ವಸತಿರಹಿತರಿಗೆ ಸೂರು ಕಲ್ಪಿಸಲು ನಿವಾಸಿಗಳ ಒತ್ತಾಯ

KannadaprabhaNewsNetwork |  
Published : Jan 17, 2025, 12:46 AM IST
16ಕೆಡಿವಿಜಿ7-ದಾವಣಗೆರೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್‌ರಿಗೆ ತಾಲೂಕಿನ ಕಬ್ಬೂರು ಗ್ರಾಮಸ್ಥರು ಮನವಿ ಅರ್ಪಿಸಿದರು. | Kannada Prabha

ಸಾರಾಂಶ

Villagers submit petition to Additional District Collector P.N. Lokesh to clear encroachment on Kabbur Gomal Lake

-ಕಬ್ಬೂರು ಗೋಮಾಳ ಕೆರೆ ಒತ್ತುವರಿ ತೆರವಿಗೆ ಗ್ರಾಮಸ್ಥರಿಂದ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್‌ ಅವರಿಗೆ ಮನವಿ ಸಲ್ಲಿಕೆ

----

ಕನ್ನಡಪ್ರಭ ವಾರ್ತೆ ದಾವಣಗೆರೆ

ಮಾಯಕೊಂಡ ಹೋಬಳಿ ಕಬ್ಬೂರು ಗ್ರಾಮದ ಕೆರೆ ಮತ್ತು ಸರ್ಕಾರಿ ಗೋಮಾಳ ಒತ್ತುವರಿ ಜಾಗವನ್ನು ನಿವೇಶನವಾಗಿ ಮಾಡಿ, ವಸತಿ ರಹಿತ ಬಡವರಿಗೆ ಮಂಜೂರು ಮಾಡುವಂತೆ ಗ್ರಾಮದ ಪರಿಶಿಷ್ಟ ಜಾತಿ-ಪಂಗಡಗಳ ನಿವಾಸಿಗಳು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.

ಕಬ್ಬೂರು ಗೋಮಾಳದಲ್ಲಿ ದನ-ಕರುಗಳು, ಕುರಿ, ಮೇಕೆಗಳು, ಹಕ್ಕಿ ಪಕ್ಷಿಗಳು ಆಹಾರಕ್ಕಾಗಿ ಆದಾರವಾಗಿರುತ್ತವೆ. ಆದರೆ, ರಾಜಕೀಯ ಬಲ ಹೊಂದಿರುವ ಕೆಲವು ದಂಧೆಕೋರರು ಅಕ್ರಮವಾಗಿ ಮಣ್ಣು ಮಾಫಿಯಾ ಮಾಡಿಕೊಂಡು, 8-10 ಅಡಿ ಆಳದವರೆಗೆ ಜೆಸಿಬಿ ಮತ್ತು ಟ್ರ್ಯಾಕ್ಟರ್‌ಗಳಿಂದ ಮಣ್ಣು ಅಗೆದು, ಸಾಗಾಟ ಮಾಡುತ್ತಿರುವುದನ್ನು ತಡೆಯಬೇಕು ಎಂದು ಅವರು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್‌ರಿಗೆ ಡಿಸಿ ಕಚೇರಿಯಲ್ಲಿ ಭೇಟಿ ಮಾಡಿ, ಮನವಿ ಅರ್ಪಿಸಿದರು.

ಇದೇ ವೇಳೆ ಮಾತನಾಡಿದ ಮುಖಂಡರು, ಜ.10ರ ತಡರಾತ್ರಿ ತಮ್ಮ ಪೂರ್ವಜರ ಸಮಾಧಿಗಳನ್ನು ನಾಶಪಡಿಸಿ, ಅಲ್ಲಿದ್ದ ಅಸ್ಥಿಪಂಜರಗಳನ್ನು ಯಾವುದೇ ಕುರುಹು ಸಿಗದಂತೆ ಮಾಡಿ, ಮಣ್ಣನ್ನು ಸಾಗಾಟ ಮಾಡಿದ್ದಾರೆ. ಮಾರನೆಯ ದಿನ ಬೆಳಿಗ್ಗೆ ಜೆಸಿಬಿ ಮತ್ತು ಟ್ರ್ಯಾಕ್ಟರ್ ಮಾಲೀಕರು, ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಗ್ರಾಪಂ ಪಿಡಿಒ, ಕಾರ್ಯದರ್ಶಿ, ಗ್ರಾಮ ಲೆಕ್ಕಾಧಿಕಾರಿಗೆ ವಿರುದ್ಧ ಮಾಯಕೊಂಡ ಪೊಲೀಸ್ ಠಾಣೆಗೆ ದೂರು ನೀಡಿದ್ದೆವು ಎಂದರು.

