ಲ. ಸಮಯ ಬೇಕು ಅಷ್ಟೇ. ನಾವು ಸಮಯ ಹೊಂದಾಣಿಕೆ ಮಾಡಿಕೊಂಡರೆ ಹಲವಾರು ಸಂಸ್ಥೆಗಳು ನೆರವಾಗಲು ಮುಂದೆ ಬರುತ್ತವೆ. ಜೊತೆಗೆ ಆಸ್ಪತ್ರೆಗಳು ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿಕೊಡುತ್ತವೆ. ಇದರ ಪ್ರಯೋಜನವನ್ನು ನಮ್ಮ ಕ್ಲಬ್ ಸದಸ್ಯರು ಪಡೆಯಬೇಕು ಎಂದು ಅವರು ಸಲಹೆ ಮಾಡಿದರು.
ಒಬ್ಬರೆ ಎಲ್ಲ ಕೆಲಸವನ್ನು ಮಾಡುವ ಬದಲು ಇಡೀ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಆಗ ಕ್ಲಬ್ ಜೊತೆಗೆ ಎಲ್ಲರೂ ಬೆಳೆಯುತ್ತಾರೆ. ಬೇರೆಯವರು ಹೊಗಳುವುದಕ್ಕಿಂತ ತಂಡದವರೇ ಹೊಗಳುವಂತೆ ಆಗಬೇಕು.ಅದೇ ರೀತಿ ಅಧ್ಯಕ್ಷರು ಇತರೆ ಸದಸ್ಯರ ಕಾರ್ಯಗಳನ್ನು ಶ್ಲಾಘಿಸಬೇಕು. ತಪ್ಪುಗಳಿದ್ದಲ್ಲಿ ಸಾರ್ವಜನಿಕವಾಗಿ ಹೇಳದೆ ವ್ಯಕ್ತಿಗತವಾಗಿ ಕರೆದು ಹೇಳಬೇಕು. ಪ್ರತಿ ತಿಂಗಳು ಸಭೆ ನಡೆಸಬೇಕು. ಲೆಕ್ಕಪತ್ರ ಸರಿಯಾಗಿಡಬೇಕು. ವಾರ್ಷಿಕ ಶುಲ್ಕವನ್ನು ಸಕಾಲಕ್ಕೆ ಪಾವತಿಸಬೇಕು ಎಂದರು.ನಿಕಟಪೂರ್ವ ಜಿಲ್ಲಾ ಗೌರ್ನರ್ ಸಿರಿ ಬಾಲು ಅವರು ಕ್ಲಬ್ಬಿನ ಇತಿಹಾಸವನ್ನು ಪರಿಚಯಿಸಿದರು. ಒಂದನೇ ಉಪ ರಾಜ್ಯಪಾಲ ಮಹಾಬಲೇಶ್ವರ ಬೈರಿ ಮಾತನಾಡಿದರು. ಮೂರನೇ ಉಪ ರಾಜ್ಯಪಾಲ ನ. ಗಂಗಾಧರಪ್ಪ, ಜಿಲ್ಲಾ ಕಾರ್ಯದರ್ಶಿ ಎನ್. ಬೆಟ್ಟೇಗೌಡ, ಖಜಾಂಚಿ ಕೃಷ್ಣೋಜಿರಾವ್, ಪಿಆರ್‌ಒ ಸಿ.ಬಿ. ಶ್ರೀಶೈಲ, ರಾಯಭಾರಿ ಡಿಆರ್‌ಎಸ್ ಗಣೇಶ್ ವಿಶೇಷ ಆಹ್ವಾನಿತರಾಗಿದ್ದರು.
ಪದಗ್ರಹಣವಾದ ಕ್ಲಬ್‌ಗಳ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಖಜಾಂಚಿಗಳ ವಿವರ ಈ ಕೆಳಕಂಡಂತಿದೆ:ಪ್ರಿನ್ಸ್- ಪುಟ್ಟಸ್ವಾಮಿ, ಅನಂತಲಕ್ಷ್ಮಿ, ಉದಯಶಂಕರ್. ನಾಲ್ವಡಿ- ಸುನೀತಾ ಬೆಟ್ಟೇಗೌಡ, ಶ್ರೀಲತಾ ಮನೋಹರ್, ಡಾ.ಪೂರ್ಣಿಮಾ.
ಕಿಂಜಾಲ- ಮೌಲ್ಯ ಜಯಕುಮಾರ್, ಆರ್. ರಘು, ಯು.ಪಿ. ಮನು. ಕೃಷ್ಣದೇವರಾಯ- ಪಿ.ವಿ. ಶ್ರೀನಿವಾಸ್ ರಮೇಶ್, ಡಾ.ಟಿ. ರಮೇಶ್, ರಾಕೇಶ್ ಅರಸ್ಬನ್ನೂರು- ನಾಗರಾಜ್, ಶಿವಕುಮಾರ್, ರಘುಗೌಡ.
ಇದೇ ಸಂದರ್ಭದಲ್ಲಿ ಶಿಕ್ಷಕರು, ವೈದ್ಯರು, ಎಂಜಿನಿಯರ್‌ಗಳು ಹಾಗೂ ಪತ್ರಿಕಾ ದಿನಾಚರಣೆ ಅಂಗವಾಗಿ ಆಯಾ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.ಉದ್ಯಮಿ ಸಂಜೀವಶೆಟ್ಟಿ, ಸಮಾಜ ಸೇವಕ ಕೆ. ರಘುರಾಂ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಅಂತಾರಾಷ್ಟ್ರೀಯ ಅಥ್ಲೆಟ್ ಎಂ. ಯೋಗೇಂದ್ರ, ಮೈವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ. ನಿಂಗರಾಜ್ ಗೌಡ, ನಿವೃತ್ತ ಪ್ರಾಧ್ಯಾಪಕ ಅಣ್ಣಾಜಿಗೌಡ. ನಾಗೇಂದ್ರ. ಬೋರೇಗೌಡ, ಮಹದೇವಸ್ವಾಮಿ, ಎಂ.ವಿ. ನಾಗೇಂದ್ರ ಬಾಬು, ಸಿ.ಎಸ್. ವಾಣಿ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.