ಮೇಲಾಧಿಕಾರಿಗಳು ಮಣ್ಣು ದಂಧೆಗೆ ಸಾಥ್ ನೀಡಿದ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳದೇ, ಕೇವಲ ದಂಧೆಕೋರರ ಮೇಲೆ ಕೆರೆ ಮತ್ತು ಗೋಮಾಳ ಮಣ್ಣು, ಕಳ್ಳತನ ಕೇಸ್ ದಾಖಲಿಸಿ, ಎಫ್ಐಆರ್ ಮಾಡಿ, ಸ್ಮಶಾನ ಕಾಮಗಾರಿ ಕೈಗೊಂಡಿದ್ದಾರೆ. ಗೋಮಾಳದಲ್ಲಿ 1992ರಲ್ಲಿ ಸ್ಮಶಾನ ಮಂಜೂರಾದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡದೇ, ಯಾವುದೇ ಕಾಮಗಾರಿ ಫಲಕ ಅಳವಡಿಸದೇ, ಸಾರ್ವಜನಿಕ ಪ್ರಕಟಣೆ ಹೊರಡಿಸದೇ, ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಅವರು ಆರೋಪಿಸಿದರು.

ತಮ್ಮ ಹಿರಿಯರು ಅನಕ್ಷರಸ್ಥರಾಗಿದ್ದು, ಸ್ಮಶಾನ ಮಂಜೂರಾಗುವ ಪೂರ್ವದಲ್ಲೇ 1992ಕ್ಕಿಂತ ಮುಂಚೆಯೇ ಉತ್ತರ ದಿಕ್ಕಿನ ಕಡೆಗೆ ಅಂತ್ಯ ಸಂಸ್ಕಾರ ಮಾಡಿಕೊಂಡು ಬಂದಿದ್ದಾರೆ. ತಮ್ಮ ಪೂರ್ವಜರ ಸಮಾಧಿ ಇರುವ ಪ್ರದೇಶ‍ನ್ನೇ ಸ್ಮಶಾನವಾಗಿ ಮಾಡಿಕೊಡಬೇಕು. ಜಮೀನನ್ನು ಕೆಲವು ಪ್ರಭಾವಿಗಳು ಅಕ್ರಮವಾಗಿ ಒತ್ತುವರಿ ಮಾಡಿ, ಅಡಿಕೆ, ತೆಂಗು ಇತರೆ ಬೆಳೆದಿದ್ದಾರೆ. ಗೋಮಾಳ ಸರ್ವೇ ಮಾಡಿ, ಹದ್ದುಬಸ್ತು ಮಾಡಬೇಕು. ಕಬ್ಬೂರಿನಲ್ಲಿ 2011ರ ಗಣತಿ ಪ್ರಕಾರ 500 ಕುಟುಂಬ, 2,500ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದು, ಈಗ ಅದರ ದುಪ್ಪಟ್ಟು ಕುಟುಂಬ ವಾಸವಾಗಿವೆ ಎಂದು ಅವರು ತಿಳಿಸಿದರು.

ಅಂತಹ ಕುಟುಂಬಗಳಿಗೆ ಸೂರು, ನಿವೇಶನ ಯಾವುದೂ ಇಲ್ಲ. ಅದರಲ್ಲಿ ಪರಿಶಿಷ್ಟರು, ಹಿಂದುಳಿದ ವರ್ಗ, ಇತರೆ ಜನಾಂಗದವರ ಸಂಖ್ಯೆ ಹೆಚ್ಚು. ಸುಮಾರು 4500 ಜನಸಂಖ್ಯೆ ಇದೆ. ಈ ಪೈಕಿ ಅನೇಕ ಕುಟುಂಬಕ್ಕೆ ನಿವೇಶನ, ಮನೆ ಇಲ್ಲ. ಗೋಮಾಳದ ಜಾಗದಲ್ಲಿ 15 ಎಕರೆ ನಿವೇಶನ ಮಾಡಿ, ಹಂಚಿಕೆ ಮಾಡುವಂತೆ ಜಿಲ್ಲಾಡಳಿತ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಗೆ ಗ್ರಾಮಸ್ಥರು ಮನವಿ ಅರ್ಪಿಸಿದರು.

ಗ್ರಾಮದ ಮಂಜುನಾಥ.ವೈ.ಕಬ್ಬೂರು, ಚಂದ್ರಪ್ಪ ಕಬ್ಬೂರು, ಎನ್.ಎಂ.ಕೋಟೆಪ್ಪ, ಕೆ.ಪಿ.ರಾಮಸ್ವಾಮಿ, ಧರ್ಮಣ್ಣ, ಪ್ರಸನ್ನ, ಮಲ್ಲಿಕಾರ್ಜುನ, ಧನ್ಯಕುಮಾರ, ಕೆ.ಎನ್.ಗುರುಮೂರ್ತಿ, ಎಲ್.ಪಿ.ರಾಮಸ್ವಾಮಿ, ಎನ್.ಶಿವಕುಮಾರ, ಎನ್.ಎಂ.ಕೋಟಿ ಇತರರು ಇದ್ದರು.

...............

ಕ್ಯಾಪ್ಷನ್ : 16ಕೆಡಿವಿಜಿ7-ದಾವಣಗೆರೆಯಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್‌ ಅವರಿಗೆ ತಾಲೂಕಿನ ಕಬ್ಬೂರು ಗ್ರಾಮಸ್ಥರು ಮನವಿ ಅರ್ಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೇಂದ್ರದಿಂದ ಯಲ್ಲಮ್ಮನಗುಡ್ಡಕ್ಕೆ ₹118 ಅನುದಾನ
ಮಡಿಕೇರಿಯ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಶಿಕ್ಷಕರ ಸಹಪಠ್ಯ ಸ್ಪರ್ಧಾ ಕಾರ್ಯಕ್ರಮ